ADVERTISEMENT

WFI ಚುನಾವಣೆ: ಬ್ರಿಜ್‌ ಭೂಷನ್‌ ಆಪ್ತನ ಸ್ಪರ್ಧೆಗೆ ಬಜರಂಗ್‌, ಸಾಕ್ಷಿ ಆಕ್ಷೇಪ

ಪಿಟಿಐ
Published 11 ಡಿಸೆಂಬರ್ 2023, 15:52 IST
Last Updated 11 ಡಿಸೆಂಬರ್ 2023, 15:52 IST
ಬಜರಂಗ್‌ ಪೂನಿಯಾ ಮತ್ತು ಸಾಕ್ಷಿ ಮಲಿಕ್
ಬಜರಂಗ್‌ ಪೂನಿಯಾ ಮತ್ತು ಸಾಕ್ಷಿ ಮಲಿಕ್   

ನವದೆಹಲಿ: ಭಾರತ ಕುಸ್ತಿ ಫೆಡರೇಷನ್‌ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಅವರ ಆಪ್ತರಾದ ಸಂಜಯ್ ಸಿಂಗ್ ಅವರಿಗೆ ಸ್ಪರ್ಧಿಸಲು ಅವಕಾಶವಾಗದಂತೆ ನೋಡಿಕೊಳ್ಳಬೇಕು ಎಂದು ಒಲಿಂಪಿಕ್ಸ್‌ ಪದಕ ವಿಜೇತ ಕುಸ್ತಿಪಟುಗಳಾದ ಬಜರಂಗ್‌ ಪೂನಿಯಾ ಮತ್ತು ಸಾಕ್ಷಿ ಮಲಿಕ್‌ ಅವರು ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಅವರಿಗೆ ಮನವಿ ಮಾಡಿದ್ದಾರೆ.

ಇಬ್ಬರು ಕುಸ್ತಿಪಟುಗಳು, ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಅವರನ್ನು ಸೋಮವಾರ ಈ ಸಂಬಂಧ ಭೇಟಿ ಮಾಡಿದರು. ‌

ಭಾರತೀಯ ಕುಸ್ತಿ ಫೆಡರೇಷನ್‌ಗೆ (ಡಬ್ಲ್ಯುಎಫ್‌ಐ) ಇದೇ ತಿಂಗಳ 21ರಂದು ಬಹು ನಿರೀಕ್ಷಿತ ಚುನಾವಣೆ ನಡೆಯಲಿದ್ದು, ಅದೇ ದಿನ ಫಲಿತಾಂಶ ಹೊರಬೀಳಲಿದೆ. ಬ್ರಿಜ್ ಭೂಷಣ್ ಅವರಿಗೆ ನಿಷ್ಠರಾಗಿರುವ ಸಂಜಯ್ ಸಿಂಗ್ ಮತ್ತು 2010ರ ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತೆ ಅನಿತಾ ಶೆರಾಣ್ ಅಧ್ಯಕ್ಷ ಸ್ಥಾನದ ಸ್ಪರ್ಧೆಯಲ್ಲಿದ್ದಾರೆ.

ಬ್ರಿಜ್‌ಭೂಷಣ್, ಏಳು ಮಂದಿ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಅವರ ವಿರುದ್ಧ ನವದೆಹಲಿಯಲ್ಲಿ ನಡೆದ ಧರಣಿಯ ನೇತೃತ್ವವನ್ನು ಸಾಕ್ಷಿ, ಬಜರಂಗ್ ಮತ್ತು ವಿನೇಶಾ ಫೋಗಟ್‌ ವಹಿಸಿದ್ದರು.

‘ಬ್ರಿಜ್‌ಭೂಷಣ್ ಅವರಿಗೆ ಸಂಬಂಧಿಸಿದವರು ಚುನಾವಣೆಯಲ್ಲಿ ಸ್ಪರ್ಧಿಸದಂತೆ ಸರ್ಕಾರ ಕ್ರಮ ವಹಿಸಲಿದೆ ಎಂದು ನಮಗೆ ಭರವಸೆ ನೀಡಿದ್ದ ನಂತರ ನಾವು ಧರಣಿ ವಾಪಸು ಪಡೆದಿದ್ದೆವು’ ಎಂದು ಬಜರಂಗ್ ನೆನಪಿಸಿದರು.

‘ಕ್ರೀಡಾಪಟುಗಳ ದುಃಸ್ಥಿತಿಯ ಬಗ್ಗೆ ಅರಿತಿರುವ ಅನಿತಾ ಶೆರಾಣ್ ಅವರ ಸ್ಪರ್ಧೆಗೆ ನಮ್ಮ ತಕರಾರಿಲ್ಲ. ಡಬ್ಲ್ಯುಎಫ್‌ಐನ ಜವಾಬ್ದಾರಿಯನ್ನು ಮಾಜಿ ಕುಸ್ತಿಪಟುವೊಬ್ಬರು ವಹಿಸಬೇಕೆಂದು ನಾವು ಬಯಸುತ್ತೇವೆ’ ಎಂದು ತಿಳಿಸಿದರು. ‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.