ADVERTISEMENT

ಯೂತ್‌ ವಿಭಾಗದಲ್ಲಿ ಜೆರೆಮಿ ವಿಶ್ವ ದಾಖಲೆ

ಏಷ್ಯನ್‌ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌: ಮೀರಾ ಕೈತಪ್ಪಿದ ಕಂಚಿನ ಪದಕ, ಜಿಲಿಗೆ ಬೆಳ್ಳಿ

ಪಿಟಿಐ
Published 21 ಏಪ್ರಿಲ್ 2019, 20:00 IST
Last Updated 21 ಏಪ್ರಿಲ್ 2019, 20:00 IST
ಜೆರೆಮಿ ಲಾಲ್ರಿನುಂಗಾ
ಜೆರೆಮಿ ಲಾಲ್ರಿನುಂಗಾ   

ನಿಂಗ್ಬೊ, ಚೀನಾ: ಭಾರತದ ಜೆರೆಮಿ ಲಾಲ್ರಿನುಂಗಾ ಅವರು ಏಷ್ಯನ್‌ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಭಾನುವಾರ ಅಮೋಘ ಸಾಮರ್ಥ್ಯ ತೋರಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ಜಿಲಿ ದಲಬೆಹೆರಾ ಬೆಳ್ಳಿಯ ಪದಕ ಗೆದ್ದಿದ್ದು, ಮೀರಾಬಾಯಿ ಚಾನು ಅವರು ಕಂಚಿನ ಪದಕ ಗೆಲ್ಲುವ ಅವಕಾಶ ಕೈಚೆಲ್ಲಿದ್ದಾರೆ.

‍ಪುರುಷರ 67 ಕೆ.ಜಿ. ವಿಭಾಗದಲ್ಲಿ ಕಣದಲ್ಲಿರುವ 16 ವರ್ಷ ವಯಸ್ಸಿನ ಜೆರೆಮಿ, ಸ್ನ್ಯಾಚ್‌, ಕ್ಲೀನ್‌ ಮತ್ತು ಜೆರ್ಕ್‌ ಸೇರಿ ಒಟ್ಟು 297 ಕೆ.ಜಿ (134+163 ಕೆ.ಜಿ) ಭಾರ ಎತ್ತಿ ಯೂತ್‌ ವಿಭಾಗದಲ್ಲಿ ವಿಶ್ವ ದಾಖಲೆ ಬರೆದರು.

ADVERTISEMENT

ಸ್ನ್ಯಾಚ್‌ನಲ್ಲಿ ಅವರು ಮೂರು ಪ್ರಯತ್ನಗಳ ಪೈಕಿ ಎರಡರಲ್ಲಿ 130 ಮತ್ತು 134 ಕೆ.ಜಿ. ಭಾರ ಎತ್ತಿ ತಮ್ಮದೇ ಹೆಸರಿನಲ್ಲಿದ್ದ ಯೂತ್‌ ವಿಭಾಗದ ವಿಶ್ವ ದಾಖಲೆ ಉತ್ತಮಪಡಿಸಿಕೊಂಡರು. ಫೆಬ್ರುವರಿಯಲ್ಲಿ ಥಾಯ್ಲೆಂಡ್‌ನಲ್ಲಿ ನಡೆದಿದ್ದ ಇಜಿಎಟಿ ಕಪ್‌ನಲ್ಲಿ ಜೆರೆಮಿ 131ಕೆ.ಜಿ. ಭಾರ ಎತ್ತಿದ್ದು ಇದುವರೆಗಿನ ದಾಖಲೆಯಾಗಿತ್ತು.

ನಂತರ ಕ್ಲೀನ್‌ ಮತ್ತು ಜೆರ್ಕ್‌ನಲ್ಲಿ ಅವರು 157 ಮತ್ತು 163 ಕೆ.ಜಿ.ಸಾಮರ್ಥ್ಯ ತೋರಿದರು. ಇದರೊಂದಿಗೆ ಕಜಕಸ್ತಾನದ ಸಾಯ್‌ಖಾನ್‌ ತೈಸುಯೆವ್‌ (161 ಕೆ.ಜಿ) ಹೆಸರಿನಲ್ಲಿದ್ದ ಯೂತ್‌ ವಿಶ್ವ ದಾಖಲೆ ಅಳಿಸಿ ಹಾಕಿದರು.

ಇದರೊಂದಿಗೆ ಭಾರತದ ವೇಟ್‌ಲಿಫ್ಟರ್‌ ‘ಬಿ’ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದರು. ಪಾಕಿಸ್ತಾನದ ತಲಾ ತಾಲೀಬ್ ಅಗ್ರಸ್ಥಾನ ಪಡೆದರು. ಅವರು ಒಟ್ಟು 304 ಕೆ.ಜಿ (140+164 ಕೆ.ಜಿ) ಭಾರ ಎತ್ತಿ ಗಮನ ಸೆಳೆದರು.

ಜೆರೆಮಿ ಅವರು ಹೋದ ವರ್ಷದ ಅಕ್ಟೋಬರ್‌ನಲ್ಲಿ ಬ್ಯೂನಸ್‌ ಐರಿಸ್‌ನಲ್ಲಿ ನಡೆದಿದ್ದ ಯೂತ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು. 62 ಕೆ.ಜಿ. ವಿಭಾಗದಲ್ಲಿ ಒಟ್ಟು 274 ಕೆ.ಜಿ. ಭಾರ ಎತ್ತುವ ಮೂಲಕ ಈ ಸಾಧನೆ ಮಾಡಿದ್ದರು.

ಮಹಿಳೆಯರ 45 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ್ದ ಜಿಲಿ, ಸ್ನ್ಯಾಚ್‌ನಲ್ಲಿ 71 ಕೆ.ಜಿ ಹಾಗೂ ಕ್ಲೀನ್‌ ಮತ್ತು ಜೆರ್ಕ್‌ನಲ್ಲಿ 91 ಕೆ.ಜಿ (ಒಟ್ಟು 162 ಕೆ.ಜಿ) ಸಾಮರ್ಥ್ಯ ತೋರಿ ಬೆಳ್ಳಿಯ ಪದಕಕ್ಕೆ ಕೊರಳೊಡ್ಡಿದರು.

ವೊವುಂಗ್‌ ಥಿ ಹುಯೆನ್‌ ಈ ವಿಭಾಗದ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು. ಅವರಿಂದ ಒಟ್ಟು 168 ಕೆ.ಜಿ. ಸಾಮರ್ಥ್ಯ ಮೂಡಿಬಂತು. ಫಿಲಿಪ್ಪೀನ್ಸ್‌ನ ಮೇರಿ ಫ್ಲೊರ್‌ ದಿಯಾಜ್‌ (158 ಕೆ.ಜಿ) ಕಂಚಿನ ಪದಕ ಪಡೆದರು.

ಮಹಿಳೆಯರ 49 ಕೆ.ಜಿ ವಿಭಾಗದಲ್ಲಿ ಕಣದಲ್ಲಿದ್ದ ಮೀರಾಬಾಯಿ ಒಟ್ಟು 199 ಕೆ.ಜಿ.ಸಾಮರ್ಥ್ಯ ತೋರಿದರು. ಸ್ನ್ಯಾಚ್‌ನಲ್ಲಿ 86 ಕೆ.ಜಿ. ಭಾರ ಎತ್ತಿದ ಅವರು ಕ್ಲೀನ್‌ ಮತ್ತು ಜೆರ್ಕ್‌ನಲ್ಲಿ ಒಟ್ಟು 113 ಕೆ.ಜಿ. ಸಾಮರ್ಥ್ಯ ತೋರಿದರು. ಇದು ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ.

ಚೀನಾದ ಹೊವು ಜಿಹುಯಿ (208 ಕೆ.ಜಿ) ಮತ್ತು ಉತ್ತರ ಕೊರಿಯಾದ ರಿ ಸೊಂಗ್‌ ಗಮ್‌ (200 ಕೆ.ಜಿ) ಕ್ರಮವಾಗಿ ಈ ವಿಭಾಗದ ಚಿನ್ನ ಮತ್ತು ಬೆಳ್ಳಿಯ ಪದಕ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.