ಚೆನ್ನೈ : ಭಾರತದ ಅರ್ಜುನ್ ಇರಿಗೇಶಿ ಅವರು ವಿಶ್ವ ಚೆಸ್ ಕ್ರಮಾಂಕದಲ್ಲಿ ಎರಡನೇ ಸ್ಥಾನಕ್ಕೇರಿದರು. ಚೆನ್ನೈ ಗ್ರ್ಯಾಂಡ್‌ಮಾಸ್ಟರ್ಸ್ ಚೆಸ್ ಟೂರ್ನಿಯ ಮೂರನೇ ಸುತ್ತಿನಲ್ಲಿ ಗುರುವಾರ ಸರ್ಬಿಯಾದ ಅಲೆಕ್ಸಿ ಸರನ ಅವರನ್ನು ಸೋಲಿಸುವ ಮೂಲಕ ಈ ಗೌರವಕ್ಕೆ ಪಾತ್ರರಾದರು.
ಮಾಸ್ಟರ್ಸ್ ವಿಭಾಗದಲ್ಲಿ ಮೂರನೇ ಸುತ್ತಿನ ನಂತರ ಅವರು, ಇರಾನಿನ ಅಮಿನ್ ತಬಾತಬೇಯಿ ಜೊತೆ ಜಂಟಿಯಾಗಿ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಇಬ್ಬರೂ ತಲಾ ಎರಡೂವರೆ ಪಾಯಿಂಟ್ಸ್ ಗಳಿಸಿದ್ದಾರೆ. ಅರ್ಮೇನಿಯ ಸಂಜಾತ ಅಮೆರಿಕದ ಆಟಗಾರ ಲೆವೊನ್ ಅರೋನಿಯನ್ (2) ಮೂರನೇ ಸ್ಥಾನದಲ್ಲಿದ್ದಾರೆ.
21 ವರ್ಷ ವಯಸ್ಸಿನ ಅರ್ಜುನ್, ಮತ್ತೆ 2,800 ಇಎಲ್‌ಒ ರೇಟಿಂಗ್ ತಲುಪಿದ್ದಾರೆ. ಫಿಡೆ ಕ್ರಮಾಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದ ಫ್ಯಾಬಿಯಾನೊ ಕರುವಾನಾ ಅವರನ್ನು ಹಿಂದೆಹಾಕಿದರು.
ಈ ಟೂರ್ನಿಯ ಮತ್ತೊಂದು ಅಚ್ಚರಿಯ ಫಲಿತಾಂಶದಲ್ಲಿ ಇರಾನಿನ ತಬಾತಬೇಯಿ, ಫ್ರಾನ್ಸ್‌ನ ಗ್ರ್ಯಾಂಡ್‌ಮಾಸ್ಟರ್ ಮ್ಯಾಕ್ಸಿಂ ವೇಷಿಯರ್ ಲಗ್ರಾವ್ ಅವರಿಗೆ ಆಘಾತ ನೀಡಿದರು.
ಎಂಟು ಆಟಗಾರರು ಕಣದಲ್ಲಿರುವ ಈ ಟೂರ್ನಿಯಲ್ಲಿ ಲೆವೊನ್ ಅರೊನಿಯನ್, ಇರಾನಿನ ಪರ್ಹಾಮ್ ಮಘಸೂಡ್ಲೂ ಮೇಲೆ ಜಯಗಳಿಸಿದರು. ಭಾರತದ ವಿದಿತ್ ಗುಜರಾತಿ, ಕೆಚ್ಚೆದೆಯ ಆಟದ ಮೂಲಕ ಸ್ಥಳೀಯ ಫೆವರೀಟ್ ಅರವಿಂದ ಚಿದಂಬರಂ ಜೊತೆ ಡ್ರಾ ಮಾಡಿಕೊಂಡರು. ಆ ಮೂಲಕ ಸತತ ಮೂರನೇ ಸೋಲಾಗುವುದನ್ನು ತಪ್ಪಿಸಿಕೊಂಡರು.
ಚಾಲೆಂಜರ್ಸ್ ವಿಭಾಗದಲ್ಲಿ ವಿ. ಪ್ರಣವ್, ಯಶಸ್ಸಿನ ಓಟ ಮುಂದುವರಿಸಿ ಕಾರ್ತಿಕೇಯನ್ ಮುರಳಿ ವಿರುದ್ಧ ಜಯಗಳಿಸಿದರು. ಸತತ ಮೂರನೇ ಜಯದೊಡನೆ ಅಗ್ರಸ್ಥಾನದಲ್ಲಿದ್ದಾರೆ. ಪ್ರಾಣೇಶ್ ಎಂ. ಇನ್ನೊಂದು ಪಂದ್ಯದಲ್ಲಿ ವೈಶಾಲಿ ರಮೇಶಬಾಬು ವಿರುದ್ಧ ಜಯಗಳಿಸಿ ತಮ್ಮ ಸ್ಥಿತಿ ಉತ್ತಮಪಡಿಸಿಕೊಂಡರು.
ರೌನಕ್ ಸಾಧ್ವಾನಿ ಮತ್ತು ಲಿಯೊನ್ ಲೂಕ್ ಮೆಂಡೋನ್ಸಾ ನಡುವಣ ಕುತೂಹಲಕರ ಪಂದ್ಯ ‘ಡ್ರಾ’ದಲ್ಲಿ ಅಂತ್ಯಗೊಂಡಿತು. ದ್ರೋಣವಲ್ಲಿ ಹಾರಿಕ ಮತ್ತು ಅಭಿಮನ್ಯು ಪುರಾಣಿಕ್ ಸಹ ಡ್ರಾಕ್ಕೆ ಸಹಿಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.