ADVERTISEMENT

Paris Olympics | ಅರ್ಷದ್ ಕೂಡ ನನ್ನ ಮಗ: ಹೃದಯ ಗೆದ್ದ ನೀರಜ್ ತಾಯಿ

ಪಿಟಿಐ
Published 9 ಆಗಸ್ಟ್ 2024, 9:09 IST
Last Updated 9 ಆಗಸ್ಟ್ 2024, 9:09 IST
<div class="paragraphs"><p>ಅರ್ಷದ್ ನದೀಂ,&nbsp;ನೀರಜ್ ಚೋಪ್ರಾ</p></div>

ಅರ್ಷದ್ ನದೀಂ, ನೀರಜ್ ಚೋಪ್ರಾ

   

ಪಿಟಿಐ ಚಿತ್ರ

ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿರುವ ಪಾಕಿಸ್ತಾನದ ಅರ್ಷದ್ ನದೀಂ ಅವರು ಕೂಡ ನನ್ನ ಮಗ ಎಂದು ಭಾರತದ ಸ್ಪರ್ಧಿ ನೀರಜ್ ಚೋಪ್ರಾ ಅವರ ತಾಯಿ ಸರೋಜ್ ದೇವಿ ತಿಳಿಸಿದ್ದಾರೆ.

ADVERTISEMENT

ಆ ಮೂಲಕ ನೀರಜ್ ಚೋಪ್ರಾ ಅವರ ತಾಯಿ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

ಪ್ಯಾರಿಸ್ ಕ್ರೀಡಾಂಗಣದಲ್ಲಿ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ಸ್ಪರ್ಧಿಗಳ ನಡುವೆ ನಿಕಟ ಸ್ಪರ್ಧೆ ಏರ್ಪಟ್ಟಿತ್ತು. ಆದರೆ ಟೋಕಿಯೊದ ಚಿನ್ನ ಸಾಧನೆ ಮರುಕಳಿಸಲು ನೀರಜ್‌ಗೆ ಸಾಧ್ಯವಾಗಲಿಲ್ಲ. ಈ ಆವೃತ್ತಿಯ (89.45 ಮೀಟರ್) ಶ್ರೇಷ್ಠ ಸಾಧನೆ ಮಾಡಿದರೂ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು.

ಮತ್ತೊಂದೆಡೆ ಒಲಿಂಪಿಕ್ಸ್ ದಾಖಲೆಯೊಂದಿಗೆ (92.97 ಮೀಟರ್) ಪಾಕಿಸ್ತಾನದ ಅರ್ಷದ್ ನದೀಂ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.

'ನೀರಜ್‌ಗೆ ಬೆಳ್ಳಿ ಪದಕ ಸಿಕ್ಕಿರುವುದರಿಂದ ಸಂತಸಗೊಂಡಿದ್ದೇನೆ. ಚಿನ್ನದ ಪದಕ ಪಡೆದವನೂ ನನ್ನ ಮಗ, ಬೆಳ್ಳಿ ಗೆದ್ದವನೂ ನನ್ನ ಮಗ. ಎಲ್ಲ ಕ್ರೀಡಾಪಟುಗಳು ತುಂಬಾನೇ ಶ್ರಮಪಟ್ಟಿದ್ದಾರೆ' ಎಂದು ಸರೋಜ್ ದೇವಿ ಹೇಳಿದ್ದಾರೆ.

'ನದೀಮ್ ಕೂಡ ಒಳ್ಳೆಯವನು, ಚೆನ್ನಾಗಿ ಆಡುತ್ತಾನೆ. ನೀರಜ್ ಹಾಗೂ ನದೀಮ್ ನಡುವೆ ಯಾವುದೇ ವ್ಯತ್ಯಾಸವಿಲ್ಲ. ನಾವು ಚಿನ್ನ ಮತ್ತು ಬೆಳ್ಳಿಯನ್ನು ಗೆದ್ದಿದ್ದೇವೆ. ನಮ್ಮ ಪಾಲಿಗೆ ಯಾವುದೇ ಭೇದಭಾವವಿಲ್ಲ' ಎಂದು ಅವರು ತಿಳಿಸಿದ್ದಾರೆ.

ಮಗ ನೀರಜ್ ಮನೆಗೆ ಮರಳಿದಾಗ ನೆಚ್ಚಿನ ಖಾದ್ಯ ಅವರಿಗಾಗಿ ಕಾಯುತ್ತಿದೆ ಎಂದು ಸರೋಜ್ ದೇವಿ ತಿಳಿಸಿದ್ದಾರೆ.

ಒಲಿಂಪಿಕ್ ಕೂಟದಲ್ಲಿ ಎರಡು ಪದಕಗಳನ್ನು ಗೆದ್ದ ಭಾರತದ ಮೊದಲ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ನೀರಜ್ ಪಾತ್ರರಾಗಿದ್ದರು. ಒಟ್ಟಾರೆಯಾಗಿ ಒಲಿಂಪಿಕ್ಸ್‌ನಲ್ಲಿ ಸತತ ಎರಡನೇ ಪದಕ ಗೆದ್ದ ಭಾರತದ ಮೂರನೇ ಕ್ರೀಡಾಪಟು ಎನಿಸಿದ್ದರು.

ಕ್ರೀಡಾಂಗಣದಲ್ಲಿ ಪ್ರತಿಸ್ಪರ್ಧಿಗಳಾದರೂ, ಅದರಾಚೆಗೆ ನದೀಮ್ ಮತ್ತು ಚೋಪ್ರಾ ಒಳ್ಳೆಯ ಗೆಳೆಯರಾಗಿದ್ದಾರೆ.

ನೀರಜ್ ಕೂಡ ನನ್ನ ಮಗ: ಅರ್ಷದ್ ತಾಯಿ

ಮತ್ತೊಂದೆಡೆ ಅರ್ಷದ್ ಅವರ ತಾಯಿಯೂ ನೀರಜ್‌ ಕೂಡಾ ನನ್ನ ಮಗ ಎಂದು ಹೇಳಿರುವ ವಿಡಿಯೊ ಎಕ್ಸ್‌ನಲ್ಲಿದೆ. ನೀರಜ್ ಅವರು ಅರ್ಷದ್‌ನ ಸಹೋದರ ಹಾಗೂ ಗೆಳೆಯ ಆಗಿದ್ದು, ಅವರಿಗೂ ಯಶಸ್ಸು ಸಿಗಲಿ ಎಂದು ಹಾರೈಸಿದ್ದಾರೆ.

ಕಾದಿದೆ ಚೂರ್ಮಾ:

ರಾಜಸ್ತಾನ, ಹರಿಯಾಣ, ಅವಧಿ ಭಾಗದಲ್ಲಿ ಹೆಚ್ಚು ಜನಪ್ರಿಯ ಖಾದ್ಯವಾಗಿರುವ ಚುರ್ಮಾ ಎಂದರೆ ನೀರಜ್‌ಗೆ ಅಚ್ಚುಮೆಚ್ಚು. ಅದನ್ನೇ ಮಾಡಿ ಬಡಿಸಲು ತಾಯಿ ಸರೋಜ್ ಸಜ್ಜಾಗಿದ್ದಾರೆ. ಗೋಧಿಹಿಟ್ಟಿಗೆ, ತುಪ್ಪ, ಬೆಲ್ಲ ಸೇರಿಸಿ ತಯಾರಿಸುವ ಸಿಹಿ ಖಾದ್ಯ ಇದು.

ಸರೋಜ್ ದೇವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.