ನೊಯ್ಡಾ: ಅರ್ಜುನ್ ದೇಶ್ವಾಲ್ ಅವರ ಅಮೋಘ ರೇಡಿಂಗ್ ಬಲದಿಂದ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ಪ್ರೊ ಕಬಡ್ಡಿ ಲೀಗ್ 11ನೇ ಆವೃತ್ತಿಯ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡವನ್ನು ಮಂಗಳವಾರ ಏಳು ಅಂಕಗಳಿಂದ (39–32) ಮಣಿಸಿತು.
ಇದು ಹಾಲಿ ಟೂರ್ನಿಯಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡಕ್ಕೆ ನಾಲ್ಕನೇ ಜಯ. ಬುಲ್ಸ್ ತಂಡ ಏಳನೇ ಸೋಲಿಗೆ ಗುರಿಯಾಗಿ 11ನೇ ಸ್ಥಾನದಲ್ಲಿ ಮುಂದುವರಿಯಿತು.
ನೊಯ್ಡಾ ಒಳಾಂಗಣ ಕ್ರೀಡಾಂಗಣ ದಲ್ಲಿ ನಡೆದ ಪಂದ್ಯದಲ್ಲಿ ಆರಂಭಿಕ ಹಿನ್ನಡೆಯ ಹೊರತಾಗಿಯೂ ದ್ವಿತೀಯಾರ್ಧದಲ್ಲಿ ಜೈಪುರ ಆಟಗಾರರು ರೇಡಿಂಗ್ ಮತ್ತು ಟ್ಯಾಕಲ್ ಎರಡರಲ್ಲೂ ಮಿಂಚಿದರು.
ಜೈಪುರ ತಂಡದ ಪರ ಅರ್ಜುನ್ ದೇಶ್ವಾಲ್ (19 ಅಂಕ) ಮತ್ತು ಲಕ್ಕಿ ಶರ್ಮ (6 ಅಂಕ) ಗಮನಾರ್ಹ ಪ್ರದರ್ಶನ ನೀಡಿದರೆ, ಬುಲ್ಸ್ ಪರ ರೇಡರ್‌ಗಳಾದ ಅಜಿಂಕ್ಯ ಪವಾರ್ (9 ಅಂಕ) ಮತ್ತು ಜತಿನ್ (5 ಅಂಕ) ಮಿಂಚಿದರು. ಮೊದಲ ಅವಧಿಯಲ್ಲಿ ಬುಲ್ಸ್‌ನ ಈ ಇಬ್ಬರು ಗಮನಸೆಳೆದರೆ, ಎರಡನೇ ಅವಧಿಯಲ್ಲಿ ಸ್ವಲ್ಪ ಕಳೆಗುಂದಿದರು.
ಮೊದಲಾರ್ಧದಲ್ಲಿ ಸಮಬಲದ ಹೋರಾಟ ಕಂಡುಬಂದಿತು. ವಿರಾಮದ ಮರುನಿಮಿಷ ಬುಲ್ಸ್ ತಂಡವನ್ನು ಆಲೌಟ್ ಮಾಡುವ ಮೂಲಕ ಮೊದಲ ಬಾರಿ ಜೈಪುರ ತಂಡ 20–20ರಲ್ಲಿ ಸಮ ಮಾಡಿತು. ನಂತರ ಜೈಪುರ ತಂಡ ಮೇಲುಗೈ ಸಾಧಿಸತೊಡಗಿತು. 30 ನಿಮಿಷಗಳ ನಂತರ ಜೈಪುರ ಎರಡು ಪಾಯಿಂಟ್‌ಗಳ ಮುನ್ನಡೆ ಸಾಧಿಸಿತು. ಮುಕ್ತಾಯದ ವೇಳೆಗೆ ಅದನ್ನು ಏಳು ಪಾಯಿಂಟ್‌ಗಳಿಗೆ ಹೆಚ್ಚಿಸಿತು.
ಈ ಮಧ್ಯೆ 9 ಅಂಕಗಳನ್ನು ಕಲೆಹಾಕಿದ ಬುಲ್ಸ್ ತಂಡದ ಸ್ಟಾರ್ ರೇಡರ್ ಅಜಿಂಕ್ಯ ಪವಾರ್, ಟೂರ್ನಿಯಲ್ಲಿ500 ರೇಡಿಂಗ್ ಪಾಯಿಂಟ್ಸ್ ಕಲೆಹಾಕಿದ ಗೌರವಕ್ಕೆ ಪಾತ್ರರಾದರು.
ದಿನದ ಮತ್ತೊಂದು ಪಂದ್ಯದಲ್ಲಿ ಡೆಲ್ಲಿ ದಬಾಂಗ್ ಮತ್ತು ಪುಣೇರಿ ಪಲ್ಟನ್ ತಂಡಗಳು 38–38ರಿಂದ ಸಮಬಲ ಸಾಧಿಸಿದವು. ದಬಾಂಗ್‌ನ ಅಂಶು ಮಲಿಕ್ 17 ಅಂಕ ಗಳಿಸಿ ಮಿಂಚಿದರು.
ಅಸ್ಲಾಂ ಇನಾಮದಾರ್ ಅಲಭ್ಯ
ಪುಣೇರಿ ಪಲ್ಟನ್ ತಂಡದ ನಾಯಕ ಅಸ್ಲಾಂ ಇನಾಂದಾರ್ ಅವರು ಮೊಣಕಾಲಿನ ನೋವಿನಿಂದಾಗಿ 11ನೇ ಆವೃತ್ತಿಯ ಉಳಿದ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಪಲ್ಟನ್ ಈ ವಿಷಯವನ್ನು ‘ಎಕ್ಸ್’ನಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.