ಲಂಡನ್: ಆರ್ಮ್‌ಗೆಡನ್ ಗೇಮ್‌ನಲ್ಲಿ ಫ್ರಾನ್ಸ್‌ನ ಮ್ಯಾಕ್ಸಿಂ ವೇಷಿಯರ್ ಲಗ್ರಾವ್ ಮೇಲೆ ಹೋರಾಟವನ್ನು ಬದಿಗೊತ್ತಿದ ಭಾರತದ ಗ್ರ್ಯಾಂಡ್‌ಮಾಸ್ಟರ್ ಅರ್ಜುನ್ ಇರಿಗೇಶಿ, ಡಬ್ಲ್ಯುಆರ್ ಚೆಸ್ ಮಾಸ್ಟರ್ಸ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡರು.
ಫೈನಲ್‌ನ ಮೊದಲ ಎರಡು ಸಾಂಪ್ರದಾಯಿಕ ಮಾದರಿಯ ಆಟ ಡ್ರಾ ಆದ ನಂತರ ವಿಜೇತರನ್ನು ನಿರ್ಧರಿಸಲು ಆರ್ಮ್‌ಗೆಡನ್ (ಟೈಬ್ರೇಕರ್) ಗೇಮ್ ಆಡಲಾಯಿತು. ಎರಡು ಗೇಮ್‌ಗಳ ಟೈಬ್ರೇಕ್‌ನಲ್ಲಿ ಅರ್ಜುನ್‌ಗೆ ಅದೃಷ್ಟ ಒಲಿಯಿತು.
ಮೊದಲ ಬಹುಮಾನವಾಗಿ ₹18.23 ಲಕ್ಷ ಅರ್ಜುನ್ ಜೇಬಿಗಿಳಿಯಿತು. 16 ಆಟಗಾರರು ಟೂರ್ನಿಯಲ್ಲಿ ಅರ್ಜುನ್ ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದರು.
ಅರ್ಜುನ್ ಸೆಮಿಫೈನಲ್‌ನಲ್ಲಿ ಸ್ವದೇಶದ ಆರ್.ಪ್ರಜ್ಞಾನಂದ ವಿರುದ್ಧ 1.5–0.5 ರಿಂದ ಜಯಗಳಿಸಿದ್ದರು. ಎರಡನೆ ಸುತ್ತಿನಲ್ಲಿ ಭಾರತದ ಇನ್ನೊಬ್ಬ ಆಟಗಾರ ವಿದಿತ್ ಗುಜರಾತಿ ಅವರನ್ನು 1.5–0.5 ರಿಂದ ಸೋಲಿಸಿದ್ದರು.
ಮೊದಲ ಸುತ್ತಿನಲ್ಲಿ ತೆಲಂಗಾಣದ ಆಟಗಾರ 2–0 ಯಿಂದ ಇಂಗ್ಲೆಂಡ್‌ನ ಶಿವಾನಂದನ್ ಬೋಧನಾ ವಿರುದ್ಧ ಜಯಗಳಿಸಿದ್ದರು. ಈಕೆ ಇತ್ತೀಚಿನ ಒಲಿಂಪಿಯಾಡ್‌ನಲ್ಲಿ ಆಡಿದ ಆ ದೇಶದ ಅತಿ ಕಿರಿಯ ಆಟಗಾರ್ತಿ ಎನಿಸಿದ್ದರು.
ಈ ಟೂರ್ನಿಯ ಯಶಸ್ಸಿನಿಂದ ಅರ್ಜುನ್ 2800ರ ರೇಟಿಂಗ್ ಸಮೀಪ ತಲುಪಿದ್ದಾರೆ. ಆದರೆ ಈ ಮೈಲಿಗಲ್ಲು ದಾಟಲು ಇನ್ನೊಂದು ಟೂರ್ನಿಗಾಗಿ ಕಾಯಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.