ಶಾರ್ಜಾ: ವಿಶ್ವದ ಏಳನೇ ಕ್ರಮಾಂಕದ ಆಟಗಾರ ಅರ್ಜುನ್ ಇರಿಗೇಶಿ, ಗ್ರ್ಯಾಂಡ್‌ಮಾಸ್ಟರ್‌ಗಳಾದ ಅರವಿಂದ್ ಚಿದಂಬರಮ್ ಮತ್ತು ಪಿ.ಇನಿಯನ್ ಅವರು ಶಾರ್ಜಾ ಮಾಸ್ಟರ್ಸ್ ಚೆಸ್ ಟೂರ್ನಿಯ ಮೊದಲ ಸುತ್ತಿನಲ್ಲಿ ಗೆಲುವು ದಾಖಲಿಸಿದರು.
ಮೊದಲ ದಿನವಾದ ಬುಧವಾರ ಕೆಲವು ಪ್ರಮುಖ ಆಟಗಾರರು ಕಠಿಣ ಪಂದ್ಯಗಳನ್ನು ಎದುರಿಸಿ ತಮಗಿಂತ ಕೆಳಕ್ರಮಾಂಕದ ಆಟಗಾರರ ಜೊತೆ ‘ಡ್ರಾ’ಕ್ಕೆ ಒಪ್ಪಬೇಕಾಯಿತು. 44 ಪಂದ್ಯಗಳ ಪೈಕಿ 18ರಲ್ಲಷ್ಟೇ ನಿರ್ಣಾಯಕ ಫಲಿತಾಂಶಗಳು ಬಂದವು.
ಅರ್ಜುನ್, ಅಜರ್‌ಬೈಜಾನ್‌ನ ಇಲ್ತಾಜ್ ಸಫಾರ್ಲಿ ವಿರುದ್ಧ ಜಯಗಳಿಸಿದರೆ, ಅರವಿಂದ್ ಅವರು ಸ್ವದೇಶದ ಭರತ್ ಸುಬ್ರಮಣಿಯಂ ಮತ್ತು ಇನಿಯನ್, ಇರಾನ್‌ನ ಇರಾನಿ ಪೌಯಾ ಅವರನ್ನು ಮಣಿಸಿದರು.
₹43.40 ಲಕ್ಷ ಬಹುಮಾನದ ಈ ಟೂರ್ನಿ ಪ್ರಬಲ ಕಣ ಹೊಂದಿದೆ. 88 ಆಟಗಾರರನ್ನು ಹೊಂದಿರುವ ಈ ಟೂರ್ನಿಯಲ್ಲಿ ಇನ್ನೂ ಎಂಟು ಸುತ್ತುಗಳು ಆಡಲು ಇವೆ.
ಭಾರತೀಯ ಮೂಲದ ಅಭಿಮನ್ಯು ಮಿಶ್ರಾ (ಅಮೆರಿಕ) ಮತ್ತು ಶ್ರೇಯಸ್ (ಇಂಗ್ಲೆಂಡ್) ಅವರು ಕ್ರಮವಾಗಿ ರಾಜಾ ರಿತ್ವಿಕ್ ಮತ್ತು ರಿನತ್ ಜಮಬಯೇವ್ (ಕಜಕಸ್ತಾನ) ಅವರನ್ನು ಮಣಿಸಿದರು.
ಎಸ್.ಎಲ್.ನಾರಾಯಣನ್, ಟರ್ಕಿಯ ಸನಲ್ ವಹಾಪ್ ಜೊತೆ ಡ್ರಾ ಮಾಡಿಕೊಂಡರು. ಟರ್ಕಿಯ ಇನ್ನೊಬ್ಬ ಆಟಗಾರ ಯಾಗಿಝ್ ಎರ್ಡೋಗ್ಮಸ್ ಅವರು ನಿಹಾಲ್ ಸರಿನ್ ಜೊತೆ ಪಾಯಿಂಟ್ ಹಂಚಿಕೊಂಡರು.
ಕಣದಲ್ಲಿರುವ ಏಕೈಕ ಮಹಿಳಾ ಆಟಗಾರ್ತಿ ಡಿ. ಹಾರಿಕಾ, ಅರ್ಮೆನಿಯಾದ ಮಾನ್ಯುವಲ್ ಪೆಟ್ರೊಸ್ಯಾನ್ ವಿರುದ್ಧ ಡ್ರಾ ಮಾಡಿಕೊಂಡಿದ್ದು ಕಡಿಮೆ ಸಾಧನೆ ಆಗಿರಲಿಲ್ಲ. ಟಾಟಾ ಸ್ಟೀಲ್ ಚಾಲೆಂಜರ್‌ನಲ್ಲಿ ಜಯಗಳಿಸಿದ್ದ ಗೋವಾದ ಯುವ ಆಟಗಾರ ಲಿಯಾನ್ ಲ್ಯೂಕ್ ಮೆಂಡೊನ್ಕಾ, ಪೋಲೆಂಡ್‌ನ ಮರ್ಸಿನ್ ಕ್ರಿಜಿನೋವಸ್ಕಿ ಅವರಿಗೆ ಮಣಿದರು.
ಎಸ್.ಪಿ.ಸೇತುರಾಮನ್, ಅಜರ್‌ಬೈಜಾನ್‌ನ ಟಿಮರ್ ರಾಡ್ಯಾಬೋವ್ ಅವರ ಜೊತೆ ಡ್ರಾ ಮಾಡಿಕೊಂಡರೆ, ಭಾರತದ ಇತರ ಆಟಗಾರರಾದ ಸಂಕಲ್ಪ್ ಗುಪ್ತಾ, ಬಿ. ಅಧಿಬನ್, ರೋನಕ್ ಸಾಧ್ವಾನಿ, ಅಭಿಜಿತ್ ಗುಪ್ತಾ ಅವರೂ ತಮ್ಮ ಪಂದ್ಯಗಳನ್ನು ಡ್ರಾ ಮಾಡಿಕೊಂಡರು. ಕನ್ನಡಿಗ, ಗ್ರ್ಯಾಂಡ್‌ಮಾಸ್ವರ್ ಪ್ರಣವ್ ಆನಂದ್, ಝೆಕ್ ರಿಪಬ್ಲಿಕ್‌ನ ಗುಯೆನ್ ಥಾಯ್ ದೈ ವಾನ್ ಅವರಿಗೆ ಶರಣಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.