ADVERTISEMENT

ಸೆಮಿಗೆ ಜೋಷ್ನಾ, ಘೋಷಾಲ್‌

ಏಷ್ಯನ್‌ ಸ್ಕ್ವಾಷ್‌ ಚಾಂಪಿಯನ್‌ಷಿಪ್‌: ಭಾರತದ ಸ್ಪರ್ಧಿಗಳ ಗೆಲುವಿ ಓಟ

ಪಿಟಿಐ
Published 3 ಮೇ 2019, 20:00 IST
Last Updated 3 ಮೇ 2019, 20:00 IST
ಸೌರವ್‌ ಘೋಷಾಲ್‌
ಸೌರವ್‌ ಘೋಷಾಲ್‌   

ಕ್ವಾಲಾಲಂಪುರ: ಭಾರತದ ಸೌರವ್‌ ಘೋಷಾಲ್ ಮತ್ತು ಜೋಷ್ನಾ ಚಿಣ್ಣಪ್ಪ ಅವರು ಏಷ್ಯನ್‌ ಸ್ಕ್ವಾಷ್‌ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳಾ ಸಿಂಗಲ್ಸ್‌ ವಿಭಾಗಗಳಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.

ಶುಕ್ರವಾರ ನಡೆದ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ಸೌರವ್‌ 11–4, 11–4, 11–3 ನೇರ ಗೇಮ್‌ಗಳಿಂದ ಮಲೇಷ್ಯಾದ ಮೊಹಮ್ಮದ್‌ ನಫಿಜ್ವಾನ್‌ ಅದ್ನಾನ್‌ ಅವರನ್ನು ಮಣಿಸಿದರು.

ಚಾಂಪಿಯನ್‌ಷಿಪ್‌ನಲ್ಲಿ ಆರನೇ ಶ್ರೇಯಾಂಕ ಹೊಂದಿದ್ದ ಅದ್ನಾನ್‌ ಅವರು ಈ ಹೋರಾಟದಲ್ಲಿ ಸುಲಭವಾಗಿ ಗೆಲ್ಲುತ್ತಾರೆ ಎಂದೇ ಭಾವಿಸಲಾಗಿತ್ತು. ಆದರೆ ಸೌರವ್‌, ಮೂರು ಗೇಮ್‌ಗಳಲ್ಲೂ ಪರಿಣಾಮಕಾರಿ ಸಾಮರ್ಥ್ಯ ತೋರಿ ಎದುರಾಳಿಯ ಜಯದ ಕನಸಿಗೆ ತಣ್ಣೀರು ಸುರಿದರು.

ADVERTISEMENT

ಮಹಿಳಾ ಸಿಂಗಲ್ಸ್‌ ವಿಭಾಗದ ಎಂಟರ ಘಟ್ಟದ ಪೈಪೋಟಿಯಲ್ಲಿ ಜೋಷ್ನಾ 12–10, 13–11, 11–7 ನೇರ ಗೇಮ್‌ಗಳಿಂದ ಭಾರತದವರೇ ಆದ ತಾನ್ವಿ ಖನ್ನಾ ಅವರನ್ನು ಪರಾಭವಗೊಳಿಸಿದರು.

ಮೊದಲ ಗೇಮ್‌ನಲ್ಲಿ ಜೋಷ್ನಾಗೆ ಪ್ರಬಲ ಪೈಪೋಟಿ ಒಡ್ಡಿದ್ದ ತಾನ್ವಿ, ಎರಡನೇ ಗೇಮ್‌ನಲ್ಲೂ ಮಿಂಚಿದರು. ಅನುಭವಿ ಆಟಗಾರ್ತಿ ಜೋಷ್ನಾ, ನಿರ್ಣಾಯಕ ಘಟ್ಟದಲ್ಲಿ ಚುರುಕಿನ ಆಟ ಆಡಿ ಸಂಭ್ರಮಿಸಿದರು. ಮೂರನೇ ಗೇಮ್‌ನಲ್ಲೂ ಜೋಷ್ನಾ ಪರಿಣಾಮಕಾರಿ ಸಾಮರ್ಥ್ಯ ತೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.