ದೋಹಾ (ಪಿಟಿಐ):ಟ್ರ್ಯಾಕ್‌ನಲ್ಲಿ ಮಿಂಚು ಹರಿಸಿದ ಪಿ.ಯು.ಚಿತ್ರಾ, ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಟ್ಟರು.
ಮಹಿಳೆಯರ 1500 ಮೀಟರ್ಸ್ ಓಟದ ಸ್ಪರ್ಧೆಯಲ್ಲಿ ಅವರು 4 ನಿಮಿಷ 14.56 ಸೆಕೆಂಡ್‌ಗಳಲ್ಲಿ ಅಂತಿಮ ಗೆರೆಯನ್ನು ದಾಟಿದರು. ಬಹರೇನ್‌ನ ಟೈಗಿಸ್ಟ್ ಗಶಾವ್, ಭಾರತದ ಓಟಗಾರ್ತಿಗೆ ತೀವ್ರ ಪೈಪೋಟಿ ನೀಡಿದರು. 4 ನಿಮಿಷ 14.81 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ ಅವರು ಬೆಳ್ಳಿ ಪದಕ ಗೆದ್ದರು.
ಪುರುಷರ1500 ಮೀಟರ್ಸ್ ಓಟದ ಸ್ಪರ್ಧೆಯಲ್ಲಿಅಜಯ್ ಕುಮಾರ್ ಸರೋಜ್ ಬೆಳ್ಳಿಗೆ ಮುತ್ತಿಕ್ಕಿದ್ದರೆ, ಮಹಿಳೆಯರ 200 ಮೀಟರ್ಸ್ ಓಟದ ಸ್ಪರ್ಧೆಯಲ್ಲಿ ದ್ಯುತಿ ಚಾಂದ್23.24 ಸೆಕೆಂಡ್‌ಗಳಲ್ಲಿ ಅಂತಿಮ ರೇಖೆ ದಾಟಿ ಕಂಚಿನ ಪದಕ ಗಳಿಸಿದರು.
ಮಹಿಳೆಯರ 4x400 ಮೀ. ರಿಲೇಯಲ್ಲಿ ಪ್ರಾಚಿ, ಎಂ.ಆರ್.ಪೂವಮ್ಮ, ಸರಿತಾಬೆನ್ ಗಾಯಕ್‌ವಾಡ್ ಮತ್ತು ವಿ.ಕೆ.ವಿಸ್ಮಯಾ 3 ನಿಮಿಷ 43.18 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಬೆಳ್ಳಿ ಗೆದ್ದರು. ಕೇವಲ 00.35 ಸೆಕೆಂಡ್‌ಗಳ ಅಂತರದಲ್ಲಿ ಭಾರತಕ್ಕೆ ಚಿನ್ನದ ಪದಕ ಕೈತಪ್ಪಿತು. ಬಹರೇನ್ ಚಿನ್ನದ ಪದಕ ತನ್ನದಾಗಿಸಿಕೊಂಡಿತು.
ಪುರುಷರ ರಿಲೇಯಲ್ಲಿ ನಿರಾಸೆ: ಭಾರತದ ಪುರುಷರ 4x400 ರಿಲೇ ತಂಡ ನಿರಾಸೆ ಅನುಭವಿಸಿತು. ಕೆ.ಎಸ್.ಜೀವನ್, ಕುಂಙು ಮೊಹಮ್ಮದ್, ಮೊಹಮ್ಮದ್ ಅನಾಸ್ ಮತ್ತು ಆರೋಕ್ಯ ರಾಜೀವ್ ಅವರನ್ನು ಒಳಗೊಂಡ ತಂಡ ಎರಡನೇ ಸ್ಥಾನ ಪಡೆದಿತ್ತು. ಆದರೆ ನಿಯಮವನ್ನು ಉಲ್ಲಂಘಿಸಿದೆ ಎಂಬ ಚೀನಾದ ಆರೋಪವನ್ನು ಎತ್ತಿ ಹಿಡಿದ ಅಧಿಕಾರಿಗಳು ಭಾರತ ತಂಡವನ್ನು ಅನರ್ಹಗೊಳಿಸಿದರು.
ಚಾಂಪಿಯನ್‌ಷಿಪ್‌ನಲ್ಲಿ ಭಾರತ ಒಟ್ಟು ಮೂರು ಚಿನ್ನ, ಏಳು ಬೆಳ್ಳಿ, ಏಳು ಕಂಚಿನೊಂದಿಗೆ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಗಳಿಸಿದೆ. ಬಹರೇನ್, ಚೀನಾ ಮತ್ತು ಜಪಾನ್ ಕ್ರಮವಾಗಿ ಮೊದಲ ಮೂರು ಸ್ಥಾನಗಳನ್ನು ಗಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.