ನವದೆಹಲಿ: ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಲಿದ್ದ ಅರುಣಾಚಲ ಪ್ರದೇಶದ ವುಶು ಅಥ್ಲೀಟ್‌ಗಳಿಗೆ ಚೀನಾ ವೀಸಾ ನಿರಾಕರಿಸಿರುವುದು ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಏಷ್ಯನ್ ಗೇಮ್ಸ್ ಸಮಾರಂಭದಲ್ಲಿ ಭಾಗವಹಿಸಲು ಚೀನಾಕ್ಕೆ ತೆರಳಬೇಕಿದ್ದ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಪ್ರವಾಸವನ್ನು ರದ್ದುಗೊಳಿಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಖಚಿತಪಡಿಸಿದೆ.
ಹಾಂಗ್‌ಝೌನಲ್ಲಿ ನಡೆಯುತ್ತಿರುವ 19ನೇ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಲಿರುವ ಅರುಣಾಚಲ ಪ್ರದೇಶದ ನಮ್ಮ ವುಶು ಅಥ್ಲೀಟ್‌ಗಳಿಗೆ ವೀಸಾ ನಿರಾಕರಿಸಿರುವ ಚೀನಾದ ಈ ಕೃತ್ಯವನ್ನು ನಾನು ಬಲವಾಗಿ ಖಂಡಿಸುತ್ತೇನೆ. ಚೀನಾದ ನಡವಳಿಕೆಯಿಂದ ಕ್ರೀಡಾ ಮನೋಭಾವ ಮತ್ತು ಏಷ್ಯನ್ ಗೇಮ್ಸ್‌ನ ನಿಯಮಗಳೆರಡನ್ನೂ ಉಲ್ಲಂಘಿಸಿದಂತಾಗಿದೆ. ಇದು ಸದಸ್ಯ ರಾಷ್ಟ್ರಗಳ ಸ್ಪರ್ಧಿಗಳ ವಿರುದ್ಧ ತಾರತಮ್ಯ ಧೋರಣೆಯನ್ನು ಬಿಂಬಿಸುತ್ತದೆ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಬೇಸರ ಹೊರಹಾಕಿದ್ದಾರೆ.
ಅರುಣಾಚಲ ಪ್ರದೇಶವು ವಿವಾದಿತ ಪ್ರದೇಶವಲ್ಲ. ಅದು ಭಾರತದ ಅವಿಭಾಜ್ಯ ಅಂಗವಾಗಿದೆ. ಅರುಣಾಚಲ ಪ್ರದೇಶದ ಜನರು ತಮ್ಮ ಭೂಮಿ ಮತ್ತು ಜನರ ಮೇಲೆ ಚೀನಾದ ಯಾವುದೇ ಕ್ರಮವನ್ನು ಬಲವಾಗಿ ವಿರೋಧಿಸುತ್ತಾರೆ. ಚೀನಾದ ಕಾನೂನುಬಾಹಿರ ಕ್ರಮದಲ್ಲಿ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಕ್ರಮ ಜರುಗಿಸಬೇಕು ಎಂದು ರಿಜಿಜು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.