ನವದೆಹಲಿ: ಒಬ್ಬ ಆಟಗಾರನ ಜಯದ ಶ್ರೇಯವನ್ನು ಪಡೆಯಲು ಎಲ್ಲರೂ ಧಾವಿಸುತ್ತಾರೆ. ಆದರೆ ಸೋತಾಗ ತಪ್ಪೆಲ್ಲವೂ ಆ ಕ್ರೀಡಾಪಟುವಿನದ್ದೇ ಆಗುತ್ತದೆ. ಇದು ಬೇಸರದ ಸಂಗತಿ. ಗೆಲುವು ತಂಡದ ಪ್ರಯತ್ನದ ಫಲ. ಸೋಲು ಕೂಡ ತಂಡದ್ದೇ ಜವಾಬ್ದಾರಿ. ಪರಾಭವಗೊಂಡಾಗ ಏಕಾಏಕಿ ಆಟಗಾರನನ್ನು ಬಸ್ ಕೆಳಗೆ ಬಿಸಾಕಬಾರದು ಎಂದು ಬ್ಯಾಡ್ಮಿಂಟನ್ ಆಟಗಾರ್ತಿ ಅಶ್ವಿನಿ ಪೊನ್ನಪ್ಪ ಹೇಳಿದ್ದಾರೆ.
ಸೋಮವಾರ ಬ್ಯಾಡ್ಮಿಂಟನ್ ನಲ್ಲಿ ಪುರುಷರ ಸಿಂಗಲ್ಸ್ ಕಂಚಿನ ಪದಕ ಸುತ್ತಿನಲ್ಲಿ ಲಕ್ಷ್ಯ ಸೇನ್ ಸೋತ ನಂತರ ಅವರ ಮೆಂಟರ್ ಪ್ರಕಾಶ್ ಪಡುಕೋಣೆ ಅವರು ನೀಡಿದ್ದ ಹೇಳಿಕೆಗೆ ಅಶ್ವಿನಿ ಪ್ರತಿಕ್ರಿಯಿಸಿದ್ದಾರೆ. ಅವರು ಇನ್ಸ್ಟಾಗ್ರಾಮ್‌ನಲ್ಲಿ ತಮ್ಮ ಅಭಿಪ್ರಾಯ ಪೋಸ್ಟ್ ಮಾಡಿದ್ದಾರೆ.
‘ಆಟಗಾರರಿಗೆ ಎಲ್ಲ ಸೌಲಭ್ಯಗಳು ಮತ್ತು ನೆರವು ಸಿಗುತ್ತಿದೆ. ಆದ್ದರಿಂದ ಸೋಲು ಮತ್ತು ಗೆಲುವಿನ ಉತ್ತರದಾಯಿತ್ವವನ್ನು ಕ್ರೀಡಾಪಟುಗಳೇ ಹೊರಲು ಇದು ಸಕಾಲವಾಗಿದೆ. ಉತ್ತಮ ಫಲಿತಾಂಶ ನೀಡುವ ಹೊಣೆಗಾರಿಕೆ ನಿಭಾಯಿಸಬೇಕು’ ಎಂದು ಬ್ಯಾಡ್ಮಿಂಟನ್ ದಂತಕಥೆ ಪ್ರಕಾಶ್ ಹೇಳಿದ್ದರು. ಆಟಗಾರರು ಒತ್ತಡ ಪರಿಸ್ಥಿತಿಯನ್ನು ನಿಭಾಯಿಸಲು ಕಲಿಯಬೇಕು. ಅವರಿಗೆ ಮನೋವಿಜ್ಞಾನ ಪರಿಣತರಿಂದ ತರಬೇತಿ ಕೊಡಿಸಬೇಕು ಎಂದೂ ಹೇಳಿದ್ದರು.
ಅಶ್ವಿನಿ ಪೊನ್ನಪ್ಪ ಅವರು ಒಲಿಂಪಿಕ್ಸ್‌ನಲ್ಲಿ ಮಹಿಳೆಯರ ಡಬಲ್ಸ್‌ನಲ್ಲಿ ತನಿಶಾ ಕ್ರಾಸ್ಟೊ ಅವರೊಂದಿಗೆ ಆಡಿದ್ದರು.
‘ಆಟಗಾರ ಸೋತಾಗ ಕೋಚ್‌ಗಳು ಯಾಕೆ ಹೊಣೆಗಾರರಾಗುವುದಿಲ್ಲ. ಪೂರ್ವಸಿದ್ಧತೆಯಲ್ಲಿ ಆಗಿರುವ ಲೋಪ ಗಳ ಬಗ್ಗೆ ಯಾಕೆ ಹೇಳುವುದಿಲ್ಲ?. ಆಟಗಾರ ಗೆದ್ದಾಗ ಅದರ ಮೊದಲ ಶ್ರೇಯ ಪಡೆಯುವುದು ಕೋಚ್‌ಗಳೇ ಆಗಿರುತ್ತಾರೆ. ಹೊಣೆಗಾರಿಕೆಯನ್ನೂ ನಿಭಾಯಿಸಬೇಕು ಅವರು’ ಎಂದು ಅಶ್ವಿನಿ ಖಾರವಾಗಿ ಬರೆದಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಆಟಗಾರ್ತಿ ಜ್ವಾಲಾ ಗುಟ್ಟಾ, ‘ಆಟಗಾರರೂ ಸೋಲಿನ ಹೊಣೆಯನ್ನು ಏಕೆ ಹೊರಬಾರದು. ಗೆದ್ದಾಗ ಎಲ್ಲ ಲಾಭವನ್ನೂ ತಾವೇ ತೆಗೆದುಕೊಳ್ಳುತ್ತಾರೆಲ್ಲವೇ. ಕೋಚ್ ಅಥವಾ ನೆರವು ಸಿಬ್ಬಂದಿಗೆ ಹಂಚುತ್ತಾರೆಯೇ? ಅಟಗಾರರು ಒಂದು ಹಂತ ತಲುಪಿದ ನಂತರ ಜವಾಬ್ದಾರಿ ತೆಗೆದುಕೊಳ್ಳಬೇಕು’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.