ನವದೆಹಲಿ: ಭಾರತ ಕುಸ್ತಿ ಫೆಡರೇಶನ್ (ಡಬ್ಲ್ಯೂಎಫ್‌ಐ) ಸುತ್ತಲಿನ ವಿವಾದಗಳು ಕೊನೆಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ಬ್ರಿಜ್ ಭೂಷಣ್ ಶರಣ್ ಸಿಂಗ್ ಆಪ್ತ ಸಂಜಯ್ ಸಿಂಗ್ ಡಬ್ಲ್ಯೂಎಫ್‌ಐ ಚುಕ್ಕಾಣಿ ಹಿಡಿದಿರುವುದನ್ನು ವಿರೋಧಿಸಿ ಒಲಿಂಪಿಕ್ಸ್ ಪದಕ ವಿಜೇತ ಕುಸ್ತಿಪಟು ಸಾಕ್ಷಿ ಮಲಿಕ್ ಕುಸ್ತಿಗೆ ವಿದಾಯ ಘೋಷಿಸಿದ ಬೆನ್ನಲ್ಲೆ ಮತ್ತೊಬ್ಬ ಕುಸ್ತಿಪಟು ಬಜರಂಗ ಪೂನಿಯಾ ಅವರು ಪದ್ಮಶ್ರೀ ಪ್ರಶಸ್ತಿ ಮರಳಿಸಲು ನಿರ್ಧರಿಸಿದ್ದಾರೆ.
‘ನಾನು ಪದ್ಮಶ್ರೀ ಪ್ರಶಸ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮರಳಿಸುತ್ತೇನೆ. ಇದು ನನ್ನ ಹೇಳಿಕೆ’ ಎಂದು ಟೊಕಿಯೋ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಕುಸ್ತಿಪಟು ‘ಎಕ್ಸ್’ನಲ್ಲಿ ಬರೆದಿದ್ದಾರೆ.
ಸಂಜಯ್ ಸಿಂಗ್ ಆಯ್ಕೆ ವಿರೋಧಿಸಿ ಕುಸ್ತಿಪಟುಗಳಾದ ಬಜರಂಗ್, ವಿನೇಶಾ ಫೋಗಟ್ ಅವರೊಂದಿಗೆ ಗುರುವಾರ ಜಂಟಿ ಸುದ್ದಿಗೋಷ್ಠಿ ನಡೆಸಿದ ಸಾಕ್ಷಿ ಮಲಿಕ್, ಕುಸ್ತಿಗೆ ವಿದಾಯ ಘೋಷಿಸಿದ್ದರು.
ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಬಜರಂಗ್ ಪೂನಿಯಾ ಸಾಧನೆ ಪರಿಗಣಿಸಿ ಕೇಂದ್ರ ಸರ್ಕಾರ 2019ರಲ್ಲಿ ದೇಶದ ನಾಲ್ಕನೇ ಅತ್ಯುನ್ನತ ಗೌರವವಾದ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಿತ್ತು.
‘ದೇಶದ ಮಹಿಳಾ ಕುಸ್ತಿಪಟುಗಳಿಗೆ ನ್ಯಾಯ ನಿರಾಕರಿಸಲಾಗಿದೆ’ ಎಂದು ಉಲ್ಲೇಖಿಸಿ ಬಜರಂಗ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರವನ್ನು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸಂಸತ್ತಿನಲ್ಲಿ ಪ್ರಧಾನಿ ಭೇಟಿ ಮಾಡಿ ವೈಯಕ್ತಿಕವಾಗಿ ಪತ್ರ ಹಸ್ತಾಂತರಿಸಲು ಅವರು ಪ್ರಯತ್ನಿಸಿದರು. ಆದರೆ ಕರ್ತವ್ಯಪಥದಲ್ಲಿ ಪೊಲೀಸರು ತಡೆದು ವಾಪಸ್ ಕಳುಹಿಸಿದರು.
ಪತ್ರದ ಸಾರಾಂಶ: ‘ಮೋದಿ ಅವರೇ ನೀವು ಅನೇಕ ಕೆಲಸಗಳಲ್ಲಿ ನಿರತರಾಗಿರಬೇಕು. ಆದರೆ, ನಿಮ್ಮ ಗಮನವನ್ನು ದೇಶದ ಕುಸ್ತಿಪಟುಗಳತ್ತ ಸೆಳೆಯಲು ಪತ್ರ ಬರೆಯುತ್ತಿದ್ದೇನೆ. ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿ ದೇಶದ ಮಹಿಳಾ ಕುಸ್ತಿಪಟುಗಳು ಪ್ರತಿಭಟನೆ ನಡೆಸಿರುವುದು ನಿಮಗೆ ತಿಳಿದಿರಬೇಕು. ನಾನೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದೆ. ಸರ್ಕಾರವು ಕಠಿಣ ಕ್ರಮದ ಭರವಸೆ ನೀಡಿದ ನಂತರ ಪ್ರತಿಭಟನೆ ನಿಲ್ಲಿಸಲಾಯಿತು’ ಎಂದು ಹೇಳಿದ್ದಾರೆ.
‘ಆದರೆ ಮೂರು ತಿಂಗಳ ನಂತರವೂ ಬ್ರಿಜ್ ಭೂಷಣ್ ವಿರುದ್ಧ ಯಾವುದೇ ಎಫ್ಐಆರ್ ದಾಖಲಾಗಲಿಲ್ಲ. ಅವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಆಗ್ರಹಿಸಿ ಏಪ್ರಿಲ್‌ನಲ್ಲಿ ಮತ್ತೆ ಬೀದಿಗಿಳಿಯಬೇಕಾಯಿತು. ಜನವರಿಯಲ್ಲಿ 19 ದೂರುದಾರರು ಇದ್ದರು. ಆದರೆ, ಏಪ್ರಿಲ್ ವೇಳೆಗೆ ಆ ಸಂಖ್ಯೆ 7ಕ್ಕೆ ಇಳಿದಿದೆ. ಇದರರ್ಥ ಬ್ರಿಜ್ ಭೂಷಣ್ 12 ಮಹಿಳಾ ಕುಸ್ತಿಪಟುಗಳ ಮೇಲೆ ಪ್ರಭಾವ ಬೀರಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
‘ನಮ್ಮ ಪ್ರತಿಭಟನೆ 40 ದಿನಗಳು ನಡೆಯಿತು. ಆ ದಿನಗಳಲ್ಲಿ ನಮ್ಮ ಮೇಲೆ ಸಾಕಷ್ಟು ಒತ್ತಡವಿತ್ತು. ನಮ್ಮ ಪ್ರತಿಭಟನಾ ಸ್ಥಳವನ್ನು ಧ್ವಂಸಗೊಳಿಸಿ, ಮುಂದೆ ಪ್ರತಿಭಟಿಸಲು ಅವಕಾಶ ನೀಡಲಿಲ್ಲ. ಮುಂದೆ ಏನು ಮಾಡಬೇಕೆಂದು ತೋಚದೇ ನಮ್ಮ ಪದಕಗಳನ್ನು ಗಂಗಾ ನದಿಗೆ ಹಾಕಲು ಮುಂದಾದೆವು. ಆಗ ನಮ್ಮನ್ನು ರೈತ ನಾಯಕರು ಮತ್ತು ತರಬೇತುದಾರರು ತಡೆದರು. ಕೇಂದ್ರ ಕ್ರೀಡಾ ಸಚಿವರು ನ್ಯಾಯ ಕೊಡಿಸುವ ಭರವಸೆ ನೀಡಿದ ಮೇರೆಗೆ ಪ್ರತಿಭಟನೆ ನಿಲ್ಲಿಸಲಾಯಿತು‘ ಎಂದು ವಿವರಿಸಿದ್ದಾರೆ.
‘ಬ್ರಿಜ್ ಭೂಷಣ್ ಸಿಂಗ್ ಅವರ ಆಪ್ತ ಸಂಜಯ್ ಸಿಂಗ್ ಭಾರತ ಕುಸ್ತಿ ಫೆಡರೇಷನ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮತ್ತೆ ಫೆಡರೇಷನ್ ಮೇಲೆ ಬ್ರಿಜ್ ಭೂಷಣ್ ಹಿಡಿತ ಸಾಧಿಸಲಿದ್ದಾರೆ. ಸಾಕ್ಷಿ ಮಲಿಕ್ ಅವರು ಕುಸ್ತಿಗೆ ವಿದಾಯ ಘೋಷಿಸಿದ್ದಾರೆ. ಇಡೀ ರಾತ್ರಿ ಕಣ್ಣೀರು ಸುರಿಸಿದೆವು. ಏನು ಮಾಡಬೇಕು ಅಥವಾ ಎಲ್ಲಿಗೆ ಹೋಗಬೇಕೆಂದು ತಿಳಿಯಲಿಲ್ಲ. ಸರ್ಕಾರ ನನಗೆ ಪದ್ಮಶ್ರೀ, ಅರ್ಜುನ, ಖೇಲ್ ರತ್ನ ಪ್ರಶಸ್ತಿ ನೀಡಿದೆ’ ಎಂದು ಹೇಳಿದ್ದಾರೆ.
‘ ಮಹಿಳಾ ಕ್ರೀಡಾಪಟುಗಳನ್ನು ಕ್ರೀಡೆಯು ಸಬಲೀಕರಣಗೊಳಿಸಿದೆ ಮತ್ತು ಅವರ ಜೀವನ ಬದಲಾಯಿಸಿದೆ. ಆದರೆ ಪರಿಸ್ಥಿತಿ ಹೇಗಿದೆಯೆಂದರೆ ಬೇಟಿ ಬಚಾವೋ, ಬೇಟಿ ಪಢಾವೋ ರಾಯಭಾರಿಗಳಾಗಿದ್ದ ಮಹಿಳೆಯರು ಈಗ ಕ್ರೀಡೆ ತೊರೆಯುತ್ತಿದ್ದಾರೆ. ಪ್ರಶಸ್ತಿ ವಿಜೇತ ಕುಸ್ತಿಪಟುಗಳಾದ ನಾವು ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. ಮಹಿಳಾ ಕುಸ್ತಿಪಟುಗಳನ್ನು ಅವಮಾನಿಸುವಾಗ ನಾನು ಪದ್ಮಶ್ರೀ ಪ್ರಶಸ್ತಿ ವಿಜೇತನಾಗಿ ನನ್ನ ಜೀವನ ನಡೆಸಲು ಸಾಧ್ಯವಿಲ್ಲ. ಆದ್ದರಿಂದ ನಾನು ಈ ಪ್ರಶಸ್ತಿಯನ್ನು ನಿಮಗೆ ಹಿಂದಿರುಗಿಸುತ್ತೇನೆ’ ಎಂದು ಬಜರಂಗ್ ಹೇಳಿದ್ದಾರೆ.
ಬಜರಂಗ್ ವೈಯಕ್ತಿಕ ನಿರ್ಧಾರ: ಕ್ರೀಡಾ ಸಚಿವಾಲಯ
ನವದೆಹಲಿ (ಪಿಟಿಐ): ‘ಭಾರತ ಕುಸ್ತಿ ಫೆಡರೇಷನ್ ಅಧ್ಯಕ್ಷ ಸಂಜಯ್ ಸಿಂಗ್ ಆಯ್ಕೆಯನ್ನು ವಿರೋಧಿಸಿ ತಮ್ಮ ಪದ್ಮಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸುವ ಬಜರಂಗ್ ಪೂನಿಯಾ ಅವರ ನಿರ್ಧಾರವು ವೈಯಕ್ತಿಕವಾಗಿದೆ. ಆದರೆ ತಮ್ಮ ನಿರ್ಧಾರ ಮರುಪರಿಶೀಲಿಸುವಂತೆ ಮನವೊಲಿಸಲು ಪ್ರಯತ್ನಿಸಲಾಗುವುದು‘ ಎಂದು ಕ್ರೀಡಾ ಸಚಿವಾಲಯ ಶುಕ್ರವಾರ ಹೇಳಿದೆ.
‘ಪದ್ಮಶ್ರೀ ಪ್ರಶಸ್ತಿಗೆ ಮರಳಿಸುವುದು ಬಜರಂಗ್ ಪೂನಿಯಾ ಅವರ ವೈಯಕ್ತಿಕ ನಿರ್ಧಾರ. ಡಬ್ಲ್ಯುಎಫ್ಐ ಚುನಾವಣೆಗಳು ನ್ಯಾಯಸಮ್ಮತ ಮತ್ತು ಪ್ರಜಾಸತ್ತಾತ್ಮಕ ರೀತಿಯಲ್ಲಿ ನಡೆದಿವೆ’ ಎಂದು ಸಚಿವಾಲಯದ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
‘ಪದ್ಮಶ್ರೀ ಹಿಂದಿರುಗಿಸುವ ನಿರ್ಧಾರ ಹಿಂತೆಗೆದುಕೊಳ್ಳುವಂತೆ ಬಜರಂಗ್ ಅವರ ಮನವೊಲಿಸಲು ಇನ್ನೂ ಪ್ರಯತ್ನಿಸುತ್ತೇವೆ’ ಎಂದು ಅವರು ಹೇಳಿದ್ದಾರೆ.
ಅಮಾನತು ಹಿಂಪಡೆಯಲು ಯುಡಬ್ಲ್ಯೂಡಬ್ಲ್ಯೂಗೆ ಪತ್ರ
ನವದೆಹಲಿ (ಪಿಟಿಐ): ತನಗೆ ವಿಧಿಸಿರುವ ನಿಷೇಧ ತೆರವು ಮಾಡುವಂತೆ ಶುಕ್ರವಾರ ಭಾರತ ಕುಸ್ತಿ ಫೆಡರೇಷನ್ ನೂತನ ಕಾರ್ಯಕಾರಿ ಸಮಿತಿಯು ವಿಶ್ವ ಕುಸ್ತಿ ಸಂಸ್ಥೆ (ಯುಡಬ್ಲ್ಯೂಡಬ್ಲ್ಯೂ)ಗೆ ಮನವಿ ಮಾಡಿದೆ. ಜನವರಿ 28 ರಿಂದ ಮಹಾರಾಷ್ಟ್ರದ ಅಹ್ಮದ್ ನಗರದಲ್ಲಿ ಸೀನಿಯರ್ ರಾಷ್ಟ್ರೀಯ ಚಾಂಪಿಯನ್‌ಷಿಪ್ ಆಯೋಜಿಸುವುದಾಗಿ ಡಬ್ಲ್ಯುಎಫ್ಐ ಘೋಷಿಸಿದೆ.
‘ಸ್ಪರ್ಧೆಗಳನ್ನು ಪುನರಾರಂಭಿಸುವುದು ಹೊಸ ಸಮಿತಿಯ ಆದ್ಯತೆಯಾಗಿದೆ. ಚುನಾವಣೆ ಪ್ರಜಾಸತ್ತಾತ್ಮಕವಾಗಿ ನಡೆದಿರುವುದರಿಂದ ಡಬ್ಲ್ಯುಎಫ್ಐ ಮೇಲೆ ವಿಧಿಸಿರುವ ನಿಷೇಧ ತೆರವು ಮಾಡುವಂತೆ ಕೋರಿ ವಿಶ್ವ ಕುಸ್ತಿ ಸಂಸ್ಥೆಗೆ ಪತ್ರ ಬರೆದಿದ್ದೇವೆ. ಅಮಾನತು ಶೀಘ್ರದಲ್ಲೇ ಅಂತ್ಯಗೊಳ್ಳಲಿದೆ ಎಂಬ ಖಾತ್ರಿಯಿದೆ’ ಎಂದು ಫೆಡರೇಷನ್ ನೂತನ ಅಧ್ಯಕ್ಷ ಸಂಜಯ್ ಸಿಂಗ್ ಹೇಳಿದ್ದಾರೆ.
‘ಜೂನಿಯರ್ ಮತ್ತು ಸೀನಿಯರ್ ಕುಸ್ತಿಪಟುಗಳು ಕಳೆದ ಕೆಲವು ತಿಂಗಳುಗಳಲ್ಲಿ ಸ್ಪರ್ಧೆಗಳು ಇಲ್ಲದೆ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಸ್ಪರ್ಧೆಗಳನ್ನು ಪುನರಾರಂಭಿಸುವುದು ಆದ್ಯತೆಯಾಗಿದೆ. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಸೀನಿಯರ್ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗೆ ಮಹಾರಾಷ್ಟ್ರ ಆತಿಥ್ಯ ವಹಿಸಲಿದೆ. ರಾಜ್ಯಗಳು ಸಹ ಆಯ್ಕೆ ಟ್ರಯಲ್ಸ್ ಘೋಷಿಸಿವೆ’ ಸಿಂಗ್ ಹೇಳಿದ್ದಾರೆ.
ನಿಗದಿಪಡಿಸಿದ ಗಡುವಿನೊಂದಿಗೆ ಚುನಾವಣೆ ನಡೆಸಲು ವಿಫಲವಾದ ಕಾರಣ ಡಬ್ಲ್ಯುಎಫ್ಐ ಅಮಾನತು ಆಗಿತ್ತು. ಅದರಿಂದಾಗಿ 2023ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಕುಸ್ತಿಪಟುಗಳು ತಟಸ್ಥ ಕ್ರೀಡಾಪಟುಗಳಾಗಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.