ದೋಹಾ: ಮೂರು ದಿನಗಳಲ್ಲಿ ಎರಡು ಬಾರಿ ರಾಷ್ಟ್ರೀಯ ದಾಖಲೆಯನ್ನು ಉತ್ತಮಪಡಿಸಿಕೊಂಡ ಅವಿನಾಶ್ ಸಬ್ಳೆ 3000 ಮೀಟರ್ಸ್ ಸ್ಟೀಪಲ್ ಚೇಸ್‌ನಲ್ಲಿ ಟೋಕಿಯೊ ಒಲಿಂಪಿಕ್ಸ್‌ಗೆ ಟಿಕೆಟ್ ಗಿಟ್ಟಿಸಿಕೊಂಡರು.
ಇಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಶುಕ್ರವಾರ ರಾತ್ರಿ ನಡೆದ ಫೈನಲ್‌ನಲ್ಲಿ 8 ನಿಮಿಷ 21.37 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ ಅವರು ಒಟ್ಟಾರೆ 13ನೇ ಸ್ಥಾನ ಗಳಿಸಿದರು. ಆದರೆ ಒಲಿಂಪಿಕ್ಸ್ ಅರ್ಹತೆಯ ಮಾನದಂಡವನ್ನು (8:22.00) ದಾಟುವಲ್ಲಿ ಯಶಸ್ವಿಯಾದರು.
ಮೊದಲ ಸುತ್ತಿನ ಹೀಟ್ಸ್‌ನಲ್ಲಿ 8:25.23 ನಿಮಿಷ ಗಳ ಸಾಮರ್ಥ್ಯದೊಂದಿಗೆ ಅವಿನಾಶ್ ತಮ್ಮದೇ ಹೆಸರಿನಲ್ಲಿದ್ದ ದಾಖಲೆಯನ್ನು (8:28.94) ಮುರಿದಿದ್ದರು. ಫೈನಲ್‌ನಲ್ಲಿ ದಾಖಲೆಯನ್ನು ಇನ್ನಷ್ಟು ಉತ್ತಮಪಡಿಸಿಕೊಂಡರು. ಈ ಮೂಲಕ ಒಂದು ವರ್ಷದ ಅವಧಿಯಲ್ಲಿ ನಾಲ್ಕು ಬಾರಿ ರಾಷ್ಟ್ರೀಯ ದಾಖಲೆ ಮಾಡಿದ ಹೆಗ್ಗಳಿ ಕೆಯೂ ಅವರದಾಯಿತು. ರಾಷ್ಟ್ರೀಯ ಮುಕ್ತ ಕೂಟ ಹಾಗೂ ಫೆಡರೇಷನ್ ಕಪ್ ಕೂಟದಲ್ಲೂ ಅವರು ದಾಖಲೆ ನಿರ್ಮಿಸಿದ್ದರು.
ಒಲಿಂಪಿಕ್ ಚಾಂಪಿಯನ್, ಕೆನ್ಯಾದ ಕಿಪ್ರುಟೊ (8:01.35) ಚಿನ್ನ ಗಳಿಸಿದರು. ಕಳೆದ ಬಾರಿಯೂ ಅವರು ವಿಶ್ವ ಚಾಂಪಿಯನ್ ಆಗಿದ್ದರು. ಇಥಿಯೋಪಿಯಾದ ಲಮೆಚಾ ಗಿರ್ಮಾ ಬೆಳ್ಳಿ ಹಾಗೂ ಮೊರೊಕ್ಕೊದ ಸೌಫಿನ್ ಬಕ್ಕಲಿ ಕಂಚಿನ ಪದಕ ಗೆದ್ದರು.
ಒಲಿಂಪಿಕ್ಸ್ ಅರ್ಹತೆಯೇ ಗುರಿಯಾಗಿತ್ತು: ‘ಇಲ್ಲಿ ಪದಕ ಗೆಲ್ಲಲು ಸಾಧ್ಯವಿಲ್ಲ ಎಂದು ತಿಳಿದೇ ಇತ್ತು. ಆದ್ದರಿಂದ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸುವುದರ ಮೇಲೆಯೇ ಗಮನ ಇರಿಸಿದ್ದೆ. ಒಲಿಂಪಿಕ್ಸ್‌ಗೆ ಇನ್ನೂ 9 ತಿಂಗಳು ಬಾಕಿ ಇದ್ದು ಸರಿಯಾದ ಸಿದ್ಧತೆ ಮಾಡಿಕೊಳ್ಳುವೆ’ ಎಂದು ಅವಿನಾಶ್ ಹೇಳಿದರು.
ಇರ್ಫಾನ್‌ಗೆ ನಿರಾಸೆ: ಪುರುಷರ 20 ಕಿ.ಮೀ ನಡಿಗೆ ಸ್ಪರ್ಧೆಯಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ಕೆ.ಟಿ.ಇರ್ಫಾನ್ 1 ತಾಸು 21 ನಿಮಿಷ 21ಸೆಕೆಂಡುಗಳಲ್ಲಿ ಗುರಿ ಮುಟ್ಟಿ 27ನೇ ಸ್ಥಾನಕ್ಕೆ ಕುಸಿದರು. ದೇವೇಂದ್ರ ಸಿಂಗ್ 36ನೇ ಸ್ಥಾನ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.