ADVERTISEMENT

ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿ: ಭಾರತಕ್ಕೆ ಹ್ಯಾಟ್ರಿಕ್‌ ಗೆಲುವು

ಜಪಾನ್ ವಿರುದ್ಧ ಗೆಲುವು

ಪಿಟಿಐ
Published 22 ಅಕ್ಟೋಬರ್ 2018, 17:38 IST
Last Updated 22 ಅಕ್ಟೋಬರ್ 2018, 17:38 IST
ಗೋಲು ಗಳಿಸಿದ ಸಂಭ್ರಮದಲ್ಲಿ ಭಾರತದ ಆಟಗಾರರು ಪಿಟಿಐ ಚಿತ್ರ
ಗೋಲು ಗಳಿಸಿದ ಸಂಭ್ರಮದಲ್ಲಿ ಭಾರತದ ಆಟಗಾರರು ಪಿಟಿಐ ಚಿತ್ರ   

ಮಸ್ಕತ್‌: ಅಮೋಘ ಆಟ ಮುಂದುವರಿಸಿದ ಭಾರತ ತಂಡ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಸತತ ಮೂರನೇ ಭರ್ಜರಿ ಜಯ ಸಾಧಿಸಿತು. ಭಾನುವಾರ ರಾತ್ರಿ ಜಪಾನ್ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ 9–0ಯಿಂದ ಗೆದ್ದಿತು.

ಮೊದಲ ಪಂದ್ಯದಲ್ಲಿ ಆತಿಥೇಯರನ್ನು ಮತ್ತು ಎರಡನೇ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿದ ಭಾರತ, ಏಷ್ಯಾಡ್‌ನಲ್ಲಿ ಚಿನ್ನ ಗೆದ್ದಿದ್ದ ಜಪಾನ್ ಎದುರು ಆರಂಭದಿಂದಲೇ ಆಕ್ರಮಣಕ್ಕೆ ಮುಂದಾಯಿತು. ಭಾರತದ ಪರ ಆರು ಮಂದಿ ಗೋಲು ಗಳಿಸಿ ಮಿಂಚಿದರು.

ನಾಲ್ಕನೇ ನಿಮಿಷದಲ್ಲಿ ಲಲಿತ್ ಉಪಾಧ್ಯಾಯ ಭಾರತದ ಖಾತೆ ತೆರೆದರು. ಗಾಳಿಯಲ್ಲಿ ತೇಲಿ ಅವರು ಚೆಂಡನ್ನು ಗೋಲುಪೆಟ್ಟಿಗೆಯ ಒಳಗೆ ತೂರಿದ ರೀತಿ ಮೋಹಕವಾಗಿತ್ತು. ಎಂಟನೇ ನಿಮಿಷದಲ್ಲಿ ಹರ್ಮನ್‌ಪ್ರೀತ್ ಗುರಿಯತ್ತ ಹೊಡೆದ ಚೆಂಡನ್ನು ತಡೆಯುವ ಯತ್ನದಲ್ಲಿ ಜಪಾನ್‌ನ ಗೋಲ್‌ಕೀಪರ್‌ ತಕಾಶಿ ಯೊಶಿಕಾವ ಗಾಯಗೊಂಡರು. ಅವರ ಮೈಗೆ ಬಡಿದು ಚಿಮ್ಮಿದ ಚೆಂಡನ್ನು ಗುರ್ಜಂತ್ ಸಿಂಗ್‌ ವಾಪಸ್ ಗೋಲುಪೆಟ್ಟಿಗೆಯೊಳಗೆ ಸೇರಿಸಿದರು. ನಂತರ ಯುಸುಕೆ ತಕಾನೊ ಗೋಲ್‌ ಕೀಪಿಂಗ್ ಮಾಡಿದರು. 17ನೇ ನಿಮಿಷದಲ್ಲಿ ಹರ್ಮನ್‌ ಪ್ರೀತ್ ಸಿಂಗ್‌ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಗೋಲು ಗಳಿಸಿದರು. 21ನೇ ನಿಮಿಷದಲ್ಲಿ ಲಭಿಸಿದ ಮತ್ತೊಂದು ಪೆನಾಲ್ಟಿ ಕಾರ್ನರ್ ಅವಕಾಶವನ್ನು ಕೂಡ ಅವರು ಗೋಲಾಗಿ ಪರಿವರ್ತಿಸಿದರು. 36 ಮತ್ತು 42ನೇ ನಿಮಿಷದಲ್ಲಿ ಕ್ರಮವಾಗಿ ಆಕಾಶ ದೀಪ್‌ ಸಿಂಗ್‌ ಮತ್ತು ಸುಮಿತ್‌ ಗೋಲು ಗಳಿಸಿದರು. 45ನೇ ನಿಮಿಷದಲ್ಲಿ ಲಲಿತ್ ಉಪಾಧ್ಯಾಯ ತಮ್ಮ ಎರಡನೇ ಗೋಲು ದಾಖಲಿಸಿದರು.

ADVERTISEMENT

ನಿರಂತರ ಗೋಲುಗಳಿಗೆ ಬೆದರಿದ ಎದುರಾಳಿ ತಂಡದ ರಕ್ಷಣಾ ವಿಭಾಗ ತಬ್ಬಿಬ್ಬಾಯಿತು. ಇದರ ಲಾಭ ಪಡೆದುಕೊಂಡ ಮನದೀಪ್ ಸಿಂಗ್‌ ಕೊನೆಯ ಕ್ವಾರ್ಟರ್‌ನ 49 ಮತ್ತು 57ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಸೇರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.