ADVERTISEMENT

ಪ್ಯಾರಾ ಏಷ್ಯನ್‌ ಗೇಮ್ಸ್‌: ಶೀತಲ್‌ ದೇವಿಗೆ ‘ಚಿನ್ನ ಡಬಲ್‌’

ಪ್ಯಾರಾ ಏಷ್ಯನ್‌ ಗೇಮ್ಸ್‌: ಆರ್ಚರಿಯಲ್ಲಿ ಸಾಧನೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2023, 14:46 IST
Last Updated 27 ಅಕ್ಟೋಬರ್ 2023, 14:46 IST
ಮಹಿಳೆಯರ ಕಾಂಪೌಂಡ್‌ ಆರ್ಚರಿಯಲ್ಲಿ ಚಿನ್ನ ಗೆದ್ದ ಶೀತಲ್‌ ದೇವಿ –ಪಿಟಿಐ ಚಿತ್ರ
ಮಹಿಳೆಯರ ಕಾಂಪೌಂಡ್‌ ಆರ್ಚರಿಯಲ್ಲಿ ಚಿನ್ನ ಗೆದ್ದ ಶೀತಲ್‌ ದೇವಿ –ಪಿಟಿಐ ಚಿತ್ರ   

ಹಾಂಗ್‌ಝೌ (ಪಿಟಿಐ): ಆರ್ಚರಿ ಸ್ಪರ್ಧಿ ಶೀತಲ್‌ ದೇವಿ ಅವರು ಪ್ಯಾರಾ ಏಷ್ಯನ್‌ ಕ್ರೀಡಾಕೂಟದ ಒಂದೇ ಆವೃತ್ತಿಯಲ್ಲಿ ಎರಡು ಚಿನ್ನ ಗೆದ್ದ ಭಾರತದ ಮೊದಲ ಮಹಿಳಾ ಕ್ರೀಡಾಪಟು ಎಂಬ ಗೌರವಕ್ಕೆ ಪಾತ್ರರಾದರು.

ಶುಕ್ರವಾರ ನಡೆದ ಮಹಿಳೆಯರ ವೈಯಕ್ತಿಕ ಕಾಂಪೌಂಡ್‌ ವಿಭಾಗದ ಫೈನಲ್‌ನಲ್ಲಿ ಅವರು 144–142 ರಿಂದ ಸಿಂಗಪುರದ ಅಲೀಮ್‌ ನೂರ್ ಸಯೀದಾ ವಿರುದ್ಧ ಗೆದ್ದರು. ಇದಕ್ಕೂ ಮುನ್ನ ಅವರು ಮಹಿಳೆಯರ ತಂಡ ವಿಭಾಗದಲ್ಲಿ ಬಂಗಾರ ಜಯಿಸಿದ್ದರು.

ಜಮ್ಮು ಮತ್ತು ಕಾಶ್ಮೀರದ 16 ವರ್ಷದ  ಶೀತಲ್‌ ಅವರಿಗೆ ಎರಡೂ ಕೈಗಳಿಲ್ಲ. ಕಾಲಿನಿಂದಲೇ ಬಿಲ್ಲು–ಬಾಣ ಹಿಡಿದು ಗುರಿ ನಿಖರ ಗುರಿ ಸಾಧಿಸುವಲ್ಲಿ ಯಶಸ್ವಿಯಾದರು. ಮಹಿಳೆಯರ ಡಬಲ್ಸ್‌ನಲ್ಲಿ ಬೆಳ್ಳಿ ಜಯಿಸಿದ್ದ ಅವರು ಈ ಕೂಟದಲ್ಲಿ ‘ಹ್ಯಾಟ್ರಿಕ್‌’ ಪದಕಗಳ ಸಾಧನೆಗೆ ಭಾಜನರಾದರು.

ADVERTISEMENT

ಶೀತಲ್‌ ಅವರು ಜುಲೈನಲ್ಲಿ ಪ್ಯಾರಾ ವಿಶ್ವ ಆರ್ಚರಿ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆದ್ದುಕೊಂಡಿದ್ದರು.

ಮುಂದುವರಿದ ಪದಕ ಬೇಟೆ: ಪ್ಯಾರಾ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು ಪದಕ ಬೇಟೆ ಮುಂದುವರಿಸಿದ್ದಾರೆ. ಶುಕ್ರವಾರದ ಸ್ಪರ್ಧೆಗಳ ಅಂತ್ಯಕ್ಕೆ ಭಾರತ ಒಟ್ಟು 99 ಪದಕಗಳನ್ನು ಜಯಿಸಿದೆ. ಬ್ಯಾಡ್ಮಿಂಟನ್‌ನಲ್ಲಿ 9 ಪದಕಗಳು ಬಂದವು. ಒಂದು ದಿನದ ಸ್ಪರ್ಧೆಗಳು ಬಾಕಿಯುಳಿದಿದ್ದು, ಭಾರತ ಪದಕ ಪಟ್ಟಿಯಲ್ಲಿ ಆರನೇ ಸ್ಥಾನಲ್ಲಿದೆ. 

ಹಾಲಿ ಪ್ಯಾರಾಲಿಂಪಿಕ್‌ ಚಾಂಪಿಯನ್‌ ಪ್ರಮೋದ್‌ ಭಗತ್‌, ಸಿಂಗಲ್ಸ್‌ ಎಸ್‌ಎಲ್‌3 ವಿಭಾಗದಲ್ಲಿ ಚಿನ್ನ ಗೆದ್ದರು. ಫೈನಲ್‌ನಲ್ಲಿ ಅವರು 22–20, 21–19 ರಿಂದ ಭಾರತದವರೇ ಆದ ನಿತೇಶ್‌ ಕುಮಾರ್‌ ಅವರನ್ನು ಮಣಿಸಿದರು.

ಮಹಿಳೆಯರ ಎಸ್‌ಯು5 ವಿಭಾಗದ ಚಿನ್ನದ ಪದಕ ತುಳಸಿಮತಿ ಮುರುಗೇಶನ್‌ ಅವರಿಗೆ ಒಲಿಯಿತು. ಭಾರತದ ಆಟಗಾರ್ತಿ ಫೈನಲ್‌ನಲ್ಲಿ 21–19, 21–19 ರಿಂದ ಆತಿಥೇಯ ದೇಶದ ಯಾಂಗ್‌ ಕ್ಸಿಯುಕ್ಸಿಯಾ ವಿರುದ್ಧ ಗೆದ್ದರು.

ಕೃಷ್ಣ ನಗಾರ್ ಅವರು ಪುರುಷರ ಎಸ್‌ಎಚ್‌6 ವಿಭಾಗದ ಫೈನಲ್‌ನಲ್ಲಿ 10–21, 21–8, 11–21 ರಿಂದ ಹಾಂಗ್‌ಕಾಂಗ್‌ನ ಚು ಮಾನ್ ಕಾಯ್ ಎದುರು ಸೋತು ಬೆಳ್ಳಿ ತಮ್ಮದಾಗಿಸಿಕೊಂಡರು.

ಅಥ್ಲೆಟಿಕ್ಸ್‌ನಲ್ಲೂ ಭಾರತದ ಉತ್ತಮ ಪ್ರದರ್ಶನ ಮುಂದುವರಿಯಿತು. ರಮಣ್‌ ಶರ್ಮಾ ಮತ್ತು ಧರ್ಮರಾಜ್ ಅವರು 1,500 ಮೀ. ಓಟ (ಟಿ38) ಹಾಗೂ ಲಾಂಗ್‌ಜಂಪ್‌ (ಟಿ64) ನಲ್ಲಿ ಚಿನ್ನ ಗೆದ್ದುಕೊಂಡರು.

ಪುರುಷರ ಜಾವೆಲಿನ್‌ ಥ್ರೋ (ಎಫ್‌54) ಸ್ಪರ್ಧೆಯಲ್ಲಿ ಪ್ರದೀಪ್‌ ಕುಮಾರ್‌ ಮತ್ತು ಲಕ್ಷಿತ್‌ ಅವರು ಬೆಳ್ಳಿ ಹಾಗೂ ಕಂಚು ಜಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.