ಚೆನ್ನೈ: ಕಡೆಯ ಎರಡು ಸುತ್ತುಗಳಲ್ಲಿ ಅಮೋಘ ರೀತಿ ಪುಟಿದೆದ್ದ ಗ್ರ್ಯಾಂಡ್‌ಮಾಸ್ಟರ್ ಅರವಿಂದ ಚಿದಂಬರಮ್ ನಂತರ ಬ್ಲಿಟ್ಜ್‌ನಲ್ಲೂ ಮಿಂಚಿ, ಚೆನ್ನೈ ಗ್ರ್ಯಾಂಡ್‌ಮಾಸ್ಟರ್ಸ್ ಚೆಸ್ ಟೂರ್ನಿಯಲ್ಲಿ ಸೋಮವಾರ ಚಾಂಪಿಯನ್ ಮುಕುಟ ಧರಿಸಿದರು. ಚಾಲೆಂಜರ್ಸ್ ವಿಭಾಗದಲ್ಲಿ ವಿ.ಪ್ರಣವ್ ಅರ್ಹವಾಗಿ ಪ್ರಶಸ್ತಿ ಗೆದ್ದುಕೊಂಡರು.
ಮಾಸ್ಟರ್ಸ್ ವಿಭಾಗದಲ್ಲಿ ಏಳನೇ (ಕೊನೆಯ) ಸುತ್ತಿನ ನಂತರ ಮೂವರು ಅಗ್ರಸ್ಥಾನ ಹಂಚಿಕೊಂಡಿದ್ದರು. ಅರ ವಿಂದ ಚಿದಂಬರಂ, ಅಮೆರಿಕದ ಲೆವೊನ್ ಅರೋನಿಯನ್ ಮತ್ತು ಅರ್ಜುನ್ ಇರಿಗೇಶಿ ಅವರು ತಲಾ 4.5 ಪಾಯಿಂಟ್ಸ್ ಗಳಿಸಿದ್ದರು.
ಅರವಿಂದ ಉತ್ತಮ ಟೈಬ್ರೇಕ್ ಹೊಂದಿದ್ದು ನೇರವಾಗಿ ಪ್ರಶಸ್ತಿ ಸುತ್ತಿಗೆ ತಲುಪಿದರು. ಹೀಗಾಗಿ ಅರೋನಿಯನ್ ಮತ್ತು ಅರ್ಜುನ್ ನಡುವಣ ಎರಡು ಪಂದ್ಯಗಳ ಬ್ಲಿಟ್ಜ್ ಸ್ಪರ್ಧೆ ನಡೆದವು. ಇದರಲ್ಲಿ ಇಬ್ಬರೂ ತಲಾ ಒಂದು ಗೆದ್ದ ಕಾರಣ ‘ಸಡನ್ ಡೆತ್’ ಅಳವಡಿಸಲಾಯಿತು. ಇದರಲ್ಲಿ ಕಪ್ಪು ಕಾಯಿಗಳಲ್ಲಿ ಆಡಿ ಡ್ರಾ ಮಾಡಿದ ಅರೋನಿಯನ್ ಗೆದ್ದರು.
ನಂತರ ಪ್ರಶಸ್ತಿಗೆ ನಡೆದ ಹಣಾ ಹಣಿಯಲ್ಲಿ ಅರವಿಂದ್ ಪ್ಲೇ ಆಫ್‌ನ ಮೊದಲ ಪಂದ್ಯ ಗೆದ್ದುಕೊಂಡರು. ನಂತರ ಕಪ್ಪು ಕಾಯಿಗಳಲ್ಲಿ ಆಡಿ ಎರಡನೇ ಪಂದ್ಯ ಡ್ರಾ ಮಾಡಿಕೊಂಡು ಫೈನಲ್‌ನ ವಿಜೇತ ರಾದರು. ಕ್ಲಾಸಿಕಲ್ ಸುತ್ತಿನಲ್ಲಿ ಮೂವರು ಆಟಗಾರರು ಸಮಾನ ಅಂಕ (4.5) ಗಳಿಸಿದ್ದ ಕಾರಣ ಅವರಿಗೆ ತಲಾ ₹11 ಲಕ್ಷ ಬಹುಮಾನ ನೀಡಲಾಯಿತು ಆರನೇ ಸುತ್ತಿನಲ್ಲಿ ಇರಿಗೇಶಿ ಅವ ರನ್ನು ಸೋಲಿಸಿದ್ದ ಅರವಿಂದ್, ಅಂತಿಮ ಸುತ್ತಿನಲ್ಲಿ ಇರಾನಿನ ಪರ್ಹಾಮ್ ಮಘಸೂಡ್ಲು ವಿರುದ್ಧ ಕಪ್ಪು ಕಾಯಿಗಳಲ್ಲಿ ಆಡಿ ಸುಲಭ ಗೆಲುವು ಸಾಧಿಸಿದರು.
ಪ್ರಣವ್‌ಗೆ ಪ್ರಶಸ್ತಿ: ತಮಿಳುನಾಡಿನ ಪ್ರಣವ್ ಕೊನೆಯ ಸುತ್ತಿನಲ್ಲಿ ಗೋವಾದ ಲ್ಯೂಕ್ ಮೆಂಡೋನ್ಸಾ ಜೊತೆ ಡ್ರಾ ಮಾಡಿಕೊಂಡು ಅರ್ಹವಾಗಿ ಚಾಂಪಿಯನ್ ಆದರು. ಅವರು ನಾಲ್ಕು ಪಂದ್ಯ ಗೆದ್ದು, ಮೂರು ಡ್ರಾ ಮಾಡಿಕೊಂಡರು. ₹6 ಲಕ್ಷ ಬಹುಮಾನ ಹಣ ಅವರ ಜೇಬಿಗಿಳಿಯಿತು.
ಮುಂದಿನ ವರ್ಷ ಮಾಸ್ಟರ್ಸ್ ವಿಭಾಗದಲ್ಲಿ ನೇರ ಪ್ರವೇಶದ ಅವಕಾಶವೂ ಅವರದಾಯಿತು. ದಿನದ ಇತರ ಪಂದ್ಯಗಳಲ್ಲಿ ಮುರಳಿ ಕಾರ್ತಿಕೇಯನ್ ಆರ್.ವೈಶಾಲಿ ವಿರುದ್ಧ ಜಯಗಳಿಸಿದರೆ ಅಭಿಮನ್ಯು ಪುರಾಣಿಕ್ ರೌನಕ್ ಸಾಧ್ವಾನಿ ಜೊತೆ ಡ್ರಾ ಮಾಡಿಕೊಂಡರು. ಹಾರಿಕಾ ಗೆಲುವಿಗೆ ಪ್ರಯತ್ನಿಸಿದರೂ ಅಂತಿಮವಾಗಿ ಎಂ. ಪ್ರಾಣೇಶ್ ಜೊತೆ ಡ್ರಾ ಮಾಡಿಕೊಳ್ಳಬೇಕಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.