ಬೆಂಗಳೂರು: ಕರ್ನಾಟಕದ ಪಲ್ಲವಿ ಪಾಟೀಲ ಅವರು ಬಿಹಾರದ ಪಟ್ನಾದಲ್ಲಿ ನಡೆಯುತ್ತಿರುವ ಇಂಡಿಯನ್ ಓಪನ್ (23 ವರ್ಷದೊಳಗಿನವರ) ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ ಮಹಿಳೆಯರ ಹೈಜಂಪ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದರು.
ಸ್ಪರ್ಧೆಯ ಎರಡನೇ ದಿನವಾದ ಭಾನುವಾರ ನಡೆದ ಫೈನಲ್‌ನಲ್ಲಿ ಪಲ್ಲವಿ 1.72 ಮೀಟರ್ ಸಾಧನೆಯೊಂದಿಗೆ ಮೂರನೇ ಸ್ಥಾನ ಪಡೆದರು. ತಮಿಳುನಾಡಿನ ಗೋಪಿಕಾ ಕೆ. (1.76ಮೀ) ಮತ್ತು ಗುಜರಾತ್ ಪಾಯಲ್ ಜಮೋದ್ (1.76 ಮೀ) ಕ್ರಮವಾಗಿ ಮೊದಲೆರಡು ಸ್ಥಾನ ಪಡೆದರು.
ಪುರುಷರ ಡೆಕಥ್ಲಾನ್‌ನಲ್ಲಿ ಕರ್ನಾಟಕದ ಲೋಕೇಶ್ ರಾಥೋಡ್ ಅವರು 6440 ಅಂಕಗಳೊಂದಿಗೆ ಕಂಚು ಗೆದ್ದರು. ಒಡಿಶಾದ ಜಸ್ಬೀರ್ ನಾಯಕ್ (7065) ಮತ್ತು ತಮಿಳುನಾಡಿನ ಲೋಕೇಶ್ ಕುಮಾರ್ (6525) ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಜಯಿಸಿದರು.
ಸ್ಪೀಲ್‌ಬರ್ಗ್, ಆಸ್ಟ್ರಿಯಾ (ಪಿಟಿಐ): ಬೆಂಗಳೂರಿನ ಅರ್ಜುನ್ ಮೈನಿ ಅವರು ಡಿಟಿಎಂ ರೇಸ್‌ನ ರೆಡ್ ಬುಲ್ ರಿಂಗ್‌ನಲ್ಲಿ ಮೂರನೇ ಸ್ಥಾನ ಗಳಿಸಿದರು. ಸ್ಪೋರ್ಟ್ಸ್ ಕಾರ್ ಸರಣಿಯಲ್ಲಿ ಪೋಲ್ ಸ್ಥಾನ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಅವರು ಪಾತ್ರವಾದರು.
ಶನಿವಾರ ನಡೆದ ಅಂತಿಮ ಲ್ಯಾಪ್‌ನಲ್ಲಿ 26 ವರ್ಷದ ಅರ್ಜುನ್ (1:30.128) ವೇಗದ ಸಮಯ ದಾಖಲಿಸಿದರು. ಇಟಲಿಯ ಮಿರ್ಕೊ ಬೊರ್ಟೊಲೊಟ್ಟಿ ಮತ್ತು ಜರ್ಮನಿಯ ಮಾರೊ ಎಂಗೆಲ್ ಮೊದಲೆರಡು ಸ್ಥಾನ ಗಳಿಸಿದರು.
ಮಂಗಳೂರು: ನಗರದ ಆಕಾಶ್ ಪೂಜಾರ್, ತಮಿಳುನಾಡಿನ ರಾಮೇಶ್ವರದಲ್ಲಿ ನಡೆದ ರಾಷ್ಟ್ರೀಯ ಸ್ಟ್ಯಾಂಡ್ ಅಪ್ ಪೆಡಲಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆದ್ದು ಗಮನ ಸೆಳೆದರು.
ಚಾಂಪಿಯನ್‌ಷಿಪ್‌ನ ಪುರುಷರ 12 ಕಿಲೊಮೀಟರ್ ರೇಸ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಅವರು ಈ ವಿಭಾಗದಲ್ಲಿ ಪದಕ ಗೆದ್ದ 16 ವರ್ಷದೊಳಗಿನ ಭಾರತದ ಮೊದಲ ಸರ್ಫರ್ ಎಂದೆನಿಸಿಕೊಂಡರು. ಕರ್ನಾಟಕ ಇಲ್ಲಿ ಒಟ್ಟು 8 ಪದಕಗಳನ್ನು ಗಳಿಸಿ ಪಾರಮ್ಯ ಮೆರೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.