ಬೆಲ್‌ಗ್ರೇಡ್: ಭಾರತದ ಬಜರಂಗ್ ಪೂನಿಯಾ ಅವರು ಇಲ್ಲಿ ನಡೆಯುತ್ತಿರುವ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡರು.
ವಿಶ್ವ ಕುಸ್ತಿಯಲ್ಲಿ ಅವರಿಗೆ ಒಟ್ಟಾರೆಯಾಗಿ ಲಭಿಸಿದ ನಾಲ್ಕನೇ ಪದಕ ಇದು. ಈ ಸಾಧನೆ ಮಾಡಿದ ಭಾರತದ ಮೊದಲ ಕುಸ್ತಿಪಟು ಎಂಬ ಗೌರವ ಅವರಿಗೆ ಒಲಿಯಿತು.
65 ಕೆ.ಜಿ. ವಿಭಾಗದಲ್ಲಿ ಕಂಚಿನ ಪದಕಕ್ಕಾಗಿ ಭಾನುವಾರ ನಡೆದ ಹಣಾಹಣಿಯಲ್ಲಿ ಬಜರಂಗ್, 11–9 ರಲ್ಲಿ ಪೋರ್ಟೊರಿಕೊದ ಸೆಬಾಸ್ಟಿಯನ್ ರಿವೆರಾ ಅವರನ್ನು ಮಣಿಸಿದರು.
ಬಜರಂಗ್ ಅವರು ಕ್ವಾರ್ಟರ್ ಫೈನಲ್‌ನಲ್ಲಿ ಅಮೆರಿಕದ ಜಾನ್ ಮೈಕಲ್ ಡೈಕೊಮಿಹಾಲಿಸ್ ಎದುರು ಸೋತಿದ್ದರು. ರಿಪೇಜ್ ಸುತ್ತಿನಲ್ಲಿ 7–6 ರಲ್ಲಿ ಅರ್ಮೇನಿಯದ ವಾಜ್ಗೆನ್ ತೆವನ್‌ವನ್ ಅವರನ್ನು ಮಣಿಸಿ, ಕಂಚಿನ ಪದಕದ ಸುತ್ತಿಗೆ ಅರ್ಹತೆ ಪಡೆದಿದ್ದರು.
ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬಜರಂಗ್‌ಗೆ ದೊರೆತ ಮೂರನೇ ಕಂಚು ಇದು. ಅವರು 2013 ಮತ್ತು 2019 ರಲ್ಲೂ ಕಂಚು ಜಯಿಸಿದ್ದರು. 2018 ರಲ್ಲಿ ಬೆಳ್ಳಿ ಪದಕ ಪಡೆದದ್ದು ಅವರ ಉತ್ತಮ ಸಾಧನೆಯಾಗಿದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅವರು ಕಂಚು ಜಯಿಸಿದ್ದರು.
ಬೆಲ್‌ಗ್ರೇಡ್‌ನಲ್ಲಿ ನಡೆಯುತ್ತಿರುವ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾರತ 30 ಸದಸ್ಯರ ತಂಡವನ್ನು ಕಣಕ್ಕಿಳಿಸಿತ್ತು. ಕೇವಲ ಎರಡು ಪದಕ ಮಾತ್ರ ಲಭಿಸಿದೆ. ಬಜರಂಗ್ ಅಲ್ಲದೆ, ವಿನೇಶ್ ಫೋಗಾಟ್ ಅವರು ಮಹಿಳೆಯರ 53 ಕೆ.ಜಿ. ವಿಭಾಗದಲ್ಲಿ ಕಂಚು ಗೆದ್ದಿದ್ದಾರೆ.
ಟೋಕಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ರವಿ ಕುಮಾರ್ ದಹಿಯಾ ಅವರು ಇಲ್ಲಿ ಪದಕ ಗೆಲ್ಲುವಲ್ಲಿ ವಿಫಲರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.