ADVERTISEMENT

ಅಥ್ಲೆಟಿಕ್ ಕೂಟ: ಶುಲ್ಕ ಕೈಬಿಟ್ಟ ಕೆಎಎ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2022, 8:30 IST
Last Updated 7 ಆಗಸ್ಟ್ 2022, 8:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಗಳೂರು: ಇದೇ 26ರಿಂದ 28ರ ವರೆಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಜ್ಯ ಅಥ್ಲೆಟಿಕ್ ಚಾಂಪಿಯನ್‍ಷಿಪ್ ನಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳಿಂದ ಪ್ರವೇಶ ಶುಲ್ಕ ಪಡೆಯುವ ನಿರ್ಧಾರವನ್ನು ಕರ್ನಾಟಕ ರಾಜ್ಯ ಅಥ್ಲೆಟಿಕ್ ಸಂಸ್ಥೆ ಕೈಬಿಟ್ಟಿದೆ.

ಭಾರತ ಅಥ್ಲೆಟಿಕ್ ಫೆಡರೇಷನ್ (ಎಎಫ್ಐ) ನಿರ್ದೇಶನದಂತೆ ಜೂನಿಯರ್ ಮತ್ತು ಸೀನಿಯರ್ ಅಥ್ಲೀಟ್ ಗಳಿಂದ ಕ್ರಮವಾಗಿ ₹ 200 ಮತ್ತು ₹ 600 ಪಡೆಯಲು ನಿರ್ಧರಿಸಲಾಗಿತ್ತು.

ಇದಕ್ಕೆ ಕ್ರೀಡಾಪಟುಗಳಿಂದ, ಕೆಎಎ ಜಿಲ್ಲಾ ಘಟಕಗಳಿಂದ ಮತ್ತು ನೊಂದಾಯಿತ ಕ್ಲಬ್ ಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಉತ್ತರ‌ ಕರ್ನಾಟಕದ ಕೆಲವು ಘಟಕಗಳು ಕೂಟವನ್ನೇ ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದವು.

ADVERTISEMENT

ಈ ಕುರಿತು, 'ಅಥ್ಲೀಟ್ ಗಳ ಹಾದಿಗೆ ಶುಲ್ಕದ ಹರ್ಡಲ್' ಎಂಬ ಶೀರ್ಷಿಕೆಯಲ್ಲಿ ಭಾನುವಾರ 'ಪ್ರಜಾವಾಣಿ' ವರದಿ ಪ್ರಕಟಿಸಿತ್ತು.
ಶುಲ್ಕ ಪಡೆಯದೇ ಇರುವ ನಿರ್ಧಾರವನ್ನು ಕೆಎಎ ಗೌರವ ಕಾರ್ಯದರ್ಶಿ ಎ.ರಾಜವೇಲು ತಿಳಿಸಿದರು.

'ಶುಲ್ಕದ ಬಗ್ಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಎಎಫ್ಐನ ಆನ್ಲೈನ್ ವ್ಯವಸ್ಥೆಯನ್ನು ನೋಡಿಕೊಳ್ಳುವ ಸ್ಪೋರ್ಟಿಂಗ್ ಇಂಡಿಯಾ ಕಂಪನಿಯವರ ಜೊತೆ ಮಾತುಕತೆ ನಡೆಯಿತು. ಎಲ್ಲವೂ ಆನ್ಲೈನ್ ನಲ್ಲಿ‌ ನಡೆಯುವುದರಿಂದ ಶುಲ್ಕ ಭರಿಸದೇ ಇದ್ದರೆ ಪ್ರವೇಶ ಪತ್ರ ಸಿಗುವುದಿಲ್ಲ. ಹೀಗಾಗಿ ಶುಲ್ಕವನ್ನು ಕೆಎಎ ಭರಿಸಿ ಅಥ್ಲೆಟಿಕ್ ಕೂಟವನ್ನು ನಡೆಸಲಿದೆ' ಎಂದು ರಾಜವೇಲು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.