ಟೋಕಿಯೊ (ಪಿಟಿಐ): ಭಾರತದ ಪಿ.ವಿ.ಸಿಂಧು, ಕಿದಂಬಿ ಶ್ರೀಕಾಂತ್ ಮತ್ತು ಎಚ್.ಎಸ್.ಪ್ರಣಯ್ ಅವರು ಜಪಾನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.
ಮಂಗಳವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಆರಂಭಿಕ ಸುತ್ತಿನ ಹಣಾಹಣಿಯಲ್ಲಿ ಸಿಂಧು 21–17, 7–21, 21–13ರಲ್ಲಿ ಜಪಾನ್‌ನ ಸಯಾಕ ಟಕಹಾಶಿ ವಿರುದ್ಧ ಗೆದ್ದರು. ಈ ಹೋರಾಟ 53 ನಿಮಿಷ ನಡೆಯಿತು.
ಟೂರ್ನಿಯಲ್ಲಿ ಮೂರನೇ ಶ್ರೇಯಾಂಕ ಹೊಂದಿರುವ ಸಿಂಧು ಮೊದಲ ಗೇಮ್‌ನ ಆರಂಭದಿಂದಲೇ ಮಿಂಚಿನ ಆಟ ಆಡಿ ಚುರುಕಾಗಿ ಪಾಯಿಂಟ್ಸ್ ಗಳಿಸಿದರು. ಈ ಮೂಲಕ ಗೇಮ್ ಗೆದ್ದರು.
ಶ್ರೇಯಾಂಕ ರಹಿತ ಆಟಗಾರ್ತಿ ಸಯಾಕ, ಎರಡನೇ ಗೇಮ್‌ನಲ್ಲಿ ತಿರುಗೇಟು ನೀಡಿ 1–1ರಲ್ಲಿ ಸಮಬಲ ಮಾಡಿಕೊಂಡರು.
ಮೂರನೇ ಗೇಮ್‌ನ ಮೊದಲಾರ್ಧದಲ್ಲಿ ಉಭಯ ಆಟಗಾರ್ತಿಯರು ಜಿದ್ದಾಜಿದ್ದಿನ ಪೈಪೋಟಿ ನಡೆಸಿದರು. ದ್ವಿತೀಯಾರ್ಧದಲ್ಲಿ ಪರಿಣಾಮಕಾರಿ ಸಾಮರ್ಥ್ಯ ತೋರಿದ ಸಿಂಧು ಸಂಭ್ರಮಿಸಿದರು.
ಮುಂದಿನ ಸುತ್ತಿನಲ್ಲಿ ಸಿಂಧು, ಚೀನಾದ ಫಿಂಗ್‌ಜೀ ಗಾವೊ ವಿರುದ್ಧ ಆಡಲಿದ್ದಾರೆ. ಮೊದಲ ಸುತ್ತಿನ ಇನ್ನೊಂದು ಪಂದ್ಯದಲ್ಲಿ ಗಾವೊ 21–10, 21–8ರಲ್ಲಿ ಭಾರತದ ವೈಷ್ಟವಿ ರೆಡ್ಡಿ ಜಕ್ಕಾ ವಿರುದ್ಧ ಗೆದ್ದರು.
ಪುರುಷರ ಸಿಂಗಲ್ಸ್ ವಿಭಾಗದ ಆರಂಭಿಕ ಸುತ್ತಿನ ಹೋರಾಟದಲ್ಲಿ ಶ್ರೀಕಾಂತ್ 21–13, 21–15ರಲ್ಲಿ ಚೀನಾದ ಯುಕ್ಸಿಯಾಂಗ್ ಹುವಾಂಗ್ ಅವರನ್ನು ಸೋಲಿಸಿದರು. ಭಾರತದ ಆಟಗಾರ ಎರಡು ಗೇಮ್‌ಗಳಲ್ಲೂ ಪ್ರಾಬಲ್ಯ ಮೆರೆದರು.
ಎರಡನೇ ಸುತ್ತಿನಲ್ಲಿ ಶ್ರೀಕಾಂತ್‌ಗೆ ಹಾಂಕಾಂಗ್‌ನ ವಿನ್ಸೆಂಟ್ ವಾಂಗ್ ವಿಂಗ್ ಕಿ ಸವಾಲು ಎದುರಾಗಲಿದೆ.
ಇನ್ನೊಂದು ಪಂದ್ಯದಲ್ಲಿ ಪ್ರಣಯ್ 21–18, 21–17ರಲ್ಲಿ ಇಂಡೊನೇಷ್ಯಾದ ಜೊನಾಥನ್ ಕ್ರಿಸ್ಟಿ ವಿರುದ್ಧ ಗೆದ್ದರು.
ಈ ಬಾರಿಯ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಜಯಿಸಿದ್ದ ಕ್ರಿಸ್ಟಿ ಮೊದಲ ಗೇಮ್‌ನ ಶುರುವಿನಲ್ಲಿ ಮಿಂಚಿದರು. ನಂತರ ಎದುರಾಳಿಯ ತಂತ್ರಗಳಿಗೆ ಪ್ರತಿ ತಂತ್ರ ಹೆಣೆದ ಪ್ರಣಯ್ ಗೆಲುವು ಒಲಿಸಿಕೊಂಡರು. ಎರಡನೇ ಗೇಮ್‌ನಲ್ಲೂ ಭಾರತದ ಆಟಗಾರ ಪ್ರಾಬಲ್ಯ ಮೆರೆದರು.
ಮುಂದಿನ ಸುತ್ತಿನಲ್ಲಿ ಪ್ರಣಯ್, ಇಂಡೊನೇಷ್ಯಾದ ಅಂಥೋಣಿ ಸಿನಿಸುಕಾ ವಿರುದ್ಧ ಆಡಲಿದ್ದಾರೆ.
ಮತ್ತೊಂದು ಪಂದ್ಯದಲ್ಲಿ ಸಮೀರ್ ವರ್ಮಾ ಸೋತರು.
ಮಿಶ್ರ ಡಬಲ್ಸ್ ವಿಭಾಗದ ಮೊದಲ ಸುತ್ತಿನ ಹಣಾಹಣಿಯಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ 13–21, 17–21ರಲ್ಲಿ ಚೀನಾದ ಯಿಲ್ಯು ವಾಂಗ್ ಮತ್ತು ಡಾಂಗ್‌ಪಿಂಗ್ ಹುವಾಂಗ್ ವಿರುದ್ಧ ಸೋತರು.
ಪ್ರಣಯ್ ಜೆರ‍್ರಿ ಚೋಪ್ರಾ ಮತ್ತು ಎನ್.ಸಿಕ್ಕಿ ರೆಡ್ಡಿ 21–9, 21–6ರಲ್ಲಿ ಮಲೇಷ್ಯಾದ ಮ್ಯಾಥ್ಯೂ ಫೊಗಾರ್ಟಿ ಮತ್ತು ಇಸಾಬೆಲ್ ಜೊಂಗ್ ಅವರನ್ನು ಮಣಿಸಿ ಎರಡನೇ ಸುತ್ತಿಗೆ ಲಗ್ಗೆ ಇಟ್ಟರು.
ಪ್ರಣವ್ ಮತ್ತು ಸಿಕ್ಕಿ ಮುಂದಿನ ಸುತ್ತಿನಲ್ಲಿ ಮಲೇಷ್ಯಾದ ಪೆಂಗ್ ಸೂನ್ ಚಾಂಗ್ ಮತ್ತು ಲಿಯು ಯಿಂಗ್ ಗೊಹ್ ವಿರುದ್ಧ ಸೆಣಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.