ಟೋಕಿಯೊ: ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿ ಸಿಡ್ನಿಗೆ ಮರಳುವಾಗ ಆಸ್ಟ್ರೇಲಿಯಾದ ರಗ್ಬಿ ಮತ್ತು ಫುಟ್‌ಬಾಲ್ ಆಟಗಾರರು ವಿಮಾನದಲ್ಲಿ ತೋರಿದ ದುರ್ವರ್ತನೆಯನ್ನು ಆ ತಂಡದ ಷೆಫ್ ಡಿ ಮಿಷನ್ ಇಯಾನ್ ಚೆಸ್ಟರ್‌ಮನ್ ಬಲವಾಗಿ ಟೀಕಿಸಿದ್ದಾರೆ.
ಬುಧವಾರ ಟೋಕಿಯೊದಲ್ಲಿ ಮಾತನಾಡಿದ ಚೆಸ್ಟರ್‌ಮನ್, ‘ಈ ಕ್ರೀಡಾಪಟುಗಳು ಕೆಟ್ಟದಾಗಿ ವರ್ತಿಸಿದರು. ಸಿಬ್ಬಂದಿ ಮನವಿಗೆ ಸ್ಪಂದಿಸಲಿಲ್ಲ. ಅತಿಯಾಗಿ ಮದ್ಯಪಾನ ಮಾಡಿದ್ದರು. ಒಬ್ಬ ಕ್ರೀಡಾಪಟು ವಿಮಾನದ ಶೌಚಾಲಯದಲ್ಲಿ ವಾಂತಿ ಮಾಡಿದ್ದರು’ ಎಂದು ತಿಳಿಸಿದರು. ಪ್ರಕರಣದ ಬಗ್ಗೆ ಕೇಳಿದ ಪ್ರಶ್ನೆಗೆ ಈ ವಿವರ ನೀಡಿದರು.
ಜುಲೈ 29ರ ಸಂಜೆಯಿಂದ ಆಟಗಾರರು ಗುಂಡು ಪಾರ್ಟಿಯಲ್ಲಿ ತೊಡಗಿದ್ದರು. ಶುಕ್ರವಾರ ಬೆಳಿಗ್ಗೆ ಸಿಡ್ನಿಗೆ ಮರಳಲು ವಿಮಾನ ಹತ್ತಿದ್ದರು.
ಜಪಾನ್ ಏರ್‌ಲೈನ್ಸ್‌ನಲ್ಲಿ ವಿಮಾನದಲ್ಲಿ ಆಸ್ಟ್ರೇಲಿಯಾದ 49 ಮಂದಿ ಕ್ರೀಡಾಪಟುಗಳಿದ್ದರು ಎಂದು ಖಚಿತಪಡಿಸಿದ ಚೆಸ್ಟರ್‌ಮನ್, ತರಲೆ ಮಾಡಿದವರ ವಿವರ ಲಭ್ಯವಿಲ್ಲ ಎಂದರು.
ಆದರೆ, ಆಸ್ಟ್ರೇಲಿಯಾದ ರಗ್ಬಿ ಮತ್ತು ಸಾಕರ್ ಫೆಡರೇಷನ್‌ಗಳು ಈ ಬಗ್ಗೆ ವಿಚಾರಣೆ ನಡೆಸಿ ನಿರ್ದಿಷ್ಟ ಆಟಗಾರರ ವಿರುದ್ಧ ನಿರ್ಬಂಧ ಹೇರಬಹುದೆಂಬ ವಿಶ್ವಾಸವನ್ನು ಚೆಸ್ಟರ್‌ಮನ್ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.