ನವದೆಹಲಿ: ಕುಸ್ತಿಪಟು ಬಜರಂಗ್ ಪೂನಿಯಾ ಅವರನ್ನು ತಾತ್ಕಾಲಿಕವಾಗಿ ಅಮಾನತು ಮಾಡಿರುವ ಬಗ್ಗೆ ಮಾಹಿತಿ ನೀಡದ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ (ನಾಡಾ) ವಿರುದ್ಧ ವಿಶ್ವ ಉದ್ದೀಪನ ಮದ್ದು ವಿರೋಧಿ ಸಂಸ್ಥೆಗೆ (ವಾಡಾ) ಪತ್ರ ಬರೆಯುವುದಾಗಿ ಭಾರತ ಕುಸ್ತಿ ಫೆಡರೇಷನ್ ಅಧ್ಯಕ್ಷ (ಡಬ್ಲ್ಯುಎಫ್ಐ) ಸಂಜಯ್ ಸಿಂಗ್ ತಿಳಿಸಿದ್ದಾರೆ.
ಏಪ್ರಿಲ್ 23ರಂದು ಬಜರಂಗ್ ಅವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿ, ಹೆಚ್ಚಿನ ಶಿಸ್ತು ಕ್ರಮ ತಪ್ಪಿಸಲು ಮೇ 7 ರೊಳಗೆ ಉತ್ತರಿಸುವಂತೆ ನಾಡಾ ಸೂಚಿಸಿತ್ತು.
‘ನನ್ನ ಮೂತ್ರದ ಮಾದರಿ ತೆಗೆದುಕೊಳ್ಳಲು ಅಧಿಕಾರಿಗಳು ಅವಧಿ ಮೀರಿದ ಕಿಟ್ ತಂದಿದ್ದರು. ಡಬ್ಲ್ಯುಎಫ್ಐ ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ತಮ್ಮ ವಿರುದ್ಧ ನಿಲ್ಲುವ ಮಹಿಳಾ ಕುಸ್ತಿಪಟುಗಳನ್ನು ಹೆದರಿಸಲು ಅವಧಿ ಮೀರಿದ ಕಿಟ್‌ಗಳನ್ನು ಬಳಸುತ್ತಿದ್ದರು‘ ಅವರು ಬಜರಂಗ್ ಪೂನಿಯಾ ಆರೋಪಿಸಿದರು.
ವಾಡಾ ನಿಯಮ ಪ್ರಕಾರ, ‘ಅಧಿಸೂಚನೆಯ ನಂತರ ಮಾದರಿ ನೀಡಲು ನಿರಾಕರಿಸುವುದು ಅಥವಾ ಬಲವಾದ ಸಮರ್ಥನೆ ಇಲ್ಲದೆ ವಿಫಲವಾದರೆ ಅಥವಾ ಮಾದರಿ ಸಂಗ್ರಹವನ್ನು ತಪ್ಪಿಸುವುದು ಡೋಪಿಂಗ್ ವಿರೋಧಿ ನಿಯಮ ಉಲ್ಲಂಘನೆಯಾಗಿದೆ’.
‘ಏಪ್ರಿಲ್ 25 ರಂದು ನಾಡಾ ಡಿಜಿ ಮತ್ತು ಇತರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇನೆ ಮತ್ತು ಆ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗಲಿಲ್ಲ. ಬೆಳಿಗ್ಗೆ ನಾಡಾ ಅಧಿಕಾರಿಗಳಿಗೆ ಕರೆ ಮಾಡಿದಾಗಲೂ ನನ್ನ ಪ್ರಶ್ನೆಗೆ ಉತ್ತರಿಸಲಿಲ್ಲ. ಈ ಬಗ್ಗೆ ನಾಡಾ ಹಾಗೂ ವಾಡಾಗೆ ಪತ್ರ ಬರೆಯಲು ಯೋಜಿಸಿದ್ದೇನೆ’ ಎಂದು ಸಂಜಯ್ ಸಿಂಗ್ ತಿಳಿಸಿದ್ದಾರೆ.
ಮೇ 9 ರಿಂದ ಟರ್ಕಿಯಲ್ಲಿ ನಡೆಯಲಿರುವ ವಿಶ್ವ ಅರ್ಹತಾ ಪಂದ್ಯಗಳು ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಲು ಭಾರತದ ಕುಸ್ತಿಪಟುಗಳಿಗೆ ಕೊನೆಯ ಅವಕಾಶವಾಗಿದೆ. ಪುರುಷರ ಫ್ರೀಸ್ಟೈಲ್ 65 ಕೆಜಿ ವಿಭಾಗದಲ್ಲಿ ಸುಜೀತ್ ಕಲ್ಕಲ್ ಭಾರತ ಪ್ರತಿನಿಧಿಸಲಿದ್ದಾರೆ.
ವಿನೇಶಾ ಫೋಗಟ್ (50 ಕೆಜಿ), ಅಂತಿಮ್ ಪಂಘಲ್ (53 ಕೆಜಿ), ಅಂಶು ಮಲಿಕ್ (57 ಕೆಜಿ) ಮತ್ತು ರೀತಿಕಾ ಹೂಡಾ (76 ಕೆಜಿ) ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.