ಹಾಂಗ್‌ಜೌ, ಚೀನಾ: ಒಲಿಂಪಿಯನ್ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರನ್ನು ಏಷ್ಯನ್ ಕ್ರೀಡಾಕೂಟದ ಮೊಟ್ಟಮೊದಲ ಅಥ್ಲೀಟ್‌ಗಳ ಸಮಿತಿಗೆ ದಕ್ಷಿಣ ಏಷ್ಯಾ ವಲಯದ ಪ್ರತಿನಿಧಿಯಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ (ಒಸಿಎ) ಗೆ ಚುನಾವಣೆ ನಡೆಸಲಾಗುತ್ತಿದೆ. ಅಥ್ಲೀಟ್‌ಗಳ ಸಮಿತಿಗೆ ಹತ್ತು ಸದಸ್ಯರನ್ನು ಆಯ್ಕೆ ಮಾಡಲಾಗುವುದು. ಅದಕ್ಕಾಗಿ 26 ಮಂದಿಯನ್ನು ನಾಮನಿರ್ದೇಶನ ಮಾಡಲಾಗಿದೆ.
‘ಒಸಿಎದ ಪಶ್ಚಿಮ ಏಷ್ಯಾ, ಕೇಂದ್ರ ಏಷ್ಯಾ, ದಕ್ಷಿಣ ಏಷ್ಯಾ, ದಕ್ಷಿಣಪೂರ್ವ ಏಷ್ಯಾ ಮತ್ತು ಪೂರ್ವ ಏಷ್ಯಾ ವಲಯಗಳಿಂದ ಒಬ್ಬ ಪುರುಷ ಹಾಗೂ ಒಬ್ಬ ಮಹಿಳಾ ಪ್ರತಿನಿಧಿಯನ್ನು ಆಯ್ಕೆ ಮಾಡಲಾಗುವುದು. ಹತ್ತು ಸದಸ್ಯರ ಆಯ್ಕೆಗೆ ಮತದಾನ ನಡೆಯಲಿದೆ. ಆದರೆ ದಕ್ಷಿಣ ಏಷ್ಯಾದಿಂದ ಸೈನಾ ಅವರೊಬ್ಬರನ್ನೇ ನಾಮನಿರ್ದೇಶನ ಮಾಡಲಾಗಿದೆ. ಆದ್ದರಿಂದ ಅವರ ಆಯ್ಕೆ ಬಹುತೇಕ ಖಚಿತ‘ ಎಂದು ಮೂಲಗಳು ತಿಳಿಸಿವೆ.
ಚೀನಾದ ಹಾಂಗ್‌ಜೂನಲ್ಲಿರುವ ಏಷ್ಯನ್ ಕ್ರೀಡಾ ಗ್ರಾಮದಲ್ಲಿ ಆರು ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಕ್ರೀಡಾಪಟುಗಳು ತಮಗೆ ಅನುಕೂಲವಾದ ಮತಗಟ್ಟೆಯಲ್ಲಿ ಮತ ಚಲಾಯಿಸಬಹುದು. ಸೆಪ್ಟೆಂಬರ್ 18ರಿಂದ ಅಕ್ಟೋರ್ 6ರವರೆಗೆ ಮತದಾನ ಮಾಡಲು ಅವಕಾಶವಿದೆ. 7ರಂದು ಫಲಿತಾಂಶ ಪ್ರಕಟಿಸಲಾಗುವುದು. ಚುನಾವಣೆ ಕುರಿತು ಒಸಿಎ ಬಹಳಷ್ಟು ಪ್ರಚಾರ ಮಾಡುತ್ತಿದೆ. 26 ನಾಮನಿರ್ದೇಶಿತ ಅಭ್ಯರ್ಥಿಗಳ ಚಿತ್ರ ಮತ್ತು ಮಾಹಿತಿಗಳಿರುವ ಪೋಸ್ಟರ್‌ಗಳನ್ನು ಹಂಚಲಾಗುತ್ತಿದೆ. ಕ್ರೀಡಾಗ್ರಾಮದ ಪ್ರಮುಖ ಸ್ಥಳಗಳಲ್ಲಿ ಭಿತ್ತಿಪತ್ರಗಳನ್ನು ಅಂಟಿಸಲಾಗುತ್ತಿದೆ.
ಸೈನಾ 2012ರ ಲಂಡನ್ ಒಲಿಂಪಿಕ್ ಕೂಟದಲ್ಲಿ ಕಂಚಿನ ಪದಕ ಜಯಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.