ನವದೆಹಲಿ: ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟಕ್ಕೆ ಕೇವಲ 7 ತಿಂಗಳು ಬಾಕಿಯಿದ್ದು, ನಾನಾ ಕಾರಣಗಳಿಂದ ನಿಂತು ಹೋಗಿರುವ ಕುಸ್ತಿ ಚಟುವಟಿಕೆಗಳನ್ನು ಮರು ಪ್ರಾರಂಭಿಸುವಂತೆ ಒಲಿಂಪಿಕ್ ಪ್ರಶಸ್ತಿ ವಿಜೇತ ಕುಸ್ತಿಪಟು ಬಜರಂಗ್ ಪುನಿಯಾ ಕ್ರೀಡಾ ಸಚಿವರನ್ನು ಒತ್ತಾಯಿಸಿದ್ದಾರೆ.
ಈ ಕುರಿತಂತೆ ಎಕ್ಸ್ ನಲ್ಲಿ ಬರೆದುಕೊಂಡಿರುವ ಪುನಿಯಾ, ‘ಒಲಿಂಪಿಕ್ ಕ್ರೀಡಾಕೂಟವನ್ನು ಯಾರು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
‘ಪ್ಯಾರಿಸ್ ಒಲಿಂಪಿಕ್ಸ್‌ಗೆ ಏಳು ತಿಂಗಳಷ್ಟೇ ಬಾಕಿಯಿದೆ. ಯಾರು ಇದನ್ನು ಗಂಭೀರವಾಗಿ ತೆಗೆದುಕೊಂಡಂತೆ ಕಾಣುತ್ತಿಲ್ಲ. ಹಿಂದಿನ ನಾಲ್ಕು ಒಲಿಂಪಿಕ್ ಕೀಡಾಕೂಟಗಳಲ್ಲಿಯೂ ಕುಸ್ತಿಪಟುಗಳು ಪದಕ ಗೆದ್ದಿದ್ದಾರೆ’ ಎಂದರು.
‘ಫೆಡರೇಷನ್ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ವಿರುದ್ಧ ಕುಸ್ತಿಪಟುಗಳು ಪ್ರತಿಭಟನೆಗಳಿದ್ದರಿಂದ ಕಳೆದ ಹಲವು ತಿಂಗಳಿನಿಂದ ಕುಸ್ತಿ ಚಟುವಟಿಕೆಗಳು ನಿಂತು ಹೋಗಿವೆ. ಅದಾದ ಬಳಿಕ ನಿಯಮ ಉಲ್ಲಂಘನೆ ಕಾರಣ ನೀಡಿ ಚುನಾಯಿತ ಕುಸ್ತಿ ಫೆಡರೇಷನ್‌ನ ಹೊಸ ಆಡಳಿತ ಸಮಿತಿಯನ್ನು ಸಚಿವಾಲಯ ಅಮಾನತುಗೊಳಿಸಿದೆ’ ಎಂದರು.
‘ಕುಸ್ತಿಪಟುಗಳ ಭವಿಷ್ಯಕ್ಕಾಗಿ ಎಲ್ಲ ಕುಸ್ತಿ ಚಟುವಟಿಕೆಗಳನ್ನು ಸಾಧ್ಯವಾದಷ್ಟು ಬೇಗನೆ ಪ್ರಾರಂಭಿಸುವಂತೆ ಕ್ರೀಡಾ ಸಚಿವಾಲಯವನ್ನು ವಿನಂತಿಸುತ್ತೇನೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.