ADVERTISEMENT

ಅರ್ಚನಾ ಕಾಮತ್‌ಗೆ ಪ್ರಶಸ್ತಿ ಡಬಲ್‌

ಸಿ.ವಿ.ಎಲ್‌.ಶಾಸ್ತ್ರಿ ಸ್ಮಾರಕ ರಾಜ್ಯ ಟೇಬಲ್‌ ಟೆನಿಸ್ ಚಾಂಪಿಯನ್‌ಷಿಪ್‌

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2020, 14:27 IST
Last Updated 13 ಡಿಸೆಂಬರ್ 2020, 14:27 IST
ಪುರುಷ ಹಾಗೂ ಮಹಿಳಾ ಸಿಂಗಲ್ಸ್ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದ ರಾಜಾ ಕುಂದು (ಎಡ) ಹಾಗೂ ಅರ್ಚನಾ ಕಾಮತ್‌
ಪುರುಷ ಹಾಗೂ ಮಹಿಳಾ ಸಿಂಗಲ್ಸ್ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದ ರಾಜಾ ಕುಂದು (ಎಡ) ಹಾಗೂ ಅರ್ಚನಾ ಕಾಮತ್‌   

ಬೆಂಗಳೂರು: ಅದ್ಭುತ ಆಟವಾಡಿದ ಅರ್ಚನಾ ಗಿರೀಶ್ ಕಾಮತ್ ಅವರು ಸಿ.ವಿ.ಎಲ್‌.ಶಾಸ್ತ್ರಿ ಸ್ಮಾರಕ ರಾಜ್ಯ ಟೇಬಲ್‌ ಟೆನಿಸ್ ಚಾಂಪಿಯನ್‌ಷಿಪ್‌ನ ಮಹಿಳಾ ಸಿಂಗಲ್ಸ್ ಹಾಗೂ ಯೂತ್ ಸಿಂಗಲ್ಸ್ ವಿಭಾಗಗಳಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡರು. ಪುರುಷರ ಸಿಂಗಲ್ಸ್ ವಿಭಾಗದ ಪ್ರಶಸ್ತಿಯು ನೈರುತ್ಯ ರೇಲ್ವೆಯ (ಎಸ್‌ಡಬ್ಲ್ಯುಆರ್‌) ರಾಜಾ ಕುಂದು ಅವರ ಪಾಲಾಯಿತು.

ಮಲ್ಲೇಶ್ವರಂ ಅಸೋಸಿಯೇಷನ್‌ನಲ್ಲಿ ಭಾನುವಾರ ನಡೆದ ಚಾಂಪಿಯನ್‌ಷಿಪ್‌ನ ಮಹಿಳೆಯರ ಯೂತ್‌ ಸಿಂಗಲ್ಸ್ ಫೈನಲ್ ಹಣಾಹಣಿಯಲ್ಲಿ ಅರ್ಚನಾ 11–4, 11–7, 11–5, 8–11, 9–11, 11–1ರಿಂದ ಸ್ಕೈಸ್‌ ಅಕಾಡೆಮಿಯ ಕರುಣಾ ಗಜೇಂದ್ರನ್ ಅವರನ್ನು ಸೋಲಿಸಿದರು. ಸೆಮಿಫೈನಲ್‌ನಲ್ಲಿ ಅರ್ಚನಾ 11–9, 9–11, 11–9, 11–5, 11–2ರಿಂದ ಜೈನ್ ಕಾಲೇಜಿನ ಅನರ್ಘ್ಯ ಮಂಜುನಾಥ್ ಅವರನ್ನು ಮಣಿಸಿದರು.

ಮಹಿಳಾ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಅರ್ಚನಾ ಅವರಿಗೆ ತೀವ್ರ ಪೈಪೋಟಿ ಎದುರಾಯಿತು. ಈ ಪಂದ್ಯದಲ್ಲಿ ಅವರು 8–11, 11–8, 9–11, 11–8, 11–9, 11–4ರಿಂದ ಸ್ಕೈಸ್‌ ಅಕಾಡೆಮಿಯ ಯಶಸ್ವಿನಿ ಘೋರ್ಪಡೆ ಅವರಿಗೆ ಸೋಲುಣಿಸಿದರು. ನಾಲ್ಕರ ಘಟ್ಟದ ಪಂದ್ಯದಲ್ಲಿ ಅರ್ಚನಾ 12–10, 11–8, 9–11, 11–8, 11–5ರಿಂದ ಖುಷಿ.ವಿ (ಬಿಎನ್‌ಎಂ) ಅವರನ್ನು ಪರಾಭವಗೊಳಿಸಿದರು.

ADVERTISEMENT

ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ರಾಜಾ ಕುಂದು ಅವರು 11–8, 11–7, 11–9, 11–9ರಿಂದ ನೈರುತ್ಯ ರೇಲ್ವೆ ತಂಡದ ಎಂ. ಕಲೈವನನ್‌ ಅವರನ್ನು ಸೋಲಿಸಿದರು. ಸೆಮಿಫೈನಲ್‌ನಲ್ಲಿ ರಾಜಾ 11–9, 9–11, 13–11, 10–12, 11–5, 11–8ರಿಂದ ಸಮರ್ಥ್‌ ಕುರಡಿಕೇರಿ (ಬ್ಯಾಂಕ್ ಆಫ್ ಬರೋಡಾ) ಅವರನ್ನು ಮಣಿಸಿದರು.

ಗೌರವ: ಇದೇ ಸಂದರ್ಭದಲ್ಲಿ ಶ್ರೇಯಸ್‌ ತೆಲಂಗ್‌, ಖುಷಿ. ವಿ. ಅವರಿಗೆ ಕ್ರಮವಾಗಿ ವರ್ಷದ ಆಟಗಾರ ಹಾಗೂ ಆಟಗಾರ್ತಿ ಎಂದು ಗೌರವಿಸಲಾಯಿತು. ಅರ್ಜೆಂಟೀನಾದಲ್ಲಿ 2018ರ ಅಕ್ಟೋಬರ್‌ನಲ್ಲಿ ನಡೆದ ಯೂತ್ ಒಲಿಂಪಿಕ್ಸ್‌ನ ಯೂತ್ ಸಿಂಗಲ್ಸ್ ವಿಭಾಗದಲ್ಲಿ ಸೆಮಿಫೈನಲ್ ತಲುಪಿದ್ದ ಅರ್ಚನಾ ಅವರನ್ನು ಸನ್ಮಾನಿಸಲಾಯಿತು. ಈ ಸಾಧನೆ ಭಾರತದ ಮೊದಲ ಆಟಗಾರ್ತಿ ಎನಿಸಿಕೊಂಡಿದ್ದರು ಅರ್ಚನಾ. ಏಕಲವ್ಯ ಪ್ರಶಸ್ತಿ ಪುರಸ್ಕೃತರಾಗಿರುವ ಖುಷಿ. ವಿ. ಅವರನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.