ADVERTISEMENT

ಬ್ಯಾಡ್ಮಿಂಟನ್‌ | ಅಶ್ವಿನಿ– ತನಿಶಾಗೆ ಗುವಾಹಟಿ ಮಾಸ್ಟರ್‌ 100 ಪ್ರಶಸ್ತಿ

ಪಿಟಿಐ
Published 10 ಡಿಸೆಂಬರ್ 2023, 14:40 IST
Last Updated 10 ಡಿಸೆಂಬರ್ 2023, 14:40 IST
ತನಿಶಾ ಕ್ರಾಸ್ಟೊ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿ. 
ತನಿಶಾ ಕ್ರಾಸ್ಟೊ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿ.     

ಗುವಾಹಟಿ: ಭಾರತದ ಮಹಿಳಾ ಡಬಲ್ಸ್‌ ಜೋಡಿಯಾದ ಅಶ್ವಿನಿ ಪೊನ್ನಪ್ಪ– ತನಿಶಾ ಕ್ರಾಸ್ಟೊ, ಭಾನುವಾರ ಗುವಾಹಟಿ ಮಾಸ್ಟರ್ಸ್‌ನಲ್ಲಿ ಚೀನಾ ತೈಪೆಯ ಸುಂಗ್ ಶುವೊ ಯುನ್ ಮತ್ತು ಯು ಚಿಯೆನ್ ಹುಯಿ ಅವರನ್ನು ನೇರ ಆಟಗಳಿಂದ ಸೋಲಿಸಿ ಎರಡನೇ ಸಲ ಸೂಪರ್ 100 ಮಟ್ಟದ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿತು.

ಎರಡನೇ ಶ್ರೇಯಾಂಕದ ಭಾರತದ ಜೋಡಿ, 40 ನಿಮಿಷಗಳ ಫೈನಲ್‌ನಲ್ಲಿ ವಿಶ್ವ ಕ್ರಮಾಂಕದಲ್ಲಿ 81ನೇ ಸ್ಥಾನದಲ್ಲಿರುವ ಜೋಡಿಯನ್ನು 21–13, 21–19 ರಲ್ಲಿ ಪರಾಭವಗೊಳಿಸಿತು. ಇವರಿಬ್ಬರು ಕಳೆದ ವಾರ ಲಖನೌದಲ್ಲಿ ನಡೆದ ಸೈಯ್ಯದ್ ಮೋದಿ ಇಂಟರ್‌ನ್ಯಾಷನಲ್ ಸೂಪರ್ 300 ಟೂರ್ನಿಯಲ್ಲಿ ರನ್ನರ್ಸ್‌ ಅಪ್ ಆಗಿದ್ದರು. 

ಈ ವರ್ಷದ ಆರಂಭದಲ್ಲಿ 34 ವರ್ಷದ ಅಶ್ವಿನಿ ಮತ್ತು 20 ವರ್ಷದ ತನಿಶಾ ಡಬಲ್ಸ್‌ನಲ್ಲಿ ಜೊತೆಯಾದ ಮೇಲೆ ಗೆಲ್ಲುತ್ತಿರುವ ಒಟ್ಟಾರೆ ಮೂರನೇ ಪ್ರಶಸ್ತಿ ಇದು. ಅಬುದಾಬಿ ಮಾಸ್ಟರ್ಸ್ ಸೂಪರ್ 100 ಮತ್ತು ನ್ಯಾಂಟೆಸ್ ಇಂಟರ್‌ನ್ಯಾಷನಲ್ ಚಾಲೆಂಜ್ ಟೂರ್ನಿ ಗೆದ್ದ ಇನ್ನೆರಡು ಟೂರ್ನಿಗಳಾಗಿವೆ.

ADVERTISEMENT

ಅಶ್ವಿನಿ ಇದಕ್ಕೆ ಮೊದಲು ಜ್ವಾಲಾ ಗುಟ್ಟಾ ಜೊತೆ ಡಬಲ್ಸ್‌ನಲ್ಲಿ ಸಾಕಷ್ಟು ಯಶಸ್ಸು ಕಂಡಿದ್ದರು. ನಂತರ ಎನ್‌.ಸಿಕ್ಕಿ ರೆಡ್ಡಿ ಜೊತೆಯೂ ಡಬಲ್ಸ್‌ನಲ್ಲಿ ಆಡಿದ್ದರು. ದುಬೈನಲ್ಲಿ ಜನಿಸಿರುವ ತನಿಶಾ ಜೊತೆ ಈ ವರ್ಷದ ಜನವರಿಯಲ್ಲಿ ಆಡಲು ಆರಂಭಿಸಿದ್ದರು. ತನಿಶಾ ಈ ಮೊದಲು ಬಹರೇನ್ ತಂಡವನ್ನು ಪ್ರತಿನಿಧಿಸಿ 2016ರಲ್ಲಿ ಬಹರೇನ್ ಇಂಟರ್‌ನ್ಯಾಷನಲ್ ಚಾಲೆಂಜ್ ಟೂರ್ನಿಯಲ್ಲಿ ತಮ್ಮ ಮೊದಲ ಪ್ರಶಸ್ತಿ ಜಯಿಸಿದ್ದರು. 2018ರಿಂದ ಭಾರತದಲ್ಲಿ ನೆಲೆಸಿದ್ದು, ದೇಶಿಯ ಟೂರ್ನಿಗಳಲ್ಲಿ ಗೋವಾ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಮೂರು ವರ್ಷಗಳ ನಂತರ ಅವರು ಉಬರ್‌ ಕಪ್ ಮತ್ತು ಸುದಿರ್‌ಮನ್ ಕಪ್‌ ಟೂರ್ನಿಗಳಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.