ಶೆನ್‌ಜೆನ್ (ಚೀನಾ): ಭಾರತದ ಯುವ ಆಟಗಾರ್ತಿ ಅನುಪಮಾ ಉಪಾಧ್ಯಾಯ ಅವರು ಚೀನಾ ಮಾಸ್ಟರ್ಸ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನ ಆರಂಭಿಕ ಸುತ್ತಿನಲ್ಲಿ ವಿಶ್ವದ 15ನೇ ಕ್ರಮಾಂಕದ ಬೀವೆನ್ ಜಾಂಗ್ ಅವರಿಗೆ ಆಘಾತ ನೀಡಿದರು.
ಅಲ್ಮೋರಾದ 19 ವರ್ಷ ವಯಸ್ಸಿನ ಆಟಗಾರ್ತಿ ಮಂಗಳವಾರ ನಡೆದ ಪಂದ್ಯದಲ್ಲಿ 21-17, 8-21, 22-20ರಲ್ಲಿ ಮೂರು ಸುತ್ತಿನ ಹೋರಾಟದಲ್ಲಿ ಅಮೆರಿಕದ ಆಟಗಾರ್ತಿಯನ್ನು ಹಿಮ್ಮೆಟ್ಟಿಸಿದರು. ವಿಶ್ವ ರ‍್ಯಾಂಕಿಂಗ್‌ನಲ್ಲಿ 50ನೇ ಸ್ಥಾನದಲ್ಲಿರುವ ಅನುಪಮಾ 48 ನಿಮಿಷದಲ್ಲಿ ಎದುರಾಳಿಯನ್ನು ಮಣಿಸಿ ಎರಡನೇ ಸುತ್ತು ಪ್ರವೇಶಿಸಿದರು.
ವರ್ಷದ ಆರಂಭದಲ್ಲಿ ಕಜಕಿಸ್ತಾನ ಇಂಟರ್‌ನ್ಯಾಷನಲ್ ಚಾಲೆಂಜ್ ಮತ್ತು ಪೋಲಿಷ್ ಓಪನ್ ಪ್ರಶಸ್ತಿ ಗೆದ್ದಿದ್ದ ಅನುಪಮಾ ಮುಂದಿನ ಸುತ್ತಿನಲ್ಲಿ ಜಪಾನ್‌ನ ನಟ್ಸುಕಿ ನಿದೈರಾ ಅವರನ್ನು ಎದುರಿಸಲಿದ್ದಾರೆ.
ಸುಮೀತ್ ರೆಡ್ಡಿ ಮತ್ತು ಎನ್.ಸಿಕ್ಕಿ ರೆಡ್ಡಿ ಜೋಡಿಯು ಮಿಶ್ರ ಡಬಲ್ಸ್‌ನಲ್ಲಿ ಎರಡನೇ ಸುತ್ತಿಗೆ ಮುನ್ನಡೆಯಿತು. ಈ ಜೋಡಿಯು 23-21, 17-21, 21-17ರಿಂದ ಅಮೆರಿಕದ ಪ್ರೀಸ್ಲೆ ಸ್ಮಿತ್ ಮತ್ತು ಜೆನ್ನಿ ಗೇ ಅವರನ್ನು ಮಣಿಸಿತು. ಮುಂದಿನ ಸುತ್ತಿನಲ್ಲಿ ಎರಡನೇ ಶ್ರೇಯಾಂಕದ ಚೀನಾದ ಫೆಂಗ್ ಯಾನ್ ಝೆ ಮತ್ತು ಹುವಾಂಗ್ ಡಾಂಗ್ ಪಿಂಗ್ ಅವರನ್ನು ಎದುರಿಸಲಿದೆ.
ಪುರುಷರ ಸಿಂಗಲ್ಸ್‌ನಲ್ಲಿ ಪ್ರಿಯಾಂಶು ರಾಜಾವತ್ ನಿರಾಸೆ ಅನುಭವಿಸಿದರು. ವಿಶ್ವದ 34ನೇ ಕ್ರಮಾಂಕದ ರಾಜಾವತ್ 24-22, 13-21, 18-21ರಿಂದ ಚಿಕೊ ಔರಾ ದ್ವಿ ವಾರ್ಡೋಯೊ (ಇಂಡೊನೇಷ್ಯಾ) ಅವರ ವಿರುದ್ಧ ಪರಾಭವಗೊಂಡರು.
ಭಾರತದ ಅಗ್ರ ಆಟಗಾರರಾದ ಲಕ್ಷ್ಯ ಸೇನ್, ಪಿ.ವಿ. ಸಿಂಧು ಹಾಗೂ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಬುಧವಾರ ಅಭಿಯಾನ ಆರಂಭಿಸುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.