ನವದೆಹಲಿ: ಟೋಕಿಯೊ ಪ್ಯಾರಾಲಿಂಪಿಕ್ಸ್ ಚಾಂಪಿಯನ್ ಅವನಿ ಲೇಖರಾ ಅವರು ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ವಿಶ್ವಕಪ್ ಪ್ಯಾರಾ ಶೂಟಿಂಗ್‌ನಲ್ಲಿ ವಿಶ್ವದಾಖಲೆ ಸಾಧನೆಯೊಂದಿಗೆ ಚಿನ್ನದ ಪದಕ ಗೆದ್ದುಕೊಂಡರು.
ಮಂಗಳವಾರ ನಡೆದ ಮಹಿಳೆಯರ 10 ಮೀ. ಏರ್ ರೈಫಲ್ ವಿಭಾಗದಲ್ಲಿ ಅವರು 250.6 ಸ್ಕೋರ್ ಕಲೆಹಾಕಿ ಅಗ್ರಸ್ಥಾನ ಪಡೆದರು. 20 ಹರೆಯದ ಅವನಿ ತಮ್ಮದೇ ಹೆಸರಿನಲ್ಲಿದ್ದ ದಾಖಲೆ (249.6) ಉತ್ತಮಪಡಿಸಿಕೊಂಡರಲ್ಲದೆ, 2024ರ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದರು.
247.6 ಸ್ಕೋರ್ ಮಾಡಿದ ಪೋಲೆಂಡ್‌ನ ಎಮಿಲಿಯಾ ಬಬ್‌ಸ್ಕಾ ಬೆಳ್ಳಿ ಗೆದ್ದರೆ, ಸ್ವೀಡನ್‌ನ ಅನ್ನಾ ನಾರ್ಮನ್ (225.6) ಕಂಚು ಜಯಿಸಿದರು.
ಅವನಿ ಅವರ ಕೋಚ್‌ಗೆ ವೀಸಾ ನಿರಾಕರಿಸಿದ್ದರಿಂದ ಅವರು ಈ ಟೂರ್ನಿಯಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಕಳೆದುಕೊಳ್ಳುತ್ತಿದ್ದರು. ಆದರೆ ಭಾರತ ಕ್ರೀಡಾ ಪ್ರಾಧಿಕಾರ ಮತ್ತು ಕ್ರೀಡಾ ಸಚಿವಾಲಯ ಮಧ್ಯಪ್ರವೇಶಿಸಿ, ಗೊಂದಲ ಬಗೆಹರಿಸಿತ್ತು.
ಕಳೆದ ಆಗಸ್ಟ್‌ನಲ್ಲಿ ನಡೆದಿದ್ದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅವನಿ 10 ಮೀ. ಏರ್ ರೈಫಲ್‌ನಲ್ಲಿ ಬಂಗಾರ ಜಯಿಸಿದ್ದರು. ಪ್ಯಾರಾಲಿಂಪಿಕ್ಸ್‌ನಲ್ಲಿ ಒಂದಕ್ಕಿಂತ ಹೆಚ್ಚು ಸಲ ಪದಕ ಜಯಿಸಿದ ಭಾರತದ ಮೊದಲ ಮಹಿಳಾ ಶೂಟರ್ ಎಂಬ ಗೌರವ ಅವರಿಗೆ ಒಲಿದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.