ಮೊಟ್ಟಮೊದಲ ಬಾರಿ ಭಾರತ ಮಹಿಳಾ ಟೇಬಲ್ ಟೆನಿಸ್ ತಂಡ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿದೆ. ಕರ್ನಾಟಕದ ಯುವ ತಾರೆ ಅರ್ಚನಾ ಕಾಮತ್ ಅವರು ಮೂವರು ಆಟಗಾರ್ತಿಯರ ಈ ತಂಡದಲ್ಲಿದ್ದಾರೆ. ನೊಯ್ಡಾದಲ್ಲಿ ನೆಲೆಸಿರುವ ಬೆಂಗಳೂರಿನ ಅರ್ಚನಾ ಈಗಾಗಲೇ ರಾಷ್ಟ್ರೀಯ ಸೀನಿಯರ್, ಯೂತ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಹಲವು ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ. ಭಾರತ ತಂಡ ಜರ್ಮನಿಯ ಸಾರ್‌ಬ್ರೂಕನ್‌ನಲ್ಲಿ ಜುಲೈ 11 ರಿಂದ ತರಬೇತಿಯಲ್ಲಿದೆ. ಅಲ್ಲಿಂದ ತಂಡವು (ಮಣಿಕಾ ಬಾತ್ರಾ, ಶ್ರೀಜಾ ಅಕುಳಾ ತಂಡದ ಇತರ ಇಬ್ಬರು) ನೇರವಾಗಿ ಪ್ಯಾರಿಸ್‌ಗೆ ತೆರಳಲಿದೆ.
ಒಲಿಂಪಿಕ್ಸ್ ಇದೇ ತಿಂಗಳ 26 ರಿಂದ ಆಗಸ್ಟ್ 11ರವರೆಗೆ ನಡೆಯಲಿದೆ. ಜರ್ಮನಿಗೆ ತರಬೇತಿಗೆಂದು ತೆರಳುವ ಮುನ್ನ, 24 ವರ್ಷದ ವಯಸ್ಸಿನ ಆಟಗಾರ್ತಿ ‘ಪ್ರಜಾವಾಣಿ’ಗೆ ಕಿರು ಸಂದರ್ಶನ ನೀಡಿದರು.
ಈ ಪ್ರಮುಖ ಕೂಟದ ಸ್ಪರ್ಧೆಗೆ ಸಿದ್ಧತೆ ಹೇಗೆ ನಡೆಯುತ್ತಿದೆ?
ಸಿದ್ಧತೆ ಉತ್ತಮವಾಗಿ ನಡೆದಿದೆ. ಎರಡು ವರ್ಷಗಳಿಂದ ನೊಯ್ಡಾದ ಅನ್ಶುಲ್ ಗಾರ್ಗ್ ಅವರ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದೇನೆ. ಟೇಬಲ್ ಟೆನಿಸ್ ತಂಡಕ್ಕೆ ಈಗ ಜರ್ಮನಿಯಲ್ಲಿ ಜುಲೈ 20ರವರೆಗೆ ತರಬೇತಿಯಿದೆ. ಹತ್ತು ದಿನಗಳ ತರಬೇತಿಯ ನಂತರ ನಮ್ಮ ತಂಡ ಪ್ಯಾರಿಸ್‌ಗೆ ಹೋಗಲಿದೆ.
ಒಲಿಂಪಿಕ್ಸ್‌ಗೆ ಆಯ್ಕೆಯಾಗುವುದು ಪ್ರತಿಯೊಬ್ಬ ಕ್ರೀಡಾಪಟುವಿನ ಕನಸು? ಆಯ್ಕೆಯ ನಿರೀಕ್ಷೆಯಿತ್ತೇ?
ಒಲಿಂಪಿಕ್ಸ್‌ಗೆ ಭಾರತ ತಂಡ ಮೊದಲ ಸಲ ಅರ್ಹತೆ ಪಡೆದಾಗ ನನಗೂ ಅವಕಾಶ ಸಿಗುತ್ತದೆ ಎಂಬ ನಿರೀಕ್ಷೆ ಸಹಜವಾಗಿತ್ತು. ಆಯ್ಕೆಯಾದ ಸುದ್ದಿ ನನಗೆ ತಿಳಿದಾಗ ನನ್ನನ್ನು ಪ್ರೋತ್ಸಾಹಿಸಿದ ತಂದೆ–ತಾಯಿ ಜೊತೆಗಿದ್ದುದು ಸಂಭ್ರಮವನ್ನು ಹೆಚ್ಚಿಸಿತು. ಒಲಿಂಪಿಕ್ಸ್‌ಗೆ ಆಯ್ಕೆಯಾಗುವುದು ಪ್ರತಿಯೊಬ್ಬ ಕ್ರೀಡಾಪಟುವಿನ ಆಸೆ. ಇದು ನನಗೆ ಒದಗಿದ ದೊಡ್ಡ ಅವಕಾಶ. ನನ್ನ ತಂದೆ (ಗುರುಪುರ ಗಿರೀಶ್ ಕಾಮತ್) ಮತ್ತು ತಾಯಿ (ಅನುರಾಧಾ) ಇಬ್ಬರೂ ನೇತ್ರ ತಜ್ಞರು. ಅವರು ಈ ಆಟದಲ್ಲಿ ನನ್ನ ಆಸಕ್ತಿಯನ್ನು ನೀರೆರೆದು ಪ್ರೋತ್ಸಾಹ ನೀಡಿದವರು. ನನ್ನ ಅಣ್ಣ ಅಭಿನವ್‌ನನ್ನೂ ಮರೆಯುವುದಿಲ್ಲ. ನನ್ನ ಆರಂಭದ ದಿನಗಳಲ್ಲಿ ನನ್ನ ಜೊತೆ ಟೂರ್ನಿಗಳಿಗೆ ಬರುತ್ತಿದ್ದು ಅವನ ಪ್ರೋತ್ಸಾಹ ಈ ಆಟದಲ್ಲಿ ಮುಂದುವರಿಯಲು ನೆರವಾಯಿತು.
ನೊಯ್ಡಾದಲ್ಲಿ ತರಬೇತಿ ನೆಲೆ ಬದಲಾಯಿಸಲು ಕಾರಣ?
ಬೆಂಗಳೂರಿನಲ್ಲಿ ಸಾಕಷ್ಟು ಮೂಲ ಸೌಕರ್ಯಗಳಿವೆ ಎಂಬುದರಲ್ಲಿ ಅನುಮಾನವಿಲ್ಲ. ನಾನು ಪಡುಕೋಣೆ– ದ್ರಾವಿಡ್ ಸೆಂಟರ್ ಆಫ್ ಸ್ಪೋರ್ಟ್ಸ್ ಎಕ್ಸಲೆನ್ಸ್‌ನಲ್ಲಿ ತರಬೇತಿ ಪಡೆದಿದ್ದೆ. ಅದಕ್ಕೆ ಮೊದಲು ರೈಲ್ ಕ್ಲಬ್‌ನಲ್ಲಿ ಬೋನಾ ಥಾಮಸ್ ಜಾನ್ ಅವರಿಂದಲೂ ತರಬೇತಿ ಪಡೆದಿದ್ದೆ. ಪಡುಕೋಣೆ– ದ್ರಾವಿಡ್ ಸೆಂಟರ್ ಆಫ್ ಸ್ಪೋರ್ಟ್ಸ್ ಎಕ್ಸಲೆನ್ಸ್‌ನಲ್ಲಿ ಸಗಾಯರಾಜ್ ಅವರು ಕೋಚ್ ಆಗಿದ್ದರು. ನೊಯ್ಡಾದಲ್ಲಿ ತರಬೇತಿ ನೀಡುತ್ತಿರುವ ಅನ್ಶುಲ್ ಗಾರ್ಗ್ ನನಗೆ 10 ವರ್ಷಗಳಿಂದ ಪರಿಚಯ. ಅಲ್ಲೂ ಸೌಕರ್ಯಗಳು ಚೆನ್ನಾಗಿವೆ. ಪ್ರಾಕ್ಟೀಸ್ ನಡೆಸಲೂ ಸಾಕಷ್ಟು ಆಟಗಾರರಿದ್ದಾರೆ. ಅವರು ಟೂರ್ನಿಗಳ ವೇಳೆ ಜೊತೆಗೆ ಬಂದು ಹಾಜರಿರುತ್ತಾರೆ. ಆಟದ ಸೂಕ್ಷ್ಮಗಳನ್ನು ತಿಳಿಸಿಕೊಟ್ಟರು. ಅಕಾಡೆಮಿಯಲ್ಲಿ ಜೈ ಸನನ್ ಅವರು ಸ್ಟ್ರೆಂತ್ ಅಂಡ್ ಕಂಡಿಷನಿಂಗ್ ಕೋಚ್ ಮತ್ತು ಶಂತನು ಕುಲಕರ್ಣಿ ಕ್ರೀಡಾ ಸೈಕಾಲಜಿಸ್ಟ್ ಆಗಿದ್ದಾರೆ.
ಟೇಬಲ್ ಟೆನಿಸ್‌ನಲ್ಲಿ ತೀರಾ ಖುಷಿ ಕೊಟ್ಟ ಕ್ಷಣ?
ನಾನು 2018ರಲ್ಲಿ ಕಟಕ್‌ನಲ್ಲಿ ಮೊದಲ ಬಾರಿ ರಾಷ್ಟ್ರೀಯ ಮಹಿಳಾ ಚಾಂಪಿಯನ್ ಆಗಿದ್ದು ಮರೆಯಲಾಗದ ಕ್ಷಣ. ಆದರೆ ಕಳೆದ ವರ್ಷ ಗೋವಾದಲ್ಲಿ ನಡೆದ ರಾಷ್ಟ್ರೀಯ ಕ್ರೀಡೆಗಳಲ್ಲಿ ಸಿಂಗಲ್ಸ್ ಚಿನ್ನ ಗೆದ್ದುದೂ ನನಗೆ ಖುಷಿ ಕೊಟ್ಟಿತು. ಕಳೆದ ನವೆಂಬರ್‌ನಲ್ಲಿ ವಡೋದರದಲ್ಲಿ ಮೊದಲ ರ್‍ಯಾಂಕಿಂಗ್ ಟೂರ್ನಿಯ ಸಿಂಗಲ್ಸ್ ಪ್ರಶಸ್ತಿ ಗೆದ್ದಾಗ ಆದ ಸಂಸತ ಕೂಡ ಮರೆಯುವುದಿಲ್ಲ. ಅದು ನಾನು ಗೆದ್ದ ಮೊದಲ ರಾಷ್ಟ್ರೀಯ ರ‍್ಯಾಂಕಿಂಗ್ ಟೂರ್ನಿ.
ನನ್ನ ಈವರೆಗಿನ ಪಯಣದಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಒಲಿಂಪಿಕ್ ಗೋಲ್ಡ್ ಕ್ವೆಸ್ಟ್ (ಒಜಿಕ್ಯು), ಟಾಪ್ಸ್ ಮತ್ತು ಕರ್ನಾಟಕ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಂಬಲ, ಪ್ರೋತ್ಸಾಹ ನೀಡಿವೆ.
‘ನನ್ನ ಪತ್ನಿ ಅನುರಾಧಾ ಅವರೂ ನೇತ್ರ ತಜ್ಞೆ. ಆದರೆ ವೈದ್ಯ ವೃತ್ತಿಯ ಪ್ರಾಕ್ಟೀಸ್ ಬಿಟ್ಟು 12 ವರ್ಷಗಳಾಗಿವೆ. ಈಗ ಮಗಳ ಜೊತೆ ದೆಹಲಿ ಹೊರವಲಯದ ನೊಯ್ಡಾದಲ್ಲಿ ನೆಲೆಸಿದ್ದಾರೆ. ಅರ್ಚನಾ ನಿತ್ಯವೂ ಮನೆಯಿಂದ ಸೈಕಲ್‌ನಲ್ಲಿ ಒಂದೂವರೆ ಕಿ.ಮೀ. ದೂರದ ಅಕಾಡೆಮಿಗೆ ತೆರಳುತ್ತಾಳೆ. ತಾಯಿ ಅವಳಿಗೆ ಬೆನ್ನೆಲುಬಾಗಿ ನಿಲ್ಲಲು ಮಗ ಅಭಿನವ್ ಕಾರಣ‘ ಎಂದು ಹೇಳಿದರು ಅರ್ಚನಾಳ ತಂದೆ ಗಿರೀಶ್ ಕಾಮತ್
‘ಅರ್ಚನಾಳಲ್ಲಿ ಒಳ್ಳೆಯ ಆಟವಿದೆ. ನೀನು ಅವಳ ಜೊತೆ ಹೋಗು. ಕ್ಲಿನಿಕ್‌ಗೆ ಬೇರೆ ವೈದ್ಯರು ಸಿಗುತ್ತಾರೆ. ಆಕೆಗೆ ಬೇರೆ ತಾಯಿ ಸಿಗುವುದಿಲ್ಲ ಎಂದು ಸಣ್ಣ ವಯಸ್ಸಿನಲ್ಲೇ ಅವನು ಮನವೊಲಿಸಿದ್ದ. ಹೀಗಾಗಿ ಪತ್ನಿ ಪ್ರಾಕ್ಟೀಸ್ ಕೈಬಿಟ್ಟು ಮಗಳ ಜೊತೆ ಟೂರ್ನಿಗಳಿಗೆ ಹೋಗಲಾರಂಭಿಸಿದರು’ ಎಂದು ಕಾಮತ್ ಅವರು ಮಗನ ಪಾತ್ರದ ಬಗ್ಗೆಯೂ ಹೆಮ್ಮೆ ವ್ಯಕ್ತಪಡಿಸಿದರು.
ಅರ್ಚನಾ ಕಾಮತ್ ಯಶಸ್ಸಿನಲ್ಲಿ ಪೋಷಕರ ತ್ಯಾಗ ದೊಡ್ಡದು. ಇನ್ನೂ ಎಳೆಯ ವಯಸಿದ್ದಾಗಲೇ ಆಕೆ ಆಡುತ್ತಿದ್ದ ರೀತಿ ಗಮನಿಸಿ ಆಕೆಗೆ ಉಜ್ವಲ ಭವಿಷ್ಯವಿದೆ ಎಂದು ತಂದೆ ಗಿರೀಶ್ ಬಳಿ ಅಂದೇ ಹೇಳಿದ್ದೆ.ಜಿ.ಕೆ.ವಿಶ್ವನಾಥ್, ಹಿರಿಯ ಆಟಗಾರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.