ADVERTISEMENT

ಪ್ಯಾರಿಸ್ ಒಲಿಂಪಿಕ್: ಮುಖಭಂಗದಿಂದ ಪಾರಾದ ಈಜು ಕೋಚ್‌

ದಕ್ಷಿಣ ಕೊರಿಯಾ ಸ್ಪರ್ಧಿ ಬೆಂಬಲಿಸಿ ಮಾತನಾಡಿದ್ದ ಪಾಲ್‌ಫ್ರೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2024, 13:29 IST
Last Updated 26 ಜುಲೈ 2024, 13:29 IST
<div class="paragraphs"><p>ರಾಯಿಟರ್ಸ್ ಚಿತ್ರ</p></div>

ರಾಯಿಟರ್ಸ್ ಚಿತ್ರ

   

ಪ್ಯಾರಿಸ್‌: ಎದುರಾಳಿ ದಕ್ಷಿಣ ಕೊರಿಯಾದ ಈಜುಸ್ಪರ್ಧಿ, ತಮ್ಮದೇ ದೇಶದ ಪ್ರಮುಖ ಸ್ಪರ್ಧಿಗಳನ್ನು ಹಿಮ್ಮೆಟ್ಟಿಸಿ ಚಿನ್ನ ಗೆಲ್ಲುತ್ತಾರೆ ಎಂದು ಹೇಳಿದ ಆಸ್ಟ್ರೇಲಿಯಾದ ಕೋಚ್ ಒಬ್ಬರು ‘ತವರಿಗೆ ಮರಳಬೇಕಾದ’ ಮುಖಭಂಗದಿಂದ ಪಾರಾಗಿದ್ದಾರೆ.

ಈ ಕೋಚ್‌ ಮೈಕೆಲ್‌ ಪಾಲ್‌ಫ್ರೆ ಈ ವಾರದ ಆರಂಭದಲ್ಲಿ ದಕ್ಷಿಣ ಕೊರಿಯಾದ ಮಾಧ್ಯಮಗಳ ಎದುರು ಮಾತನಾಡುವಾಗ ಸಮಸ್ಯೆ ಮೈಮೇಲೆ ಎಳೆದುಕೊಂಡಿದ್ದರು. ‘ಪುರುಷರ 400 ಮೀ. ಫ್ರೀಸ್ಟೈಲ್‌ ಸ್ಪರ್ಧೆಯಲ್ಲಿ ದಕ್ಷಿಣ ಕೊರಿಯಾದ ಕಿಮ್‌ ವೂ–ಮಿನ್ ಅವರು, ಆಸ್ಟ್ರೇಲಿಯಾದ ಸ್ಯಾಮ್‌ ಶಾರ್ಟ್‌ ಮತ್ತು ಎಲಿಜಾ ವಿನ್ನಿಂಗ್ಟನ್‌ ಅವರನ್ನು ಹಿಂದೆಹಾಕಿ ಚಿನ್ನ ಗೆಲ್ಲುವರೆಂಬ ವಿಶ್ವಾಸವಿದೆ’ ಎಂದು ಪಾಲ್‌ಫ್ರೇ ಹೇಳಿದ್ದರು.

ADVERTISEMENT

ಈ ಮೂರೂ ಮಂದಿ– ಕಿಮ್‌ ವೂ, ಶಾರ್ಟ್‌, ವಿನಿಂಗ್ಟನ್‌– ಮಾಜಿ ವಿಶ್ವ ಚಾಂಪಿಯನ್ನರು. ಲಾ ಡಿಫೆನ್ಸ್‌ ಅರೇನಾದಲ್ಲಿ ಶನಿವಾರ ನಡೆಯಲಿರುವ ಸ್ಪರ್ಧೆಯಲ್ಲಿ ಮುಖಾಮುಖಿ ಆಗಲಿದ್ದಾರೆ.

ಮುಖ್ಯ ಈಜು ಕೋಚ್‌ ರೋಹನ್ ಟೇಲರ್‌ ಅವರು ಪಾಲ್‌ಫ್ರೇ ಅವರನ್ನು ‘ಆಸ್ಟ್ರೇಲಿಯನ್ನರಂತೆ ವರ್ತಿಸಿಲ್ಲ. ಅವರ ವರ್ತನೆ ತೀವ್ರವಾಗಿ ನಿರಾಶೆ ಮೂಡಿಸಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದರೆ ತಂಡದ ಈಜುಪಟುಗಳ ಜೊತೆ ಚರ್ಚೆ ನಡೆಸಿದ ರೋಹನ್‌, ‘ನಮ್ಮ ಮುಂದೆ ಎರಡೇ ಆಯ್ಕೆಗಳಿದ್ದವು. ಒಂದು ಅವರನ್ನು ಇಲ್ಲೇ ಉಳಿಸುವುದು. ಇಲ್ಲವೇ ಮನೆಗೆ ಕಳಿಸುವುದು. ಆದರೆ ಸ್ಪರ್ಧಿಗಳ ಜೊತೆ ಚರ್ಚೆ ನಡೆಸಿದ ನಂತರ ತಂಡದ ಹಿತಾಸಕ್ತಿಯಿಂದ ಅವರನ್ನು ಇಲ್ಲೇ ಉಳಿಸಿಕೊಳ್ಳಲು ನಿರ್ಧರಿಸಿದೆವು’ ಎಂದಿದ್ದಾರೆ. ಆಸ್ಟ್ರೇಲಿಯಾ ತಂಡದಲ್ಲಿ 41 ಮಂದಿ ಈಜುಪಟುಗಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.