ಬೆಂಗಳೂರು: ದ್ರೋಣಾಚಾರ್ಯ ಪ್ರಶಸ್ತಿಯನ್ನು ವರ್ಚುವಲ್ ಆಗಿ ಸ್ವೀಕರಿಸುವ ಕಾರ್ಯಕ್ರಮದ ‘ಅಭ್ಯಾಸ’ಕ್ಕೆ ಎರಡು ದಿನಗಳ ಹಿಂದೆ ತೆರಳಿದ್ದ ಅವರು ಸಂಭ್ರಮಲ್ಲಿದ್ದರು. ಆದರೆ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ತಾಸುಗಳು ಉಳಿದಿರುವಾಗ ಕಾಣಿಸಿಕೊಂಡ ಎದೆನೋವು ಪ್ರಾಣವನ್ನೇ ಕಸಿದುಕೊಂಡಿತು. ಕರ್ನಾಟಕದ ಅಥ್ಲೆಟಿಕ್ಸ್ ಕೋಚಿಂಗ್‌ನಲ್ಲಿ ಬೆಳ್ಳಿ ಬೆಳಕು ಮೂಡಿಸಿದ್ದ ಪುರುಷೋತ್ತಮ ರೈ ಅವರ ಬದುಕು ಹಾಗೆ ಅಸ್ತಂಗತವಾಯಿತು.
ಬೆಂಗಳೂರಿನ ಮಲ್ಲತ್ತಹಳ್ಳಿ ನಿವಾಸಿಯಾಗಿದ್ದ 79 ವರ್ಷದ ಪುರುಷೋತ್ತಮ ಅವರು ಶನಿವಾರ ನಡೆಯಲಿರುವ ವರ್ಚುವಲ್ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಲು ಸಜ್ಜಾಗಿದ್ದರು. ಅವರ ಶಿಷ್ಯಂದಿರೂ ಖುಷಿಯಲ್ಲಿದ್ದರು. ಆದರೆ ರಾತ್ರಿ ಅವರ ಸಾವಿನ ವಿಷಯ ತಿಳಿಯುತ್ತಿದ್ದಂತೆ ಶಿಷ್ಯವೃಂದ ಮತ್ತು ಕ್ರೀಡಾಕ್ಷೇತ್ರ ಸ್ತಬ್ಧವಾಯಿತು. ‘ಸಂಜೆ ಎದೆನೋವು ಕಾಣಿಸಿಕೊಂಡ ಕಾರಣ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಕೊನೆಯುಸಿರೆಳೆದರು’ ಎಂದು ಹೇಳುವಾಗ ಪತ್ನಿ, ಅಥ್ಲೀಟ್ ಆ್ಯನಿ ಪಿ.ರೈ ಗದ್ಗದಿತರಾದರು.
ಮೂವರು ಒಲಿಂಪಿಯನ್, ಮೂವರು ಅರ್ಜುನ ಪ್ರಶಸ್ತಿ ಪುರಸ್ಕೃತರು ಸೇರಿದಂತೆ 17 ಮಂದಿ ಅಂತರರಾಷ್ಟ್ರೀಯ ಕ್ರೀಡಾಪಟುಗಳನ್ನು ತಯಾರು ಮಾಡಿದ ‘ದ್ರೋಣಾಚಾರ್ಯ’ ಪುರುಷೋತ್ತಮ ರೈ. ರಾಜ್ಯಮಟ್ಟದಲ್ಲಿ ಹತ್ತಾರು ಅಥ್ಲೀಟ್‌ಗಳ ಪ್ರತಿಭೆಗೆ ಸಾಣೆ ಹಿಡಿದಿದ್ದಾರೆ. ಒಲಿಂಪಿಯನ್ ಅಶ್ವಿನಿ ನಾಚಪ್ಪ, ರೋಸಾಕುಟ್ಟಿ ಮತ್ತು ಜಿ.ಜಿ.ಪ್ರಮೀಳಾ ಅವರು ಪುರುಷೋತ್ತಮ ಅವರ ಶಿಷ್ಯರು. ಎಸ್.ಡಿ.ಈಶನ್, ಪುಷ್ಪಾ ನಾಚಪ್ಪ, ಮುರಳಿಕುಟ್ಟನ್, ಮಾಲಾ ಎನ್.ಸಿದ್ಧಿ, ಎಂ.ಕೆ.ಆಶಾ, ಕಮಲಾ ಸಿದ್ಧಿ, ಸುಮವತಿ, ಯೇಸುದಾಸ್ ಪಿ.ಟಿ, ಜೈಸಿ ಥಾಮಸ್, ಎಸ್.ಡಿ.ಈಶನ್, ಸತ್ಯನಾರಾಯಣ, ಅರುಣ್ ಡಿ‘ಸೋಜಾ, ಬಾಬುಶೆಟ್ಟಿ, ಪ್ರಮೀಳಾ ಜಿ.ಜಿ, ಚಂದ್ರಶೇಖರ ರೈ ಮುಂತಾದವರ ಪ್ರತಿಭೆಗೆ ರೈ ಅವರು ಸಾಣೆ ಹಿಡಿದಿದ್ದರು.
ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಜನಿಸಿದ ಪುರುಷೋತ್ತಮ ರೈ ಸ್ಥಳೀಯ ಬೋರ್ಡ್ ಶಾಲೆಯಲ್ಲಿ 10ನೇ ತರಗತಿ ವರೆಗೆ ಓದಿದ್ದರು. ಸೇಂಟ್ ಫಿಲೋಮಿನಾ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಪೂರೈಸಿದ್ದರು. ಬ್ಯಾಂಕ್ ಉದ್ಯೋಗಿಯಾಗಿ, ಸೈನಿಕನಾಗಿ, ಕ್ರೀಡಾಪಟುವಾಗಿ, ಕೊನೆಗೆ ಕೋಚ್ ಆಗಿ ಗಮನ ಸೆಳೆದಿದ್ದರು. ಒಟ್ಟು 33 ಖ್ಯಾತ ಅಥ್ಲೀಟ್‌ಗಳು ಅವರ ಬಳಿ ತರಬೇತಿ ಪಡೆದಿದ್ದಾರೆ. ಡೆಕಾಥ್ಲೀಟ್ ಆಗಿದ್ದ ಅವರು ಕೇರಳದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಮತ್ತು ತಮಿಳುನಾಡಿನಲ್ಲಿ ಆಯೋಜಿಸಿದ್ದ ಮುಕ್ತ ಕೂಟದಲ್ಲಿ ಬೆಳ್ಳಿ ಪದಕ ಗಳಿಸಿದ್ದರು. ಕರ್ನಾಟಕ ರಾಜ್ಯ ಹ್ಯಾಂಡ್‌ಬಾಲ್ ತಂಡವನ್ನೂ ಮುನ್ನಡೆಸಿದ ಬಹುಮುಖ ಪ್ರತಿಭೆ.
ಬ್ಯಾಂಕಿನಲ್ಲಿ ಉದ್ಯೋಗ ಮಾಡುತ್ತಿದ್ದಾಗ ಭಾರತ–ಚೀನಾ ಯುದ್ಧದ ಕಹಳೆ ಮೊಳಗಿತ್ತು. ಆಗ ಸ್ನೇಹಿತರು ಸೇನೆಗೆ ಸೇರಲು ಪ್ರೇರೇಪಿಸಿದರು. ಅಲ್ಲಿಂದ ಅವರ ಬದುಕು ತಿರುವು ಕಂಡಿತು. ಸೇನೆಯಲ್ಲಿದ್ದಾಗ ಅಥ್ಲೆಟಿಕ್ಸ್‌ನಲ್ಲಿ ಸಾಧನೆ ಮಾಡಿ 1973ರಲ್ಲಿ ಎನ್‌ಐಎಸ್‌ನಲ್ಲಿ ಕೋಚಿಂಗ್ ತರಬೇತಿ ಪೂರ್ಣಗೊಳಿಸಿದರು. 1977ರಲ್ಲಿ ಬೆಂಗಳೂರಿಗೆ ವರ್ಗವಾಯಿತು. ಕಂಠೀರವ ಕ್ರೀಡಾಂಗಣದಲ್ಲಿ ತರಬೇತಿ ನೀಡಲು ಆರಂಭಿಸಿದರು. 1981ರಲ್ಲಿ ಸೇನೆಯಿಂದ ನಿವೃತ್ತರಾಗಿ ರಾಜ್ಯ ಕ್ರೀಡಾ ಇಲಾಖೆಯಲ್ಲಿ ಕೋಚ್ ಆದರು. 1987ರಲ್ಲಿ ಭಾರತ ಕ್ರೀಡಾ ಪ್ರಾಧಿಕಾರದಲ್ಲಿ ಕೋಚ್ ಆಗಿ ನೇಮಕಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.