ಹಾಂಗ್‌ಝೌ: ಚೀನಾದ ಹಾಂಗ್‌ಝೌನಲ್ಲಿ ನಡೆಯುತ್ತಿರುವ ಪ್ಯಾರಾ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಪದಕಗಳ ಖಾತೆಯನ್ನು ತೆರೆದಿದೆ.
ಪುರುಷರ ಹೈಜಂಪ್ ಟಿ-47 ವಿಭಾಗದಲ್ಲಿ ಭಾರತದ ನಿಶಾದ್ ಕುಮಾರ್ ಚಿನ್ನದ ಪದಕ ಗೆದ್ದಿದ್ದಾರೆ. ಹೈಜಂಪ್ ಟಿ–63 ವಿಭಾಗದಲ್ಲಿ ಭಾರತದ ಶೈಲೇಶ್ ಕುಮಾರ್ ಚಿನ್ನ, ಮರಿಯಪ್ಪನ್ ತಂಗವೇಲು ಬೆಳ್ಳಿ ಮತ್ತು ರಾಮ್ ಸಿಂಗ್ ಪಾಧಿಯಾರ್ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದಾರೆ.
ಏಷ್ಯನ್ ಕ್ರೀಡಾಕೂಟದಲ್ಲಿ ದಾಖಲೆಯ 107 ಪದಕಗಳನ್ನು ಗೆದ್ದು ಬೀಗಿದ್ದ ಭಾರತವು, ಅ. 22ರಿಂದ (ಭಾನುವಾರ) 28ರವರೆಗೆ ನಡೆಯುವ ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲೂ ದಾಖಲೆ ಸಂಖ್ಯೆಯಲ್ಲಿ ಪದಕ ಬಾಚಿಕೊಳ್ಳುವ ವಿಶ್ವಾಸದಲ್ಲಿದೆ.
ಕಳೆದ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿರುವ ಶೂಟರ್ ಮನೀಶ್ ನರ್ವಾಲ್ ಹಾಗೂ ಬ್ಯಾಡ್ಮಿಂಟನ್‌ಪಟುಗಳಾದ ಪ್ರಮೋದ್ ಭಗತ್ ಮತ್ತು ಕೃಷ್ಣ ನಗರ್ ಸೇರಿದಂತೆ 313 ಅಥ್ಲೀಟ್‌ಗಳು ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಿದ್ದಾರೆ.
ಒಟ್ಟು 22 ಕ್ರೀಡೆಗಳಲ್ಲಿ 17ರಲ್ಲಿ ಭಾರತದ ಸ್ಪರ್ಧಿಗಳು ಪಾಲ್ಗೊಳ್ಳುವರು. ರೋಯಿಂಗ್, ಕೆನೋಯಿಂಗ್, ಲಾನ್‌ಬೌಲ್, ಟೇಕ್ವಾಂಡೊ ಮತ್ತು ಅಂಧರ ಫುಟ್‌ಬಾಲ್ ಸ್ಪರ್ಧೆಗಳಲ್ಲಿ ಇದೇ ಮೊದಲ ಬಾರಿ ಭಾರತದ ಕ್ರೀಡಾಪಟುಗಳು ಸ್ಪರ್ಧಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.