ಗ್ವಾಟೆಮಾಲಾ ಸಿಟಿ : ಭಾರತದ ‘ಆರ್ಚರಿ‘ ದಂಪತಿಯಾದ ಅತನು–ದೀಪಿಕಾ ಅವರು ವಿಶ್ವಕಪ್ ಮೊದಲ ಹಂತದ ಆರ್ಚರಿ ಟೂರ್ನಿಯಲ್ಲಿ ಚಿನ್ನದ ಪದಕಗಳನ್ನು ಕೊರಳಿಗೇರಿಸಿಕೊಂಡರು. ಇಲ್ಲಿ ನಡೆಯುತ್ತಿರುವ ಟೂರ್ನಿಯ ವೈಯಕ್ತಿಕ ವಿಭಾಗಗಳಲ್ಲಿ ಭಾನುವಾರ ಅಗ್ರಸ್ಥಾನ ಗಳಿಸುವ ಮೂಲಕ ಭಾರತದ ಶ್ರೇಷ್ಠ ಸಾಧನೆಗೆ ಕಾರಣರಾದರು.
ಟೂರ್ನಿಯಲ್ಲಿ ಭಾರತ ತಂಡವು ಒಟ್ಟು ಮೂರು ಚಿನ್ನ ಹಾಗೂ ಒಂದು ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿತು. ದೀಪಿಕಾ ಅವರಿಗೆ ವೈಯಕ್ತಿಕ ವಿಭಾಗದಲ್ಲಿ ಇದು ವೃತ್ತಿಜೀವನದ ನಾಲ್ಕನೇ ಚಿನ್ನವಾದರೆ, ಅತನು ಅವರಿಗೆ ಮೊದಲನೆಯದ್ದು.
2009ರಲ್ಲಿ ಕ್ರೊವೇಷ್ಯಾದಲ್ಲಿ ನಡೆದ ಟೂರ್ನಿಯಲ್ಲಿ ಜಯಂತ್ ತಾಲೂಕ್ದಾರ್ ಚಿನ್ನದ ಪದಕ ಗೆದ್ದುಕೊಂಡ ಬಳಿಕ ಪುರುಷರ ವೈಯಕ್ತಿಕ ವಿಭಾಗದಲ್ಲಿ ಅತನು ಅವರಿಂದ ಶ್ರೇಷ್ಠ ಸಾಮರ್ಥ್ಯ ಹೊರಹೊಮ್ಮಿದೆ.
ಟೂರ್ನಿಯಲ್ಲಿ ಮೊದಲ ಚಿನ್ನದ ಪದಕವನ್ನು ಭಾರತ ಮಹಿಳಾ ತಂಡವು ಜಯಿಸಿತ್ತು.
ಭಾನುವಾರ ಮಿಶ್ರ ವಿಭಾಗದಲ್ಲಿ ಅತನು ಹಾಗೂ ಅಂಕಿತಾ ಭಕತ್ ಅವರ ತಂಡ 6–2ರಿಂದ ಅಮೆರಿಕ ತಂಡವನ್ನು ಮಣಿಸಿ ಕಂಚಿನ ಪದಕ ಗೆದ್ದುಕೊಂಡಿತು.
ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಮೂರನೇ ಶ್ರೇಯಾಂಕದ ದೀಪಿಕಾ, ಶೂಟ್ ಆಫ್‌ನಲ್ಲಿ 6–5ರಿಂದ ಅಮೆರಿಕದ ಮೆಕೆಂಜಿ ಬ್ರೌನ್ ಅವರನ್ನು ಪರಾಭವಗೊಳಿಸಿ ಚಿನ್ನಕ್ಕೆ ಮುತ್ತಿಟ್ಟರು. ಸೆಮಿಫೈನಲ್‌ನಲ್ಲಿ ಅವರು ಮೆಕ್ಸಿಕೊದ ಅಲೆಜಾಂಡ್ರಾ ವೆಲೆನ್ಸಿಯಾ ಅವರನ್ನು 7–3ರಿಂದ ಸೋಲಿಸಿದ್ದರು.
ಅತನು ದಾಸ್ ಅವರು ಪುರುಷರ ವೈಯಕ್ತಿಕ ವಿಭಾಗದ ಫೈನಲ್‌ನಲ್ಲಿ 6–4ರಿಂದ ಸ್ಪೇನ್‌ನ ಡೇನಿಯಲ್ ಕ್ಯಾಸ್ಟ್ರೊ ಅವರನ್ನು ಸೋಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.