ಬಿಷ್ಕೆಕ್ (ಕಿರ್ಗಿಸ್ಥಾನ): ಭಾರತದ ಕುಸ್ತಿಪಟುಗಳಾದ ಆಕಾಶ್ ದಹಿಯಾ ಮತ್ತು ಅನಿರುದ್ಧ ಕುಮಾರ್ ಅವರು ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕದ ಸುತ್ತನ್ನು ತಲುಪಿದರು. ಆದರೆ ಭಾರತದದ ಇತರ ಮೂವರು ಶುಕ್ರವಾರ ತಮ್ಮ ತಮ್ಮ ವಿಭಾಗಗಳಲ್ಲಿ ಸೋಲನುಭವಿಸಿದರು.
ಒಲಿಂಪಿಕ್ಸ್‌ನಲ್ಲಿ ಇಲ್ಲದ 61 ಕೆ.ಜಿ. ತೂಕ ವಿಭಾಗದಲ್ಲಿ ಆಕಾಶ್ 10–8 ಅಂತರದಲ್ಲಿ ಉಜ್ಬೇಕಿಸ್ತಾನದ ಸರ್ದೊರ್ ರುಝೀಮೊವ್ ಅವರನ್ನು ಉತ್ತಮ ಹೋರಾಟದ ನಂತರ ಸೋಲಿಸಿದರು. ನಂತರ ಕ್ವಾರ್ಟರ್‌ಫೈನಲ್‌ನಲ್ಲಿ ಕೊರಿಯದ ಸಂಘಿಯೋನ್ ಅವರ ಮೇಲೆ 7–3 ರಲ್ಲಿ ಅರ್ಹ ಗೆಲುವನ್ನು ಪಡೆದರು. ಆದರೆ ಭಾರತ ಸ್ಪರ್ಧಿ ಸೆಮಿಫೈನಲ್‌ನಲ್ಲಿ ಕಜಕಸ್ತಾನದ ಅಸಿಲ್ ಐತಕಿನ್ ಎದುರು ಒಂದೂ ಪಾಯಿಂಟ್ ಪಡೆಯಲಾಗದೇ ಸೋತರು. ಅಸಿಲ್ ತಾಂತ್ರಿಕ ಕೌಶಲದ ಆಧಾರದಲ್ಲಿ ಗೆದ್ದರು.
ಆಕಾಶ್ ಮುಂದೆ ಮಂಗೋಲಿಯಾದ ಎಂಕ್ಬೋಲ್ಡ್ ಎಂಕ್ಬಾತ್ ಅವರನ್ನು ಎದುರಿಸಲಿದ್ದಾರೆ.
125 ಕೆ.ಜಿ. ವಿಭಾಗದಲ್ಲಿ ಅನಿರುದ್ಧ ಕುಮಾರ್ 3–0ಯಿಂದ ಪಾಕಿಸ್ತಾನದ ಝಮಾನ್ ಅನ್ವರ್ ಎದುರು ಗೆಲುವಿನೊಡನೆ ಅಭಿಯಾನ ಆರಂಭಿಸಿದರು. ಆದರೆ ಕ್ವಾರ್ಟರ್‌ಫೈನಲ್‌ನಲ್ಲಿ ತಾಂತ್ರಿಕ ಕೌಶಲದ ಆಧಾರದಲ್ಲಿ ಇರಾನ್‌ನ ಅಮಿರ್ ಹೊಸೇನ್ ಅಬ್ಬಾಸ್ ಝಾರೆ ಅವರಿಗೆ ಮಣಿದರು. ಇರಾನಿನ ಸ್ಪರ್ಧಿ ಫೈನಲ್ ತಲುಪಿದ ಕಾರಣ ಅನಿರುದ್ಧ ಅವರಿಗೆ ಕಂಚಿನ ಪದಕಕ್ಕಾಗಿ ಬಹರೇನ್‌ನ ಶಾಮಿಲ್ ಮೊಗಮೆದ್ ಎ.ಶರಿಪೊವ್ ಅವರ ಎದುರು ಸೆಣಸಾಡುವ ಅವಕಾಶ ದೊರಕಿದೆ.
ಯಶ್ ತುಶಿರ್ (74 ಕೆ.ಜಿ ವಿಭಾಗ), ರೇಪೇಜ್ ಸುತ್ತಿನಲ್ಲಿ ಕಜಕಸ್ಥಾನದ ಸಿರ್ಬಾಝ್ ತಲ್ಗತ್ ಅವರಿಗೆ ಸೋತು ಪದಕದ ಅವಕಾಶ ಕಳೆದುಕೊಂಡರು.
ಸಂದೀಪ್ ಸಿಂಗ್ ಮಾನ್ (86 ಕೆ.ಜಿ) ಕೂಡ ಬೇಗನೇ ನಿರ್ಗಮಿಸಿದರು. 92 ಕೆ.ಜಿ ವಿಭಾಗದಲ್ಲಿ ವಿನಯ್ ಅವರು ಕ್ವಾಲಿಫಿಕೇಷನ್ ಸುತ್ತಿನಲ್ಲಿ ಕಜಕಸ್ತಾನದ ಅದಿಲೆತ್ ದವ್ಲುಂಬಯೇವ್ ಅವರಿಗೆ ಸೋತರು. ಅವರು ಮಣಿದಿದ್ದು ‘ಫಾಲ್’ ಆಧಾರದಲ್ಲಿ.
ಭಾರತ ಈ ಚಾಂಪಿಯನ್‌ಷಿಪ್‌ನಲ್ಲಿ ಈವರೆಗೆ ಮೂರು ಪದಕಗಳನ್ನು ಗೆದ್ದುಕೊಂಡಿದೆ. ಉದಿತ್ (57 ಕೆ.ಜಿ. ವಿಭಾಗದಲ್ಲಿ ಬೆಳ್ಳಿ),ಅಭಿಮನ್ಯು (70 ಕೆ.ಜಿ. ವಿಭಾಗದಲ್ಲಿ ಕಂಚು) ಮತ್ತು ವಿಕಿ (97 ಕೆ.ಜಿ. ವಿಭಾಗದಲ್ಲಿ ಕಂಚು) ಪದಕ ಗೆದ್ದವರು.
ಪುರುಷರ ವಿಭಾಗದ ಫ್ರೀಸ್ಟೈಲ್ ಸ್ಪರ್ಧೆಗಳು ಶುಕ್ರವಾರ ಮುಕ್ತಾಯಗೊಂಡವು. ಮಹಿಳಾ ವಿಭಾಗದ ಸ್ಪರ್ಧೆಗಳು ಶನಿವಾರ ಆರಂಭವಾಗಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.