ಶಾಂಘೈ: ಧೀರಜ್ ಬೊಮ್ಮದೇವರ, ತರುಣ್ ದೀಪ್ ರಾಯ್ ಮತ್ತು ಪ್ರವೀಣ್ ಜಾಧವ್ ಅವರನ್ನೊಳಗೊಂಡ ಭಾರತ ಪುರುಷರ ರಿಕರ್ವ್ ತಂಡವು ಹಾಲಿ ಒಲಿಂಪಿಕ್ ಚಾಂಪಿಯನ್ ದಕ್ಷಿಣ ಕೊರಿಯಾವನ್ನು ಮಣಿಸಿ ಆರ್ಚರಿ ವಿಶ್ವಕಪ್‌ನಲ್ಲಿ ಚಿನ್ನದ ಪದಕ ಜಯಿಸಿದೆ. 14 ವರ್ಷಗಳ ನಂತರ ಭಾರತ ಐತಿಹಾಸಿಕ ಸಾಧನೆ ಮಾಡಿದೆ.
ಕೊರಿಯಾ ವಿರುದ್ಧದ ಈ ಗೆಲುವಿನಿಂದಾಗಿ ಭಾರತಕ್ಕೆ ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸ್ಥಾನ ಪಡೆಯುವ ಅವಕಾಶ ಹೆಚ್ಚಿಸಿದೆ. ಧೀರಜ್, ತರುಣ್ ಮತ್ತು ಪ್ರವೀಣ್ ಅವರನ್ನೊಳಗೊಂಡ ತಂಡ ಒಂದು ಸೆಟ್ ಕೂಡ ಕಳೆದುಕೊಳ್ಳದೆ ಪ್ರಬಲ ಕೊರಿಯಾವನ್ನು ಮಣಿಸಿತು.
ದಕ್ಷಿಣ ಕೊರಿಯಾ ತಂಡದಲ್ಲಿ ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ತಂಡದಲ್ಲಿದ್ದ ಕಿಮ್ ವೂಜಿನ್ ಮತ್ತು ಕಿಮ್ ಜೆ ಡಿಯೋಕ್ ಇದ್ದರು. ಲೀ ವೂ ಸಿಯೋಕ್ ತಂಡದ ಮೂರನೇ ಆಟಗಾರ.
‘ಕೊರಿಯಾ ಫೈನಲ್‌ನಲ್ಲಿದ್ದಾಗ ಸಹಜವಾಗಿ ಒತ್ತಡ ಇರುತ್ತದೆ. ಆದರೆ ಈಗ, ಅವರನ್ನು ಸೋಲಿಸುವ ನಮ್ಮ ಸಾಮರ್ಥ್ಯವನ್ನು ಯಾರೂ ಅನುಮಾನಿಸಲು ಸಾಧ್ಯವಿಲ್ಲ. ಅರ್ಹತಾ ಸುತ್ತಿನಿಂದಲೂ ಭಾರತ ಉತ್ತಮ ಫಾರ್ಮ್‌ನಲ್ಲಿದೆ. ನಮ್ಮ ಅತಿದೊಡ್ಡ ಗೆಲುವುಗಳಲ್ಲಿ ಇದೂ ಒಂದಾಗಿದೆ. ಒಲಿಂಪಿಕ್ಸ್ ವರೆಗೂ ಈ ಲಯವನ್ನು ಉಳಿಸಿಕೊಳ್ಳಬೇಕಾಗುತ್ತದೆ’ ಎಂದು ರಾಹುಲ್ ಬ್ಯಾನರ್ಜಿ ಹೇಳಿದರು.
ಈ ಸಲ ಟೂರ್ನಿಯ ಅಗ್ರ ಎರಡು ಪ್ರಬಲ ತಂಡಗಳ ನಡುವಿನ ಹೋರಾಟದಲ್ಲಿ ಭಾರತವು 5-1 (57-57, 57-55, 55-53) ಅಂತರದಿಂದ ಗೆದ್ದು, ಋತುವಿನ ಆರಂಭಿಕ ವಿಶ್ವಕಪ್‌ನಲ್ಲಿ (ಸ್ಟೇಜ್1) ಚಿನ್ನದ ಪದಕಗಳ ಸಂಖ್ಯೆಯನ್ನು ಐದಕ್ಕೆ ಏರಿಸಿತು.
ರಿಕರ್ವ್ ಮಿಶ್ರ ಡಬಲ್ಸ್ ವಿಭಾಗದಲ್ಲಿ ಅಂಕಿತಾ ಭಕತ್ ಮತ್ತು ಧೀರಜ್ ಜೋಡಿ ಮೆಕ್ಸಿಕೊದ ಅಲೆಕ್ಸಾಂದ್ರಾ ವೆಲೆನ್ಸಿಯಾ ಮತ್ತು ಮ್ಯಾಟಿಯಾಸ್ ಗ್ರ್ಯಾಂಡ್ ಅವರನ್ನು 6-0 (35-31, 38-35, 39-37) ಸೆಟ್ ಗಳಿಂದ ಸೋಲಿಸಿ ಕಂಚಿನ ಪದಕ ಗೆದ್ದುಕೊಂಡಿತು.
ಪುರುಷರ ವೈಯಕ್ತಿಕ ವಿಭಾಗದಲ್ಲಿ ಧೀರಜ್ ಒಲಿಂಪಿಕ್ಸ್‌ಗೆ ಸ್ಥಾನ ಗಿಟ್ಟಿಸಿದ್ದಾರೆ. ಅಂತಿಮ ಒಲಿಂಪಿಕ್ ಅರ್ಹತಾ ಸ್ಪರ್ಧೆಯು ಜೂನ್ 18 ರಿಂದ 23 ರವರೆಗೆ ಟರ್ಕಿಯಲ್ಲಿ ನಡೆಯಲಿದೆ.
ದೀಪಿಕಾಗೆ ಬೆಳ್ಳಿ
ಮಗುವಿನ ತಾಯಿಯಾದ ನಂತರ ವಿಶ್ವ ಸ್ಪರ್ಧಾ ಕಣಕ್ಕೆ ಮರಳಿರುವ ದೀಪಿಕಾಕುಮಾರಿ, ಮಹಿಳಾ ರಿಕರ್ವ್ ವೈಯಕ್ತಿಕ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದರು. ಫೈನಲ್‌ನಲ್ಲಿ ದೀಪಿಕಾ 6-0 (26-27, 27-29, 27-28) ನೇರ ಸೆಟ್‌ಗಳಲ್ಲಿ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್ ಚಾಂಪಿಯನ್ ಲಿಮ್ ಸಿಹ್ಯೋನ್ ವಿರುದ್ಧ ಸೋತರು.
ಪ್ರಶಸ್ತಿ ಸುತ್ತಿನಲ್ಲಿ ದೀಪಿಕಾ ಆರಂಭ ಉತ್ತಮವಾಗಿರಲಿಲ್ಲ. 20 ವರ್ಷದ ಲಿಮ್ ಎರಡನೇ ಸೆಟ್ ಗೆಲ್ಲಲು ಕೇವಲ ಒಂದು ಅಂಕ ಕಳೆದುಕೊಂಡರು.
ಒಟ್ಟು ಐದು ಚಿನ್ನ, ಎರಡು ಬೆಳ್ಳಿ ಮತ್ತು ಒಂದು ಕಂಚಿನೊಂದಿಗೆ ಭಾರತ ಒಟ್ಟು ಎಂಟು ಪದಕಗಳನ್ನು ಗೆದ್ದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.