ADVERTISEMENT

ಪ್ರಶಸ್ತಿಗಾಗಿ ಯಿಂಗ್–ಯೂಫಿ ಪೈಪೋಟಿ

ಮಲೇಷ್ಯಾ ಓಪನ್‌ ಬ್ಯಾಡ್ಮಿಂಟನ್‌: ವಿಕ್ಟರ್‌ ಗೆಲುವಿನ ಓಟ

​ಪ್ರಜಾವಾಣಿ ವಾರ್ತೆ
Published 7 ಜುಲೈ 2018, 20:09 IST
Last Updated 7 ಜುಲೈ 2018, 20:09 IST
ಚೀನಾ ತೈಪೆಯ ತೈ ಜು ಯಿಂಗ್‌ ಷಟಲ್‌ ಹಿಂತಿರುಗಿಸಲು ಮುಂದಾದರು -ಎಎಫ್‌ಪಿ ಚಿತ್ರ
ಚೀನಾ ತೈಪೆಯ ತೈ ಜು ಯಿಂಗ್‌ ಷಟಲ್‌ ಹಿಂತಿರುಗಿಸಲು ಮುಂದಾದರು -ಎಎಫ್‌ಪಿ ಚಿತ್ರ   

ಜಕಾರ್ತ: ಚೀನಾ ತೈಪೆಯ ತೈ ಜು ಯಿಂಗ್‌ ಮತ್ತು ಚೀನಾದ ಚೆನ್‌ ಯೂಫಿ ಅವರು ಇಂಡೊನೇಷ್ಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದಾರೆ.

ಜಿಬಿಕೆ ಇಸ್ತೊರಾ ಸೆನಾಯನ್‌ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಯೂಫಿ 21–23, 21–18, 23–21ರಲ್ಲಿ ದಕ್ಷಿಣ ಕೊರಿಯಾದ ಸಂಗ್‌ ಜಿ ಹ್ಯೂನ್‌ ಅವರನ್ನು ಪರಾಭವಗೊಳಿಸಿದರು.

ಟೂರ್ನಿಯಲ್ಲಿ ಐದನೇ ಶ್ರೇಯಾಂಕ ಹೊಂದಿರುವ ಯೂಫಿ ಮೊದಲ ಗೇಮ್‌ನಲ್ಲಿ ಏಳನೇ ಶ್ರೇಯಾಂಕಿತೆ ಹ್ಯೂನ್‌ ವಿರುದ್ಧ ಸೋತರು. ಆರಂಭಿಕ ನಿರಾಸೆಯಿಂದ ಎದೆಗುಂದದ ಅವರು ನಂತರದ ಎರಡೂ ಗೇಮ್‌ಗಳಲ್ಲಿ ಮೋಡಿ ಮಾಡಿ ಜಯದ ತೋರಣ ಕಟ್ಟಿದರು.

ADVERTISEMENT

ನಾಲ್ಕರ ಘಟ್ಟದ ಮತ್ತೊಂದು ಹಣಾಹಣಿಯಲ್ಲಿ ತೈ ಜು ಯಿಂಗ್‌ 21–13, 21–18ರಲ್ಲಿ ಚೀನಾದ ಹೀ ಬಿಂಗ್‌ಜಿಯಾವೊ ಅವರನ್ನು ಸೋಲಿಸಿದರು.

ಟೂರ್ನಿಯಲ್ಲಿ ಅಗ್ರಶ್ರೇಯಾಂಕ ಹೊಂದಿರುವ ಯಿಂಗ್‌, ಮೊದಲ ಗೇಮ್‌ನ ಆರಂಭದಲ್ಲಿ ಎದುರಾಳಿಯಿಂದ ಪ್ರಬಲ ಪೈಪೋಟಿ ಎದುರಿಸಿದರು. ನಂತರ ಆಕರ್ಷಕ ಆಟ ಆಡಿದ ಅವರು ಸುಲಭವಾಗಿ ಬಿಂಗ್‌ಜಿಯಾವೊ ಸವಾಲು ಮೀರಿದರು.

ಎರಡನೇ ಗೇಮ್‌ನ ಶುರುವಿನಿಂದಲೇ ಎಂಟನೇ ಶ್ರೇಯಾಂಕಿತೆ ಬಿಂಗ್‌ಜಿಯಾವೊ ಮಿಂಚಿದರು. ಹೀಗಾಗಿ 18–18ರ ಸಮಬಲ ಕಂಡುಬಂತು. ನಂತರ ದಿಟ್ಟ ಆಟ ಆಡಿದ ಯಿಂಗ್‌, ಖುಷಿಯ ಕಡಲಲ್ಲಿ ತೇಲಿದರು.

ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಡೆನ್ಮಾರ್ಕ್‌ನ ವಿಕ್ಟರ್‌ ಆ್ಯಕ್ಸಲ್‌ಸನ್‌ ಫೈನಲ್‌ಗೆ ಲಗ್ಗೆ ಇಟ್ಟರು.

ಸೆಮಿಫೈನಲ್‌ ಹೋರಾಟದಲ್ಲಿ ಆ್ಯಕ್ಸಲ್‌ಸನ್‌ 18–21, 21–14, 21–11ರಲ್ಲಿ ಚೀನಾದ ಶಿ ಯೂಕಿ ವಿರುದ್ಧ ಗೆದ್ದರು.

ಮೊದಲ ಗೇಮ್‌ನಲ್ಲಿ ಎಡವಿದ ವಿಕ್ಟರ್‌, ಎರಡು ಮತ್ತು ಮೂರನೇ ಗೇಮ್‌ಗಳಲ್ಲಿ ಛಲದಿಂದ ಹೋರಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.