ADVERTISEMENT

Pro Kabaddi: ಅರ್ಜುನ್‌ ಅಬ್ಬರಕ್ಕೆ ಬೆದರಿದ ಬುಲ್ಸ್

ಪ್ರೊ ಕಬಡ್ಡಿ: ‍ಪಿಂಕ್‌ ಪ್ಯಾಂಥರ್ಸ್‌ಗೆ ಗೆಲುವು

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2024, 16:51 IST
Last Updated 12 ನವೆಂಬರ್ 2024, 16:51 IST
ಬೆಂಗಳೂರು ಬುಲ್ಸ್‌ ಆಟಗಾರರ ಹಿಡಿತದಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಜೈಪುರ ಪಿಂಕ್‌ ಪ್ಯಾಂಥರ್ಸ್‌ ರೇಡರ್‌.
ಬೆಂಗಳೂರು ಬುಲ್ಸ್‌ ಆಟಗಾರರ ಹಿಡಿತದಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಜೈಪುರ ಪಿಂಕ್‌ ಪ್ಯಾಂಥರ್ಸ್‌ ರೇಡರ್‌.   

ನೊಯ್ಡಾ: ಅರ್ಜುನ್‌ ದೇಶ್ವಾಲ್‌ ಅವರ ಅಮೋಘ ರೇಡಿಂಗ್‌ ಬಲದಿಂದ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡ ಪ್ರೊ ಕಬಡ್ಡಿ ಲೀಗ್‌ 11ನೇ ಆವೃತ್ತಿಯ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ ತಂಡವನ್ನು ಮಂಗಳವಾರ ಏಳು ಅಂಕಗಳಿಂದ (39–32) ಮಣಿಸಿತು.

ಇದು ಹಾಲಿ ಟೂರ್ನಿಯಲ್ಲಿ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡಕ್ಕೆ ನಾಲ್ಕನೇ ಜಯ. ಬುಲ್ಸ್ ತಂಡ ಏಳನೇ ಸೋಲಿಗೆ ಗುರಿಯಾಗಿ 11ನೇ ಸ್ಥಾನದಲ್ಲಿ ಮುಂದುವರಿಯಿತು.

ನೊಯ್ಡಾ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರಂಭಿಕ ಹಿನ್ನಡೆಯ ಹೊರತಾಗಿಯೂ ದ್ವಿತೀಯಾರ್ಧದಲ್ಲಿ ಜೈಪುರ ಆಟಗಾರರು ರೇಡಿಂಗ್‌ ಮತ್ತು ಟ್ಯಾಕಲ್‌ ಎರಡರಲ್ಲೂ ಮಿಂಚಿದರು.

ADVERTISEMENT

ಜೈಪುರ ತಂಡದ ಪರ ಅರ್ಜುನ್‌ ದೇಶ್ವಾಲ್‌ (19 ಅಂಕ) ಮತ್ತು ಲಕ್ಕಿ ಶರ್ಮ (6 ಅಂಕ) ಗಮನಾರ್ಹ ಪ್ರದರ್ಶನ ನೀಡಿದರೆ, ಬುಲ್ಸ್‌ ಪರ ರೇಡರ್‌ಗಳಾದ ಅಜಿಂಕ್ಯ ಪವಾರ್‌ (9 ಅಂಕ) ಮತ್ತು ಜತಿನ್‌ (5 ಅಂಕ) ಮಿಂಚಿದರು. ಮೊದಲ ಅವಧಿಯಲ್ಲಿ ಬುಲ್ಸ್‌ನ ಈ ಇಬ್ಬರು ಗಮನಸೆಳೆದರೆ, ಎರಡನೇ ಅವಧಿಯಲ್ಲಿ ಸ್ವಲ್ಪ ಕಳೆಗುಂದಿದರು.

ಮೊದಲಾರ್ಧದಲ್ಲಿ ಸಮಬಲದ ಹೋರಾಟ ಕಂಡುಬಂದಿತು. ವಿರಾಮದ ಮರುನಿಮಿಷ ಬುಲ್ಸ್ ತಂಡವನ್ನು ಆಲೌಟ್‌ ಮಾಡುವ ಮೂಲಕ ಮೊದಲ ಬಾರಿ ಜೈಪುರ ತಂಡ 20–20ರಲ್ಲಿ ಸಮ ಮಾಡಿತು. ನಂತರ ಜೈಪುರ ತಂಡ ಮೇಲುಗೈ ಸಾಧಿಸತೊಡಗಿತು. 30 ನಿಮಿಷಗಳ ನಂತರ ಜೈಪುರ ಎರಡು ಪಾಯಿಂಟ್‌ಗಳ ಮುನ್ನಡೆ ಸಾಧಿಸಿತು. ಮುಕ್ತಾಯದ ವೇಳೆಗೆ ಅದನ್ನು ಏಳು ಪಾಯಿಂಟ್‌ಗಳಿಗೆ ಹೆಚ್ಚಿಸಿತು.

ಈ ಮಧ್ಯೆ 9 ಅಂಕಗಳನ್ನು ಕಲೆಹಾಕಿದ ಬುಲ್ಸ್‌ ತಂಡದ ಸ್ಟಾರ್‌ ರೇಡರ್‌ ಅಜಿಂಕ್ಯ ಪವಾರ್‌, ಟೂರ್ನಿಯಲ್ಲಿ500 ರೇಡಿಂಗ್‌ ಪಾಯಿಂಟ್ಸ್‌ ಕಲೆಹಾಕಿದ ಗೌರವಕ್ಕೆ ಪಾತ್ರರಾದರು.

ಬುಧವಾರದ ಪಂದ್ಯಗಳು: ಗುಜರಾತ್‌ ಜೈಂಟ್ಸ್– ಬೆಂಗಾಲ್‌ ವಾರಿಯರ್ಸ್‌ (8.00); ನಂತರ ಪಟ್ನಾ ಪೈರೇಟ್ಸ್‌– ಹರಿಯಾಣ ಸ್ಟೀಲರ್ಸ್‌.

ಅಸ್ಲಾಂ ಇನಾಮದಾರ್‌ ಅಲಭ್ಯ:

ಪುಣೇರಿ ಪಲ್ಟನ್ ತಂಡದ ನಾಯಕ ಅಸ್ಲಾಂ ಇನಾಂದಾರ್ ಅವರು ಮೊಣಕಾಲಿನ ನೋವಿನಿಂದಾಗಿ 11ನೇ ಆವೃತ್ತಿಯ ಉಳಿದ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಪಲ್ಟನ್ ಈ ವಿಷಯವನ್ನು ‘ಎಕ್ಸ್‌’ನಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.