ತಾಷ್ಕೆಂಟ್: ಕಾಂಪೌಂಡ್ ವಿಭಾಗದಲ್ಲಿ ಪಾರಮ್ಯ ಸಾಧಿಸುವುದರೊಂದಿಗೆ ಭಾರತದ ಆರ್ಚರಿಪಟುಗಳು ಇಲ್ಲಿ ನಡೆಯುತ್ತಿರುವ ಏಷ್ಯಾಕಪ್ ಸ್ಟೇಜ್ 2 ವಿಶ್ವ ರ‍್ಯಾಂಕಿಂಗ್ ಟೂರ್ನಿಯಲ್ಲಿ ಒಟ್ಟು 14 (ಏಳು ಚಿನ್ನ, ಐದು ಬೆಳ್ಳಿ ಮತ್ತು ಎರಡು ಕಂಚು) ಪದಕಗಳನ್ನು ಜಯಿಸಿದರು.
ಮಹಿಳೆಯರ ಕಾಂಪೌಂಡ್ ತಂಡ ವಿಭಾಗದಲ್ಲಿ ಪರ್ಣೀತ್ ಕೌರ್, ರಾಗಿಣಿ ಮಾರ್ಕೂ ಮತ್ತು ಪ್ರಗತಿ 232-223ರಿಮದ ಕಜಕಸ್ತಾನ ತಂಡವನ್ನು ಸೋಲಿಸಿ ಮೊದಲ ಚಿನ್ನ ಗೆದ್ದರು.
ಅಭಿಷೇಕ ವರ್ಮಾ, ಕುಶಾಲ್ ದಲಾಲ್ ಮತ್ತು ಅಮಿತ್ ಅವರನ್ನೊಳಗೊಂಡ ಪುರುಷರ ತಂಡವೂ 233-226ರಿಂದ ಹಾಂಗ್‌ಕಾಂಗ್ ಮೇಲೆ ಗೆದ್ದು ಚಿನ್ನದ ಪದಕಕ್ಕೆ ಮುತ್ತಿಟ್ಟಿತು. ಮಿಶ್ರ ತಂಡ ವಿಭಾಗದಲ್ಲಿ ಅಭಿಷೇಕ್ –ಪರ್ಣಿತ್ ಅಗ್ರಸ್ಥಾನ ಗಳಿಸಿದರು.
ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ರಾಗಿಣಿ ಅವರು ಭಾರತದವರೇ ಆದ ಪ್ರಗತಿ ಅವರನ್ನು ಮಣಿಸಿ ಚಿನ್ನ ಗೆದ್ದರು.
ಪುರುಷರ ಕಾಂಪೌಂಡ್ ವೈಯಕ್ತಿಕ ವಿಭಾಗದ ಫೈನಲ್‌ನಲ್ಲಿ ಅಭಿಷೇಕ್ ಅವರು ಅಮಿತ್ ಅವರಿಗೆ ಸೋಲುಣಿಸಿದರು.
ಪುರುಷರ ರಿಕರ್ವ್ ವಿಭಾಗದ ಫೈನಲ್‌ನಲ್ಲಿ ಮೃಣಾಲ್ ಚೌಹಾನ್ ಅವರು 2–6ರಿಂದ ಚೀನಾದ ವಾಂಗ್ ಬವೊಬಿನ್ ಎದುರು ಸೋತರು. ಮಹಿಳೆಯರ ವಿಭಾಗದಲ್ಲಿ ಸಂಗೀತಾ 3-7ರಿಂದ ಚೀನಾದ ವು ಷಿಯಾನ್ ಎದುರು ಮಣಿದರು.
ಪುರುಷರ ತಂಡ ವಿಭಾಗದ ಚಿನ್ನದ ಪದಕದ ಸುತ್ತಿನಲ್ಲಿ ಮೃಣಾಲ್–ತುಷಾರ್ ಶೆಲಕೆ ಅವರಿಗೆ 5–1ರಿಂದ ಚೀನಾ ವಿರುದ್ಧ ಗೆಲುವು ಒಲಿಯಿತು.
ಮಿಶ್ರ ತಂಡ ವಿಭಾಗದ ಫೈನಲ್‌ನಲ್ಲಿ ಮೃಣಾಲ್–ಸಂಗೀತಾ 5-4ರಿಂದ ಚೀನಾ ತಂಡವನ್ನು ಮಣಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.