ADVERTISEMENT

ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ: ನಾಲ್ಕರ ಘಟ್ಟಕ್ಕೆ ಅಜೇಯ ಭಾರತ

ಪಿಟಿಐ
Published 18 ನವೆಂಬರ್ 2024, 14:35 IST
Last Updated 18 ನವೆಂಬರ್ 2024, 14:35 IST
<div class="paragraphs"><p>ಮಹಿಳೆಯರ ಏಷ್ಯನ್ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಯಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಜಪಾನ್ ತಂಡದ ಎದುರು ಗೋಲು ಗಳಿಸುವ ಪ್ರಯತ್ನದಲ್ಲಿ ಭಾರತದ ಆಟಗಾರ್ತಿಯರು </p></div>

ಮಹಿಳೆಯರ ಏಷ್ಯನ್ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಯಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಜಪಾನ್ ತಂಡದ ಎದುರು ಗೋಲು ಗಳಿಸುವ ಪ್ರಯತ್ನದಲ್ಲಿ ಭಾರತದ ಆಟಗಾರ್ತಿಯರು

   

–ಪಿಟಿಐ ಚಿತ್ರ

ರಾಜಗೀರ್‌ (ಬಿಹರ): ಹಾಲಿ ಚಾಂಪಿಯನ್‌ ಭಾರತ ಹಾಕಿ ತಂಡ ಅಜೇಯ ದಾಖಲೆಯೊಂದಿಗೆ ಮಹಿಳಾ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದೆ. ಭಾನುವಾರ ನಡೆದ ರೌಂಡ್ ರಾಬಿನ್ ಲೀಗ್ ಪಂದ್ಯದಲ್ಲಿ ಜಪಾನ್‌ ವಿರುದ್ಧ 3–0 ಗೋಲುಗಳಿಂದ ಭರ್ಜರಿ ಗೆಲುವು ಸಾಧಿಸಿತು.

ADVERTISEMENT

ಅಮೋಘ ಲಯ ಮುಂದುವರೆಸಿದ ತಾರಾ ಸ್ಟ್ರೈಕರ್‌ ದೀಪಿಕಾ ಕೊನೆಯ ಕ್ವಾರ್ಟರ್‌ನಲ್ಲಿ ಎರಡು ಪೆನಾಲ್ಟಿ ಕಾರ್ನರ್‌ಗಳನ್ನು ಗೋಲುಗಳಲ್ಲಿ (47, 48ನೇ ನಿಮಿಷ) ಪರಿವರ್ತಿಸಿದರು. ಉಪನಾಯಕಿ ನವನೀತ್‌ ಕೌರ್‌ (37ನೇ ನಿಮಿಷ) ಒಂದು ಗೋಲು ಹೊಡೆದರು. 

ಈ ಗೆಲುವಿನೊಂದಿಗೆ ಭಾರತ ತಂಡ ಐದು ಪಂದ್ಯಗಳಿಂದ 15 ಅಂಕ ಕಲೆ ಹಾಕಿ ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.  ಮಂಗಳವಾರ ನಡೆಯುವ ಸೆಮಿಫೈನಲ್‌ನಲ್ಲಿ ಭಾರತ ಪಾಯಿಂಟ್‌ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಜಪಾನ್‌ ತಂಡವನ್ನು ಎದುರಿಸಲಿದೆ. ಮತ್ತೊಂದು ಸೆಮಿಯಲ್ಲಿ ಮೂರನೇ ಸ್ಥಾನದಲ್ಲಿರುವ  ಚೀನಾ ತಂಡವು ಮಲೇಷ್ಯಾ ತಂಡವನ್ನು ಎದುರಿಸಲಿದೆ. 

ಟೂರ್ನಿಯಲ್ಲಿ ದೀಪಿಕಾ (10 ಗೋಲು) ಅತಿ ಹೆಚ್ಚು ಗೋಲುಗಳನ್ನು ಹೊಡೆದ ಆಟಗಾರ್ತಿಯಾಗಿದ್ದಾರೆ. ಇದರಲ್ಲಿ ನಾಲ್ಕು ಫೀಲ್ಡ್‌ ಗೋಲು, ಐದು ಪೆನಾಲ್ಟಿ ಕಾರ್ನರ್‌ ಮತ್ತು ಒಂದು ಪೆನಾಲ್ಟಿ ಸ್ಟ್ರೋಕ್‌ ಒಳಗೊಂಡಿದೆ.

ಪಂದ್ಯದ ಆರಂಭದಿಂದಲೇ ಭಾರತ ಸಾಲು ಸಾಲು ಪೆನಾಲ್ಟಿ ಕಾರ್ನರ್‌ ಅವಕಾಶಗಳನ್ನು ಪಡೆಯಿತು. ಎಂಟನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್‌ನಲ್ಲಿ ಸ್ಟ್ರೈಕರ್‌ ದೀಪಿಕಾ ಹೊಡೆದ ಚೆಂಡನ್ನು ಜಪಾನ್‌ ತಂಡದ ಗೋಲ್‌ಕೀಪರ್‌ ಯು ಕುಡೊ ತಡೆದ ರೀತಿ ಅದ್ಭುತವಾಗಿತ್ತು. 13ನೇ ನಿಮಿಷದಲ್ಲಿ ಭಾರತ ಮತ್ತೆ ಪೆನಾಲ್ಟಿ ಅವಕಾಶ ಪಡೆಯಿತು. ಆದರೆ ಇದನ್ನು ವ್ಯರ್ಥ ಮಾಡಿತು. 

ಕೊನೆಗೂ 37ನೇ ನಿಮಿಷದಲ್ಲಿ ಎದುರಾಳಿಗಳನ್ನು ವಂಚಿಸುವಲ್ಲಿ ಭಾರತ ಯಶಸ್ವಿಯಾಯಿತು. ನವನೀತ್‌  ಚಾಕಚಕ್ಯತೆಯಿಂದ ರಿವರ್ಸ್‌ ಹೊಡೆತ ಪ್ರಯೋಗಿಸಿ  ಗೋಲು ಗಳಿಸಿದರು.

47ನೇ ನಿಮಿಷದಲ್ಲಿ ಭಾರತ ಪ್ರಾಬಲ್ಯ ಮೆರೆದು ಸತತ ಮೂರು ಪೆನಾಲ್ಟಿ ಕಾರ್ನರ್ ಅವಕಾಶ ಪಡೆಯಿತು. ಕೊನೆಗೂ ಸ್ಟ್ರೈಕರ್‌ ದೀಪಿಕಾ ಡ್ರ್ಯಾಗ್‌ಫ್ಲಿಕ್‌ ಹೊಡೆತದ ನೆರವಿನಿಂದ ಗೋಲು ದಾಖಲಿಸಿದರು.

ಒಂದೇ ನಿಮಿಷದ ಅಂತರದಲ್ಲಿ ಬಲಶಾಲಿ ಹೊಡೆತದ ನೆರವಿನಿಂದ ಮತ್ತೊಂದು ಗೋಲು ಹೊಡೆದು ಗೆಲುವನ್ನು ಖಚಿತಪಡಿಸಿದರು.

ಭಾರತದ ಡಿಫೆನ್ಸರ್‌ಗಳಾದ ಉದಿತಾ ಮತ್ತು ಸುಶೀಲಾ ಚಾನು ಚಾಣಾಕ್ಷ ನಡೆಯಿಂದಾಗಿ ಜಪಾನ್‌ ತಂಡಕ್ಕೆ ಗೋಲ್‌ ಪೋಸ್ಟ್‌ ಬಳಿ ಚೆಂಡನ್ನು ಬರಲು ಬಿಡಲಿಲ್ಲ. ನಾಯಕಿ ಸಲೀಮಾ ಟೆಟೆ, ನೇಹಾ ಮತ್ತು ಶರ್ಮಿಳಾ ದೇವಿ ಮಿಡ್‌ಫೀಲ್ಡ್‌ನಲ್ಲಿ ಅವಕಾಶಗಳನ್ನು ಸೃಷ್ಟಿಸಿ ಜಾಣತನದಿಂದ ಕೌಶಲ್ಯ ಮೆರೆದರು. 

ಮತ್ತೊಂದು ಪಂದ್ಯದಲ್ಲಿ ಮಲೇಷ್ಯಾ 2–0 ರಿಂದ ಥಾಯ್ಲೆಂಡ್‌ ತಂಡವನ್ನು ಮಣಿಸಿತು. ಚೀನಾ 2–0ರಿಂದ ದಕ್ಷಿಣ ಕೊರಿಯಾ ತಂಡವನ್ನು ಸೋಲಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.