ಜಕಾರ್ತ: ಎರಡು ವಾರಗಳಲ್ಲಿ ಕ್ರೀಡಾ ಜಗತ್ತಿನ ಗಮನ ಹಿಡಿದಿಟ್ಟ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಅತ್ಯುತ್ತಮ ಸಾಧನೆ ಮಾಡಿದೆ. ವಿಶ್ವದ ಎರಡನೇ ಅತಿದೊಡ್ಡ ಕ್ರೀಡಾಕೂಟ ಎಂದೇ ಹೇಳಲಾಗುವ ಏಷ್ಯನ್ ಕ್ರೀಡಾಕೂಟದಲ್ಲಿ ತೋರಿರುವ ಸಾಮರ್ಥ್ಯವು ಭಾರತದ ಕ್ರೀಡೆಯ ಬೆಳವಣಿಗೆಯ ಬಗ್ಗೆ ಭರವಸೆ ಮೂಡಿಸಿದೆ.
ಪದಕಗಳನ್ನು ಗೆದ್ದು ಬಂದಿರುವ ಅಥ್ಲೀಟ್‌ಗಳು ಒಲಿಂಪಿಕ್ಸ್‌ನಲ್ಲಿ ಸಾಧನೆ ಮಾಡುವ ವಿಶ್ವಾಸದೊಂದಿಗೆ ತಾಯ್ನಾಡಿಗೆ ಮರಳಿದ್ದಾರೆ.
16 ವರ್ಷ ಹರೆಯದ ಶೂಟರ್ ಸೌರಭ್ ಅವರಿಂದ ಹಿಡಿದು 60 ವರ್ಷದ ಬ್ರಿಜ್ ಆಟಗಾರ ಪ್ರಣಬ್ ಬರ್ಧನ್‌ವರೆಗೆ ವಿವಿಧ ವಯೋಮಾನದವರು ಈ ಬಾರಿ ಚಿನ್ನ ಗೆದ್ದಿದ್ದಾರೆ.
ಕಬಡ್ಡಿ ಮತ್ತು ಹಾಕಿಯಲ್ಲಿ ನಿರಾಸೆ ಕಂಡರೂ 69 ಪದಕಗಳನ್ನು ಗೆದ್ದ ಭಾರತ ಚಿನ್ನ ಗಳಿಕೆಯಲ್ಲಿ ಹಿಂದಿನ ದಾಖಲೆಯನ್ನು ಸರಿಗಟ್ಟಿದೆ. 1951ರಲ್ಲಿ ದೆಹಲಿಯಲ್ಲಿ ನಡೆದಿದ್ದ ಮೊದಲ ಕೂಟದಲ್ಲೂ ಭಾರತ 15 ಚಿನ್ನ ಗೆದ್ದಿತ್ತು.
ಅಥ್ಲೆಟಿಕ್ಸ್‌ನಲ್ಲಿ ಪಾರಮ್ಯ: ಈ ಬಾರಿ ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಭಾರತದ ಕ್ರೀಡಾಪಟುಗಳು ಅತ್ಯುತ್ತಮ ಸಾಮರ್ಥ್ಯ ಮೆರೆದಿದ್ದು ಒಟ್ಟು ಏಳು ಚಿನ್ನವನ್ನು ಬಗಲಿಗೆ ಹಾಕಿಕೊಂಡಿದ್ದಾರೆ. ದಾಖಲೆಯೊಂದಿಗೆ ಶಾಟ್‌ಪಟ್‌ನಲ್ಲಿ ಚಿನ್ನ ಗೆದ್ದ ತಜಿಂದರ್ ಪಾಲ್ ಸಿಂಗ್ ತೂರ್ ಅಥ್ಲೆಟಿಕ್ಸ್‌ನಲ್ಲಿ ಭಾರತದ ಪದಕ ಬೇಟೆ ಆರಂಭಿಸಿದ್ದರು. ಸ್ವಪ್ನಾ ಬರ್ಮನ್ ಅವರು ಹೆಪ್ಟಥ್ಲಾನ್‌ನಲ್ಲಿ ಮೊದಲ ಬಾರಿ ಭಾರತಕ್ಕೆ ಚಿನ್ನ ಗೆದ್ದುಕೊಟ್ಟಿದ್ದರು. ನೀರಜ್ ಚೋಪ್ರಾ, ದ್ಯುತಿ ಚಾಂದ್, ಹಿಮಾ ದಾಸ್, ಮಂಜೀತ್ ಸಿಂಗ್, ಜಿನ್ಸನ್ ಜಾನ್ಸನ್ ಮುಂತಾದವರು ಕೂಡ ಗಮನಾರ್ಹ ಸಾಧನೆ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.