ಚೆನ್ನೈ: ಒಂಟಿಯಾಗಿ ಅಗ್ರಸ್ಥಾನದಲ್ಲಿದ್ದ ಅರ್ಜುನ್ ಇರಿಗೇಶಿ ಅವರ ಅಜೇಯ ಓಟವನ್ನು ಸ್ವದೇಶದ ಅರವಿಂದ ಚಿದಂಬರಂ ಅಂತ್ಯಗೊಳಿಸಿದರು. ಭಾನುವಾರ ಈ ಸೋಲಿನೊಡನೆ ಅರ್ಜುನ್ ಅವರು ಚೆನ್ನೈ ಗ್ರ್ಯಾಂಡ್‌ಮಾಸ್ಟರ್ಸ್ ಚೆಸ್ ಟೂರ್ನಿಯ ಆರನೇ ಸುತ್ತಿನ ನಂತರ ಲೊವೊನ್ ಅರೋನಿಯನ್ ಜೊತೆ ಅಗ್ರಸ್ಥಾನ ಹಂಚಿಕೊಳ್ಳಬೇಕಾಯಿತು.
ಅರವಿಂದ್‌ಗೆ ಇದು ಟೂರ್ನಿಯಲ್ಲಿ ಮೊದಲ ಜಯ. ಅರ್ಜುನ್ ಮತ್ತು ಅರೋನಿಯನ್ ತಲಾ ನಾಲ್ಕು ಪಾಯಿಂಟ್ಸ್ ಸಂಗ್ರಹಿಸಿದ್ದಾರೆ. ಇರಾನಿನ ಗ್ರ್ಯಾಂಡ್‌ಮಾಸ್ಟರ್ ಅಮಿನ್ ತಬಾತಬೇಯಿ (3.5) ಎರಡನೇ ಸ್ಥಾನದಲ್ಲಿದ್ದಾರೆ.
2729ರ ಸರಾಸರಿ ರೇಟಿಂಗ್ ಹೊಂದಿರುವ ಈ ಟೂರ್ನಿಯಲ್ಲಿ ಈಗ ಪೈಪೋಟಿ ತೀವ್ರಗೊಂಡಿದೆ.
ಬಿಳಿ ಕಾಯಿಗಳಲ್ಲಿ ಆಡಿದ ಅರವಿಂದ್ ಕ್ವೀನ್ ಪಾನ್ ಓಪನಿಂಗ್ ಆಯ್ಕೆ ಮಾಡಿದರು. ಆದರೆ 16 ಮತ್ತು 17ನೇ ನಡೆಯಲ್ಲಿ ಅರ್ಜುನ್ ಅವರ ತಪ್ಪಿನಿಂದಾಗಿ ಅರವಿಂದ್‌ಗೆ ಮೇಲುಗೈ ಲಭಿಸಿತು. 48ನೇ ನಡೆಯಲ್ಲಿ ಅರವಿಂದ್ ಜಯಗಳಿಸಿದರು. ಈ ಹಿಂದಿನ ಎಲ್ಲ ಪಂದ್ಯಗಳನ್ನು ಅವರು ಡ್ರಾ ಮಾಡಿಕೊಂಡಿದ್ದರು.
ದಿನದ ಇತರ ಮೂರು ಪಂದ್ಯಗಳು ಡ್ರಾ ಆದವು. ಅಮೆರಿಕದ ಅರೋನಿಯನ್, 70 ನಡೆಗಳ ನಂತರ ವಿದಿತ್ ಗುಜರಾತಿ ಜೊತೆ ಡ್ರಾ ಮಾಡಿಕೊಳ್ಳಬೇಕಾಯಿತು. ಫ್ರಾನ್ಸ್‌ನ ಮ್ಯಾಕ್ಸಿಂ ವೇಷಿಯರ್–ಲಗ್ರಾವ್, ಇನ್ನೊಂದು ಪಂದ್ಯದಲ್ಲಿ ಸರ್ಬಿಯಾದ ಅಲೆಕ್ಸಿ ಸರನ ಜೊತೆ ಪಾಯಿಂಟ್ ಹಂಚಿಕೊಂಡರು. ತಬಾತಬೇಯಿ ಅವರಿಗೆ ಸ್ವದೇಶದ ಪರ್ಹಾಮ್ ಮಘಸೂಡ್ಲೂ ಅವರ ರಕ್ಷಣಾಕೋಟೆ ಭೇದಿಸಲಾಗಲಿಲ್ಲ.
ಚಾಲೆಂಜರ್ಸ್ ವಿಭಾಗದಲ್ಲಿ ವಿ.ಪ್ರಣವ್ ಆರನೇ ಸುತ್ತಿನ ಡ್ರಾ ಹೊರತಾಗಿಯೂ ಅಗ್ರಸ್ಥಾನದಲ್ಲಿ ಮುಂದುವರಿದರು. ಇದು ಅವರಿಗೆ ಸತತ ಎರಡನೇ ಡ್ರಾ. ಅವರು ಐದು ಪಾಯಿಂಟ್ಸ್ ಗಳಿಸಿದ್ದಾರೆ. 39 ನಡೆಗಳ ನಂತರ ಪ್ರಾಣೇಶ್ ಅವರ ಡ್ರಾ ಕೊಡುಗೆಗೆ ಪ್ರಣವ್ ಸಮ್ಮತಿಸಿದರು.
ರೌನಕ್ ಸಾಧ್ವಾನಿ ಅವರು ಡಿ.ಹಾರಿಕಾ ಜೊತೆ ಡ್ರಾ ಮಾಡಿಕೊಂಡರೆ, ಜಿಎಂ ಅಭಿಮನ್ಯು ಪುರಾಣಿಕ್, ಆರ್.ವೈಶಾಲಿ ವಿರುದ್ಧ ಗೆಲುವು ಪಡೆದರು. ಲಿಯೊನ್ ಮೆಂಡೊನ್ಸಾ, ಕಾರ್ತಿಕೇಯನ್ ಮುರಳಿ ಜೊತೆ ಡ್ರಾ ಮಾಡಿಕೊಂಡರು. ಗೋವಾದ ಲಿಯೊನ್ ನಾಲ್ಕೂವರೆ ಪಾಯಿಂಟ್ಸ್ ಸಂಗ್ರಹಿಸಿ ಎರಡನೇ ಸ್ಥಾನದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.