ADVERTISEMENT

ಇಂಡಿಯನ್ ಗ್ರ್ಯಾಂಡ್ ಪ್ರಿ ಅಥ್ಲೆಟಿಕ್ಸ್‌: ಅವಿನಾಶ್ ದಾಖಲೆ, ಪ್ರಿಯಾಗೆ ಚಿನ್ನ

ಪೂವಮ್ಮಗೆ ಬೆಳ್ಳಿ; 100 ಮೀಟರ್ಸ್ ಓಟದಲ್ಲಿ ಸಿಮಿ ಮಿಂಚು

ಪಿಟಿಐ
Published 23 ಮಾರ್ಚ್ 2022, 19:32 IST
Last Updated 23 ಮಾರ್ಚ್ 2022, 19:32 IST
ಅವಿನಾಶ್ ಸಬ್ಳೆ –ಟ್ವಿಟರ್ ಚಿತ್ರ
ಅವಿನಾಶ್ ಸಬ್ಳೆ –ಟ್ವಿಟರ್ ಚಿತ್ರ   

ತಿರುವನಂತಪುರ: ಸ್ಟೀ‍ಪಲ್‌ಚೇಸ್‌ನಲ್ಲಿ ಮಿಂಚು ಹರಿಸಿದ ಅವಿನಾಶ್‌ ಸಬ್ಳೆ ಇಲ್ಲಿ ನಡೆಯುತ್ತಿರುವ ಇಂಡಿಯನ್ ಗ್ರ್ಯಾಂಡ್ ಪ್ರಿ–2 ಅಥ್ಲೆಟಿಕ್ಸ್‌ನ ಎರಡನೇ ದಿನ ದಾಖಲೆ ಬರೆದರು. ಪುರುಷರ 3000 ಮೀಟರ್ಸ್ ಸ್ಪರ್ಧೆಯಲ್ಲಿ ಅವರು 8 ನಿಮಿಷ 16.21 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು.

ಟೋಕಿಯೊ ಒಲಿಂಪಿಕ್ಸ್ ನಂತರ ಇದೇ ಮೊದಲ ಬಾರಿ ಟ್ರ್ಯಾಕ್‌ಗೆ ಇಳಿದ ಮಹಾರಾಷ್ಟ್ರದ ಅವಿನಾಶ್ ಅವರಿಗೆ ಆರಂಭದಲ್ಲಿ ಹರಿಯಾಣದ ಬಾಲಕಿಶನ್ ಭಾರಿ ಪೈಪೋಟಿ ನೀಡಿದರು. ಕೊನೆಯ ಮೂರು ಲ್ಯಾಪ್‌ಗಳಲ್ಲಿ ಮುನ್ನುಗ್ಗಿದ ಅವಿನಾಶ್‌ 1.91 ಸೆಕೆಂಡುಗಳ ಅಂತರದಲ್ಲಿ ಮುನ್ನಡೆ ಸಾಧಿಸಿ ಚಿನ್ನ ಗೆದ್ದರು. ಈ ಮೂಲಕ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ತಾವೇ ಸ್ಥಾಪಿಸಿದ್ದ ದಾಖಲೆ ಮುರಿದರು.

ಮಹಿಳೆಯರ ವಿಭಾಗದ 400 ಮೀಟರ್ಸ್ ಓಟದಲ್ಲಿ ಕರ್ನಾಟಕದ ಇಬ್ಬರು ಅಥ್ಲೀಟ್‌ಗಳು ಜಿದ್ದಾಜಿದ್ದಿಯ ಪೈಪೋಟಿ ನಡೆಸಿದರು. ಅನುಭವಿ ಎಂ.ಆರ್‌.ಪೂವಮ್ಮ ಅವರನ್ನು ಹಿಂದಿಕ್ಕಿದ ಯುವ ಕ್ರೀಡಾಪಟು ಪ್ರಿಯಾ ಮೋಹನ್ ಮೊದಲಿಗರಾದರು. ಕೇರಳದ ಜಿಶ್ನಾ ಮ್ಯಾಥ್ಯೂ (53.40 ಸೆ) ಕಂಚಿನ ಪದಕ ಗಳಿಸಿದರು. ಅನುಭವಿ ವಿ.ಕೆ. ವಿಸ್ಮಯ ಅವರನ್ನು ಹಿಂದಿಕ್ಕಿದ ಕರ್ನಾಟಕದ ಇಂಚರಾ ಮಿಂಚಿದರು.52.37 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ ಪ್ರಿಯಾ ವೈಯಕ್ತಿಕ ಶ್ರೇಷ್ಠ ಸಾಧನೆ ಮಾಡಿದರು. ಯುವ ಓಟಗಾರ್ತಿಯರ ನಡುವೆ ಮಿಂಚಿದ ಪೂವಮ್ಮ (52.44 ಸೆ) ಪೋಲೆಂಡ್‌ನಲ್ಲಿ 2016ರಲ್ಲಿ ನಡೆದ ಕೂಟದ ನಂತರ ಗರಿಷ್ಠ ಸಾಧನೆ ಮಾಡಿದರು.

ADVERTISEMENT

100 ಮೀಟರ್ಸ್ ಓಟದಲ್ಲಿ ಕರ್ನಾಟಕದ ಎನ್‌.ಎಸ್‌.ಸಿಮಿ 11.79 ಸೆಕೆಂಡುಗಳ ಸಾಧನೆಯೊಂದಿಗೆ ಚಿನ್ನ ಗೆದ್ದುಕೊಂಡರು. ಕರ್ನಾಟಕದ ಎ.ಟಿ.ದಾನೇಶ್ವರಿ (11.83 ಸೆ) ಬೆಳ್ಳಿ ಮತ್ತು ಕೇರಳದ ಅಂಜಲಿ (11.87) ಕಂಚು ಗೆದ್ದುಕೊಂಡರು. 800 ಮೀಟರ್ಸ್ ಓಟದ ಚಿನ್ನವೂ ಕರ್ನಾಟಕದ ಪಾಲಾಯಿತು. ಇ.ಬಿ ಅರ್ಪಿತಾ (2:11.44 ಸೆ), ಕೇರಳದ ಪ್ರೆಸಿಲ್ಲ ಡ್ಯಾನಿಯಲ್ (2;12.47 ಸೆ) ಮತ್ತು ಸಾರಾ ಕೋಶಿ (2:13.49) ಕ್ರಮವಾಗಿ ಚಿನ್ನ, ಬೆಳ್ಳಿ ಮತ್ತು ಕಂಚು ಗೆದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.