ADVERTISEMENT

ಇವರ ಸಾಧನೆಗೆ ಛಲವೇ ಬಲ...

ಏಷ್ಯನ್‌ ಪ್ಯಾರಾ ಕ್ರೀಡಾಕೂಟ

ಪ್ರಮೋದ ಜಿ.ಕೆ
Published 7 ಅಕ್ಟೋಬರ್ 2018, 20:00 IST
Last Updated 7 ಅಕ್ಟೋಬರ್ 2018, 20:00 IST
ದೀಪಾ ಮಲೀಕ್‌, ಮರಿಯಪ್ಪನ್‌ ತಂಗವೇಲು, ಶರತ್ ಗಾಯಕ್ವಾಡ್‌
ದೀಪಾ ಮಲೀಕ್‌, ಮರಿಯಪ್ಪನ್‌ ತಂಗವೇಲು, ಶರತ್ ಗಾಯಕ್ವಾಡ್‌   

2012ರಲ್ಲಿ ಲಂಡನ್‌ನಲ್ಲಿ ನಡೆದ ಪ್ಯಾರಾಲಿಂಪಿಕ್ಸ್‌ನಲ್ಲಿ ಕರ್ನಾಟಕದ ಎಚ್‌.ಎನ್‌. ಗಿರೀಶ್‌ ಹೈಜಂಪ್‌ನಲ್ಲಿ ಬೆಳ್ಳಿ ಪದಕ ಜಯಿಸಿ ಬೆಂಗಳೂರಿಗೆ ಮರಳಿದ್ದರು. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅವರು ಹೊರ ಬರುತ್ತಿದ್ದಂತೆ ಸಿಕ್ಕ ಅದ್ದೂರಿ ಸ್ವಾಗತ, ಬೆಂಬಲ, ಕಿಕ್ಕಿರಿದು ಸೇರಿದ್ದ ಜನಸ್ತೋಮ ಎಲ್ಲವೂ ಅಚ್ಚರಿಪಡುವಂತಿತ್ತು.

ಹಾಗಂದ ಮಾತ್ರಕ್ಕೆ, ಪ್ಯಾರಾಲಿಂಪಿಕ್ಸ್‌ನಲ್ಲಿ ಹಿಂದೆ ಯಾರೂ ಪದಕ ಗೆದ್ದಿರಲಿಲ್ಲವೆಂದೇನಲ್ಲ. ಗಿರೀಶ್‌ಗೂ ಮೊದಲು ಮುರಳಿಕಾಂತ ಪೇಟ್ಕರ್‌ 1972ರಲ್ಲಿಯೇ 50 ಮೀಟರ್ ಫ್ರೀಸ್ಟೈಲ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು. ಭೀಮರಾವ ಕೇಸರಕರ್‌, ಜೋಗಿಂದರ ಸಿಂಗ್ ಬೇಡಿ, ದೇವೇಂದ್ರ ಜಜಾರಿಯಾ, ರಾಜೀಂದರ್‌ ಸಿಂಗ್‌ ರಹೆಲು ಅವರು ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕಗಳಿಗೆ ಕೊರಳೊಡ್ಡಿದ್ದರು. ಆದರೆ, ಇವರ ಸಾಧನೆಗೆ ಸರ್ಕಾರವೂ ಸೇರಿದಂತೆ ಯಾರೂ ಅಷ್ಟೊಂದು ಗೌರವ ನೀಡಿರಲಿಲ್ಲ. ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದವರಿಗೆ ಸಿಗುವಂತೆ ಕೋಟಿ ಕೋಟಿ ಹಣ ಲಭಿಸಿರಲಿಲ್ಲ. ಪ್ರಾಯೋಜಕರೂ ಮುಂದೆ ಬರುತ್ತಿರಲಿಲ್ಲ.

ಆದರೆ, ಗಿರೀಶ್‌ ಪದಕ ಗೆದ್ದ ಬಳಿಕ ಪ್ಯಾರಾಲಿಂಪಿಕ್ಸ್ ಕ್ರೀಡಾಪಟುಗಳ ಹಣೆಬರಹವೇ ಬದಲಾಯಿತು. ಈ ಪದಕ ಭಾರತದ ಪ್ಯಾರಾ ಕ್ರೀಡೆಯಲ್ಲಿ ಹೊಸ ಭಾಷ್ಯ ಬರೆಯಿತು. ಭಾರತ ಪ್ಯಾರಾಲಿಂಪಿಕ್‌ ಸಂಸ್ಥೆ, ಕೇಂದ್ರ, ರಾಜ್ಯ ಸರ್ಕಾರ, ಜನಪ್ರತಿನಿಧಿಗಳು ಮತ್ತು ಸಂಘಸಂಸ್ಥೆಯವರು ಜಿದ್ದಿಗೆ ಬಿದ್ದು ಹಣದ ಹೊಳೆ ಹರಿಸಿದರು. ಕಾರ್ಪೊರೇಟ್‌ ಕಂಪನಿಗಳು ಪ್ರಾಯೋಜಕತ್ವ ನೀಡಿ ತಮ್ಮ ಉತ್ಪನ್ನಗಳಿಗೆ ರಾಯಭಾರಿಗಳನ್ನಾಗಿ ಮಾಡಿಕೊಂಡವು. ಆಗಿನಿಂದ ಪ್ಯಾರಾ ಕ್ರೀಡಾಪಟುಗಳನ್ನು ನೋಡುವ ರೀತಿ ಬದಲಾಯಿತು.

ADVERTISEMENT

2016ರ ರಿಯೊ ಡಿ ಜನೈರೊ ಪ್ಯಾರಾಲಿಂಪಿಕ್ಸ್‌ನಲ್ಲಿ ಮರಿಯಪ್ಪನ್‌ ತಂಗವೇಲು, ದೇವೇಂದ್ರ ಜಜಾರಿಯಾ, ದೀಪಾ ಮಲೀಕ್, ವರುಣ್‌ ಸಿಂಗ್ ಭಾಟಿ ಪದಕಗಳನ್ನು ಗೆದ್ದಾಗ ದೇಶದ ಪ್ರತಿಯೊಬ್ಬ ಕ್ರೀಡಾಪ್ರೇಮಿಗಳು ಸಾಧಕರನ್ನು ‘ಭಾರತದ ಐಕಾನ್‌’ ಎನ್ನುವಂತೆ ನೋಡಿದರು. ಅವರಿಗೂ ಕೋಟ್ಯಂತರ ರೂಪಾಯಿ ಹಣ ಲಭಿಸಿತು. ಆದ್ದರಿಂದ ಪ್ಯಾರಾ ಕ್ರೀಡಾಪಟುಗಳನ್ನು ನೋಡುವ ದೃಷ್ಟಿಕೋನ ಈಗ ನಮ್ಮಲ್ಲಿಯೂ ಬದಲಾಗಿದೆ. ಅಂಗವಿಕಲತೆ ನಡುವೆ ಛಲವನ್ನೇ ಬಲ ಮಾಡಿಕೊಂಡವರಿಗೆ ದೇಶ ತಲೆಬಾಗುತ್ತಿದೆ. ಸಿನಿಮಾಗಳಿಗೆ ಪ್ಯಾರಾ ಕ್ರೀಡಾಪಟುಗಳ ಸಾಧನೆ ಕಥಾವಸ್ತುವಾಗುತ್ತಿದೆ. ಈಗ ಮತ್ತೆ ಅಂಥದ್ದೊಂದು ಸಾಧನೆಗಳ ಸುದ್ದಿ ಕೇಳುವ ಕಾಲ ಬಂದಿದೆ.

ಒಂದು ತಿಂಗಳ ಹಿಂದೆಯಷ್ಟೇ ಇಂಡೊನೇಷ್ಯಾದ ಜಕಾರ್ತದಲ್ಲಿ ನಡೆದ ಏಷ್ಯನ್‌ ಕ್ರೀಡಾಕೂಟದಲ್ಲಿ ಭಾರತ 69 ಪದಕಗಳನ್ನು ಗೆದ್ದುಕೊಂಡಿತ್ತು. ಈಗ ಮತ್ತೆ ಅದೇ ದೇಶದಲ್ಲಿ ಏಷ್ಯನ್‌ ಪ್ಯಾರಾ ಕ್ರೀಡಾಕೂಟ ಆರಂಭವಾಗಿದ್ದು, ಅಕ್ಟೋಬರ್‌ 13ರ ತನಕ ನಡೆಯಲಿದೆ. ಭಾರತದ ಸ್ಪರ್ಧಿಗಳು ರಾಷ್ಟ್ರದ ಘನತೆ ಎತ್ತಿ ಹಿಡಿಯಲು ಸಜ್ಜಾಗಿದ್ದಾರೆ.

2010ರಲ್ಲಿ ಆರಂಭ
ಅಂಗವಿಕಲ ಕ್ರೀಡಾಪಟುಗಳಲ್ಲಿ ಸಾಧನೆಯ ಹುಮ್ಮಸ್ಸು ತುಂಬುವ ಸಲುವಾಗಿ 2010ರಲ್ಲಿ ಪ್ಯಾರಾ ಅಥ್ಲೀಟ್‌ಗಳಿಗೂ ಏಷ್ಯನ್‌ ಕ್ರೀಡಾಕೂಟ ಆರಂಭವಾಯಿತು. ಭಾರತ ಎರಡೂ ಬಾರಿ ಭಾಗವಹಿಸಿ ಪದಕಗಳನ್ನು ಗೆದ್ದುಕೊಂಡಿದೆ. ಈ ಬಾರಿ ಭಾರತದಿಂದ 193 ಕ್ರೀಡಾಪಟುಗಳು ಪಾಲ್ಗೊಂಡಿದ್ದಾರೆ. ಹಿಂದಿನ ಎರಡೂ ಕೂಟಗಳಿಗಿಂತ ಈ ಬಾರಿ ಹೆಚ್ಚು ಸ್ಪರ್ಧಿಗಳು ಪಾಲ್ಗೊಂಡಿದ್ದಾರೆ.

ಮೊದಲ ವರ್ಷದ ಕೂಟದ ಅಥ್ಲೆಟಿಕ್ಸ್‌ನಲ್ಲಿ ಜಗ್ಸೀರ್‌ ಸಿಂಗ್‌, ರಾಮಕಿರಣನ್‌ ಸಿಂಗ್‌, ಸಂದೀಪ್‌ ಸಿಂಗ್ ಮಾನ್‌, ದೀಪಾ ಮಲೀಕ್‌, ಬ್ಯಾಡ್ಮಿಂಟನ್‌ನಲ್ಲಿ ಪರುಲ್‌ ಪಾರ್ಮರ್‌, ಪವರ್‌ಲಿಫ್ಟಿಂಗ್‌ನಲ್ಲಿ ಬೆಂಗಳೂರಿನ ಫರ್ಮಾನ್‌ ಬಾಷಾ, ವೀಲ್‌ಚೇರ್‌ ಫೆನ್ಸಿಂಗ್‌ನಲ್ಲಿ ನೂರುದ್ದೀನ್‌ ಶೇಖ್‌ ದಾವೂದ್‌ ಪದಕಗಳನ್ನು ಜಯಿಸಿದ್ದರು. 2014ರಲ್ಲಿ ಚೀನಾದ ಗುವಾಂಗ್‌ ಜೌನಲ್ಲಿ ನಡೆದ ಕೂಟದಲ್ಲಿ ಭಾರತ ಮೂರು ಚಿನ್ನ, 14 ಬೆಳ್ಳಿ ಮತ್ತು 16 ಕಂಚಿನ ಪದಕಗಳನ್ನು ಗೆದ್ದುಕೊಂಡಿತು. ಈ ಬಾರಿ ಸ್ಪರ್ಧಿಗಳ ಸಂಖ್ಯೆಯೂ ಹೆಚ್ಚಾಗಿರುವುದರಿಂದ ಹಿಂದಿನ ಕೂಟಕ್ಕಿಂತ ಹೆಚ್ಚು ಪದಕಗಳನ್ನು ಗೆಲ್ಲುವ ನಿರೀಕ್ಷೆಯಿದೆ.

ಸ್ಫೂರ್ತಿ ತುಂಬಲು ಬಣ್ಣ
ಸ್ಪರ್ಧಿಗಳಲ್ಲಿ ಸಾಧನೆಗೆ ಸ್ಫೂರ್ತಿ ತುಂಬುವ ಉದ್ದೇಶದಿಂದ ಸಂಘಟಕರು ಈ ಬಾರಿ ಐದು ಬಣ್ಣಗಳ ಮಿಶ್ರಣದ ಪೋಷಾಕುಗಳನ್ನು ಕ್ರೀಡಾಪಟುಗಳಿಗೆ ನೀಡಿದ್ದಾರೆ.

ಏನೇ ದೌರ್ಬಲ್ಯವಿದ್ದರೂ ಆಕಾಶದಷ್ಟು ಎತ್ತದ ಸಾಧನೆ ಮಾಡಲಿ ಎನ್ನುವ ಕಾರಣಕ್ಕೆ ನೀಲಿ, ಸೂರ್ಯನ ಪ್ರತಿನಿಧಿಯಾಗಿ ಕಿತ್ತಳೆ, ನಿಸರ್ಗದ ಸಂಕೇತವಾಗಿ ಹಸಿರು, ಸಾಮೀಪ್ಯದ ಪ್ರತೀಕವಾಗಿ ನೇರಳೆ ಮತ್ತು ಸ್ಫೂರ್ತಿಯ ಸೆಲೆಯಾಗಿ ಕೆಂಪು ಬಣ್ಣದ ಮಿಶ್ರಣದ ಪೋಷಾಕು ನೀಡಲಾಗಿದೆ. ಈ ಬಾರಿ ಒಟ್ಟು 2,831 ಕ್ರೀಡಾಪಟುಗಳು ಪಾಲ್ಗೊಂಡಿದ್ದಾರೆ. 42 ದೇಶಗಳು ಭಾಗವಹಿಸಿವೆ. ಇದೇ ಮೊದಲ ಬಾರಿಗೆ ಚೆಸ್‌ ಕ್ರೀಡೆಯನ್ನೂ ಸೇರಿಸಲಾಗಿದೆ.

ಕನ್ನಡಿಗರ ಮೇಲೆ ಹೆಚ್ಚು ನಿರೀಕ್ಷೆ
ಕರ್ನಾಟಕದ ಸ್ಪರ್ಧಿಗಳು ಈ ಬಾರಿ ಹೆಚ್ಚು ಪದಕ ಗೆಲ್ಲುವ ನಿರೀಕ್ಷೆಯಿದೆ. ಲಾಂಗ್‌ಜಂಪ್‌ನಲ್ಲಿ ಸ್ಪರ್ಧಿಸುತ್ತಿರುವ ಎಚ್‌.ಎನ್. ಗಿರೀಶ್, ಬೆಳಗಾವಿಯ ಈಜುಪಟುಗಳಾದ ಶ್ರೀಧರ್ ಮಾಳಗಿ ಹಾಗೂ ಮೊಯಿನ್ ಜುನೇದಿ ಅವರ ಮೇಲೆ ಭರವಸೆಯಿದೆ. ಭಾರತ ತಂಡಕ್ಕೆ ಬೆಂಗಳೂರಿನ ಭಾರತ ಕ್ರೀಡಾ ಪ್ರಾಧಿಕಾರದಲ್ಲಿ ತರಬೇತಿ ನೀಡಲಾಗಿದೆ.

ಒಂದೇ ಕೈಯಲ್ಲಿ ಈಜುವ ಶ್ರೀಧರ್‌ ‘ಎಸ್‌–8’ ವಿಭಾಗದ 50 ಮೀ., 100 ಮೀ., 400 ಮೀ. ಫ್ರೀಸ್ಟೈಲ್, 100 ಮೀ. ಬ್ಯಾಕ್‌ ಸ್ಟ್ರೋಕ್, 100 ಮೀ. ಬ್ರೆಸ್ಟ್‌ ಸ್ಟ್ರೋಕ್, 100 ಮೀ. ಬಟರ್‌ಫ್ಲೈ ಹಾಗೂ 4x100 ಮೀ. ಫ್ರೀ ಸ್ಟೈಲ್‌ ರಿಲೇ ಹಾಗೂ 4x100 ಮೀ. ಮೆಡ್ಲೆ ರಿಲೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮೋಯಿನ್‌ ‘ಎಸ್‌–1’ ವಿಭಾಗದಲ್ಲಿ 50 ಮೀ. ಫ್ರೀಸ್ಟೈಲ್‌ ಹಾಗೂ 50 ಮೀ. ಬ್ಯಾಕ್‌ ಸ್ಟ್ರೋಕ್‌ನಲ್ಲಿ ಸ್ಪರ್ಧಿಸಲಿದ್ದಾರೆ. ಈಜು ಸ್ಪರ್ಧೆಯಲ್ಲಿ ಬೆಂಗಳೂರಿನ ಶರತ್‌ ಗಾಯಕ್ವಾಡ್‌, ನಿರಂಜನ್‌ ಮುಕುಂದನ್‌ ದೇಶ ಪ್ರತಿನಿಧಿಸಿದ್ದಾರೆ.

ತಮಿಳುನಾಡಿನ ಮರಿಯಪ್ಪನ್‌ ತಂಗವೇಲು ಭಾರತದ ಧ್ವಜದಾರಿಯಾಗಿದ್ದರು. ಅಥ್ಲೆಟಿಕ್ಸ್‌ನಲ್ಲಿ ಮನೋಜ ಭಾಸ್ಕರ್‌, ಆರ್‌.ಟಿ. ಪ್ರಸನ್ನ ಕುಮಾರ್‌, ಪ್ರವೀಣ ಕುಮಾರ್‌, ರಾಘವೇಂದ್ರ, ಸುರ್ಜಿಂತ್‌ ಸಿಂಗ್‌, ಎಂ.ಎಸ್‌. ಶರತ್‌, ಕೇಶವಮೂರ್ತಿ, ರಕ್ಷಿತ್ ರಾಜು, ಎನ್‌.ಎಸ್‌. ರಮ್ಯಾ, ರಾಧಾವೆಂಕಟೇಶ, ಶಿವಗಾಮಿ ಪದಕ ಜಯಿಸುವ ಭರವಸೆ ಮೂಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.