ADVERTISEMENT

ಏಷ್ಯನ್ ಗೇಮ್ಸ್‌ ಕುಸ್ತಿಯಲ್ಲಿ ಚಿನ್ನ ಗೆದ್ದ ಬಜರಂಗ್ ಪೂನಿಯಾ

ಗುರು ಸಾಧನೆ ಸರಿಗಟ್ಟಿದ ಶಿಷ್ಯ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2018, 19:15 IST
Last Updated 19 ಆಗಸ್ಟ್ 2018, 19:15 IST
ಚಿನ್ನದ ಪದಕ ಗೆದ್ದ ಬಳಿಕ ಬಜರಂಗ್ ಅವರನ್ನು ತಂಡದ ಸಿಬ್ಬಂದಿ ಎತ್ತಿಕೊಂಡು ಸಂಭ್ರಮಿಸಿದರು. –ಪಿಟಿಐ ಚಿತ್ರ
ಚಿನ್ನದ ಪದಕ ಗೆದ್ದ ಬಳಿಕ ಬಜರಂಗ್ ಅವರನ್ನು ತಂಡದ ಸಿಬ್ಬಂದಿ ಎತ್ತಿಕೊಂಡು ಸಂಭ್ರಮಿಸಿದರು. –ಪಿಟಿಐ ಚಿತ್ರ   

ಜಕಾರ್ತ:ಬಜರಂಗ್‌ ಪೂನಿಯಾ ಭಾನುವಾರ ಏಷ್ಯನ್ ಕ್ರೀಡಾಕೂಟದ ಕುಸ್ತಿಕಣದಲ್ಲಿ ತಮ್ಮ ‘ಉಸ್ತಾದ’ ಯೋಗೇಶ್ವರ್ ದತ್ ಅವರ ದಾಖಲೆಯನ್ನು ಸರಿಗಟ್ಟಿದರು.

ಪುರುಷರ ಫ್ರೀಸ್ಟೈಲ್ ಕುಸ್ತಿಯ 65 ಕೆ.ಜಿ. ವಿಭಾಗದಲ್ಲಿ ಚಿನ್ನ ಗೆದ್ದ ಬಜರಂಗ್ ಈ ಬಾರಿಯ ಕೂಟದಲ್ಲಿ ಭಾರತಕ್ಕೆ ಎರಡನೇ ಪದಕ ತಂದಿತ್ತರು. 2014ರ ಇಂಚೇನ್ ಏಷ್ಯನ್ ಗೇಮ್ಸ್‌ನಲ್ಲಿ ಯೋಗೇಶ್ವರ್ ಇದೇ ವಿಭಾಗದಲ್ಲಿ ಚಿನ್ನ ಜಯಿಸಿದ್ದರು. ಇದೀಗ ಅವರ ಗರಡಿಯಲ್ಲಿ ಬೆಳೆದಿರುವ ಬಜರಂಗ್ ಕೂಡ ಅದೇ ಸಾಧನೆ ಮಾಡಿದರು.

ಕಿಕ್ಕಿರಿದು ಸೇರಿದ್ದ ಅಭಿಮಾನಿಗಳ ಮುಂದೆ ನಡೆದ ಫೈನಲ್‌ನಲ್ಲಿ ಬಜರಂಗ್ 11–8ರಿಂದ ಜಪಾನ್‌ ದೇಶದ ಟಕಾಟಾನಿ ಡಯಾಚಿ ಅವರ ವಿರುದ್ಧ ಗೆದ್ದರು. ಕುಸ್ತಿ ತಂಡದ ನೆರವು ಸಿಬ್ಬಂದಿಯು ಅವರನ್ನು ಹೆಗಲ ಮೇಲೆ ಕೂರಿಸಿಕೊಂಡು ಅಂಕಣದಲ್ಲಿಯೇ ಸುತ್ತು ಹಾಕಿದರು. ಕೈಯಲ್ಲಿ ಅರಳಿದ್ದ ತ್ರಿವರ್ಣ ಧ್ವಜವನ್ನು ಎತ್ತಿಹಿಡಿದ ಬಜರಂಗ್ ಕಂಗಳಲ್ಲಿ ಆನಂದಭಾಷ್ಪ ಜಿನುಗುತ್ತಿತ್ತು. 74 ಕೆ.ಜಿ. ವಿಭಾಗದಲ್ಲಿ ದಿಗ್ಗಜ ಕುಸ್ತಿಪಟು ಸುಶೀಲ್‌ ಕುಮಾರ್ ಅರ್ಹತಾ ಸುತ್ತಿನಲ್ಲಿ ಅನುಭವಿಸಿದ್ದ ಸೋಲಿನ ನಿರಾಶೆಯನ್ನು ಬಜರಂಗ್ ದೂರ ಮಾಡಿದರು.

ADVERTISEMENT

24 ವರ್ಷದ ಬಜರಂಗ್ ಮೊದಲ ಸುತ್ತಿನಲ್ಲಿ ಬೈ ಪಡೆದರು. ನಂತರದ ಸುತ್ತಿನಲ್ಲಿ ಅವರು ಎಲ್ಲ ಮೂರು ಬೌಟ್‌ಗಳನ್ನೂ ಗೆದ್ದರು. ಈ ಸುತ್ತಿನಲ್ಲಿ ಬಜರಂಗ್ 13–3 ರಿಂದ ಉಜ್ಬೇಕಿಸ್ತಾನದ ಸೈರೊಜಿದ್ದೀನ್ ಎದುರು ಗೆದ್ದರು.

ಈಚೆಗೆ ಆಸ್ಟ್ರೇಲಿಯಾದ ಗೋಲ್ಡ್‌ಕೋಸ್ಟ್‌ನಲ್ಲಿ ನಡೆದಿದ್ದ ಕಾಮನ್‌ವೇಲ್ತ್‌ ಗೇಮ್ಸ್‌ನಲ್ಲಿಯೂ ಬಜರಂಗ್ ಚಿನ್ನದ ಪದಕ ಗಳಿಸಿದ್ದರು. ಅವರು 2014 ಏಷ್ಯನ್‌ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಪಡೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.