ADVERTISEMENT

ಬಜರಂಗ್‌, ವಿನೇಶ್‌ಗೆ ಟ್ರಯಲ್ಸ್ ರಿಯಾಯಿತಿ | ಹೋರಾಟದಲ್ಲಿ ಬಿರುಕು: ಸಾಕ್ಷಿ ಮಲಿಕ್

ಪಿಟಿಐ
Published 22 ಅಕ್ಟೋಬರ್ 2024, 0:30 IST
Last Updated 22 ಅಕ್ಟೋಬರ್ 2024, 0:30 IST
<div class="paragraphs"><p>ಸಾಕ್ಷಿ ಮಲಿಕ್‌</p></div>

ಸಾಕ್ಷಿ ಮಲಿಕ್‌

   

ಪಿಟಿಐ ಚಿತ್ರ

ನವದೆಹಲಿ: ಕಳೆದ ವರ್ಷ ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಿಂದ ವಿನಾಯಿತಿ ನೀಡುವ ಪ್ರಸ್ತಾವಕ್ಕೆ ವಿನೇಶ್ ಫೋಗಟ್ ಮತ್ತು ಬಜರಂಗ್ ಪೂನಿಯಾ ಅವರು ಒಪ್ಪಿಕೊಂಡಿದ್ದರಿಂದ ಬ್ರಿಜ್‌ ಭೂಷಣ್ ಸಿಂಗ್ ವಿರುದ್ಧ ನಡೆಯುತ್ತಿದ್ದ ಧರಣಿ, ಹೋರಾಟದ ವರ್ಚಸ್ಸು ಕಳೆಗುಂದಿತು ಎಂದು ಒಲಿಂಪಿಕ್‌ ಪದಕ ವಿಜೇತೆ ಕುಸ್ತಿಪಟು ಸಾಕ್ಷಿ ಮಲಿಕ್ ಹೇಳಿದ್ದಾರೆ.

ADVERTISEMENT

ಇತ್ತೀಚೆಗೆ ಬಿಡುಗಡೆಗೊಂಡ ತಮ್ಮ ಕೃತಿ ‘ವಿಟ್ನೆಸ್‌’ನಲ್ಲಿ ಸಾಕ್ಷಿ ಹೀಗೆ ಬರೆದಿದ್ದಾರೆ.

ಏಳು ಮಂದಿ ಮಹಿಳಾ ಪೈಲ್ವಾನರಿಗೆ ಭಾರತ ಕುಸ್ತಿ ಫೆಡರೇಷನ್‌ನ ಅಂದಿನ ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್ ಲೈಂಗಿಕ ಕಿರುಕುಳ ನೀಡಿದ್ದರೆಂದು ದೂರಿ ಅವರ ವಿರುದ್ಧ ಜಂತರ್‌ಮಂತರ್‌ನಲ್ಲಿ ನಡೆದ ಧರಣಿಯಲ್ಲಿ ಬಜರಂಗ್, ವಿನೇಶ್ ಮತ್ತು ಸಾಕ್ಷಿ ಪ್ರಮುಖವಾಗಿ ಕಾಣಿಸಿಕೊಂಡಿದ್ದರು.

‘ಬಜರಂಗ್‌ ಮತ್ತು ವಿನೇಶ್ ಅವರಿಗೆ ಆಪ್ತರಾದ ಕೆಲವರು ಈ (ವಿನಾಯಿತಿಯ) ಪ್ರಲೋಭನೆಯನ್ನು ಅವರ ತಲೆಗೆ ತುಂಬಿದ ಪರಿಣಾಮ ಹೋರಾಟದಲ್ಲಿ ಬಿರುಕುಗಳು ಕಾಣಿಸಿಕೊಂಡವು’ ಎಂದು ಸಾಕ್ಷಿ ಹೇಳಿದ್ದಾರೆ.

ಬ್ರಿಜ್‌ಭೂಷಣ್ ವಿರುದ್ಧ ಮಾಡಲಾಗಿರುವ ಲೈಂಗಿಕ ಕಿರುಕುಳದ ಪ್ರಕರಣ ಇನ್ನೂ ದೆಹಲಿ ಹೈಕೋರ್ಟ್‌ನಲ್ಲಿ ವಿಚಾರಣೆಯಲ್ಲಿದೆ.‌

ಧರಣಿಯ ಮಧ್ಯೆಯೇ ಕುಸ್ತಿ ಫೆಡರೇಷನ್ ವ್ಯವಹಾರ ನೋಡಿಕೊಳ್ಳಲು ನೇಮಕವಾದ ಅಡ್‌ಹಾಕ್‌ ಸಮಿತಿಯು 2023ರ ಏಷ್ಯನ್ ಕ್ರೀಡೆಗಳ ಟ್ರಯಲ್ಸ್‌ನಲ್ಲಿ ಭಾಗವಹಿಸುವುದರಿಂದ ಇವರಿಬ್ಬರಿಗೆ ವಿನಾಯಿತಿ ನೀಡಿತ್ತು. ಆದರೆ ಸಾಕ್ಷಿ ವಿನಾಯಿತಿ ಪಡೆಯಲು ಮುಂದಾಗಿರಲಿಲ್ಲ. ಆದರೆ ಹಾಂಗ್‌ಝೌ ಕ್ರೀಡೆಗಳಿಗೆ ಮೊದಲು ವಿನೇಶ್‌ ಗಾಯಾಳಾದರು. ಸಾಕ್ಷಿ ಭಾಗವಹಿಸಲಿಲ್ಲ. ಬಜರಂಗ್ ಪದಕ ಗೆಲ್ಲಲಾಗಲಿಲ್ಲ.

‘ಸ್ವಹಿತಾಸಕ್ತಿ ಮತ್ತೊಮ್ಮೆ ಕೆಲಸ ಮಾಡಿತು. ಬಜರಂಗ್ ಮತ್ತು ವಿನೇಶ್ ಅವರಿಗೆ ಆಪ್ತರಾಗಿದ್ದವರು ಅವರಿಗೆ ಪ್ರಲೋಭನೆ ಒಡ್ಡಿದರು. ಆದರೆ ಈ ವಿನಾಯಿತಿ ಪಡೆದಿದ್ದರಿಂದ ಒಳ್ಳೆಯದೇನೂ ಆಗಲಿಲ್ಲ. ಅವರ ನಿರ್ಧಾರವು, ನಮ್ಮ ಹೋರಾಟದ ವರ್ಚಸ್ಸಿಗೆ ಕುಂದುಂಟುಮಾಡಿತು. ನಾವು ಸ್ವಹಿತಾಸಕ್ತಿ ಮುಂದಿಟ್ಟುಕೊಂಡು ಹೋರಾಟ ನಡೆಸಿದೆವು ಎಂದು ಅನೇಕ ಬೆಂಬಲಿಗರು ಯೋಚಿಸುವಂಥ ಪರಿಸ್ಥಿತಿ ತಂದುಕೊಂಡೆವು’ ಎಂದು 32 ವರ್ಷ ವಯಸ್ಸಿನ ಸಾಕ್ಷಿ ಕೃತಿಯಲ್ಲಿ ವಿವರಿಸಿದ್ದಾರೆ. ಈ ಕೃತಿಗೆ ಪತ್ರಕರ್ತ ಜೊನಾಥನ್ ಸೆಲವರಾಜ್ ಸಹ ಲೇಖಕರಾಗಿದ್ದಾರೆ.

ಕಳೆದ ವರ್ಷದ ಮೇ 28ರಂದು ಹೊಸ ಸಂಸತ್‌ ಕಟ್ಟಡದ ಬಳಿ ಪ್ರತಿಭಟನಾಕಾರರ ಮೆರವಣಿಗೆಯನ್ನು ಪೊಲೀಸರು ತಡೆಯುವುದರೊಡನೆ ಈ ಪ್ರತಿಭಟನೆ ಅಂತ್ಯಗೊಂಡಿತ್ತು.

ವಿನೇಶ್ ಮತ್ತು ಬಜರಂಗ್‌ ಹರಿಯಾಣ ವಿಧಾನಸಭೆ ಚುನಾವಣೆ ಮೊದಲು ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. ಜುಲಾನಾ ಕ್ಷೇತ್ರದಿಂದ ವಿನೇಶ್ ವಿಧಾನಸಭೆ ಚುನಾವಣೆಯಲ್ಲಿ ಗೆದ್ದರು. ಬಜರಂಗ್ ಅವರನ್ನು ಪಕ್ಷದ ರಾಷ್ಟ್ರೀಯ ರೈತ ಘಟಕದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು.

‘ಬಾಲ್ಯದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೆ’

‘ಬಾಲ್ಯದಲ್ಲಿ ನಾನು ಮನೆಪಾಠದ ಶಿಕ್ಷಕನಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೆ. ಆದರೆ ಪ್ರತಿಭಟಿಸದೇ ಮೌನವಾಗಿ ಸಹಿಸಿಕೊಂಡಿದ್ದೆ’ ಎಂದು ಅವರು ಹೇಳಿಕೊಂಡಿದ್ದಾರೆ.

‘ಇದನ್ನು ನಾನು ಕುಟುಂಬದ ಜೊತೆ ಹೇಳಿಕೊಳ್ಳಲಾಗಲಿಲ್ಲ. ಅದು ನನ್ನ ತಪ್ಪು ಎಂದು ಭಾವನೆ ಮೂಡಿದ್ದರಿಂದ ಸುಮ್ಮನಾದೆ. ನನ್ನ ಶಾಲಾ ದಿನಗಳಲ್ಲಿ ಮನೆಪಾಠ ಹೇಳಿಕೊಡುತ್ತಿದ್ದ ಶಿಕ್ಷಕ ದೈಹಿಕ ಶೋಷಣೆ ಮಾಡುತ್ತಿದ್ದ. ಹೊತ್ತಲ್ಲದ ಹೊತ್ತಿನಲ್ಲಿ ಪಾಠಕ್ಕೆ ಕರೆಯುತ್ತಿದ್ದ. ಅನುಚಿತವಾಗಿ ಅಂಗಸ್ಪರ್ಷ ಮಾಡಲು ಯತ್ನಿಸುತ್ತಿದ್ದ. ನನಗೆ ಟ್ಯೂಷನ್‌ಗೆ ಹೋಗಲು ಹೆದರಿಕೆಯಾಗುತಿತ್ತು. ಆದರೆ ತಾಯಿಗೆ ನಾನು ಆ ಬಗ್ಗೆ ಎಂದೂ ಹೇಳಲಿಲ್ಲ’ ಎಂದಿದ್ದಾರೆ ಸಾಕ್ಷಿ.

‘ನಾನು ಆರಂಭದ ದಿನಗಳಲ್ಲಿ ಸೆಣಸಾಟಕ್ಕೆ ಇಳಿಯಲು ಹಿಂಜರಿಯುತ್ತಿದ್ದೆ. ವೃತ್ತಿ ಜೀವನದ ಆರಂಭದ ವೇಳೆ ಅಖಾಡದಿಂದ ಓಡಿಹೋಗೋಣ ಎನಿಸುತಿತ್ತು’ ಎಂದಿದ್ದಾರೆ. ‘ವೃತ್ತಿ ಜೀವನದಲ್ಲಿ ಖುಷಿಕೊಡುವಂಥ ನೈಜ ಹೋರಾಟವನ್ನು ನಾನು ಎದುರಿಸಲೇ ಇಲ್ಲ’ ಎಂದೂ ಹೇಳಿದ್ದಾರೆ.

‘ಈಗ ಬಿಜೆಪಿಯಲ್ಲಿರುವ ತಮ್ಮ ಸಂಬಂಧಿ ಬಬಿತಾ ಫೋಗಟ್‌ಗೆ ಸ್ವಾರ್ಥವಿತ್ತು. ಅವರು ನಮ್ಮ ಹೋರಾಟಕ್ಕೆ ನೀಡಿದ ಬೆಂಬಲ ತೋರಿಕೆಯದ್ದಾಗಿತ್ತು’  ಎಂದಿದ್ದಾರೆ. ಇದಕ್ಕೆ ಸಂಬಂಧಿಸಿ ಪ್ರತಿಕ್ರಿಯೆಗೆ ಬಬಿತಾ ಲಭ್ಯರಾಗಲಿಲ್ಲ.

ತಮಗೆ ಬಂದ ಬಹುಮಾನದ ಹೆಚ್ಚಿನ ಹಣವನ್ನು ಪೋಷಕರು ತೆಗೆದುಕೊಂಡು ಹೋದರು ಎಂದು ಸಾಕ್ಷಿ ಹೇಳಿಕೊಂಡಿದ್ದಾರೆ. ‘ನನ್ನ ಮತ್ತು ಸತ್ಯವ್ರಥ ಕಾದಿಯಾನ್ (ಕುಸ್ತಿ ಪಟು) ಸಂಬಂಧಕ್ಕೆ ನನ್ನ ಕುಟುಂಬ ವಿರೋಧ ವ್ಯಕ್ತಪಡಿಸಿತ್ತು. ಆದರೆ ನಾನು ನಿಲುವು ಬದಲಿಸಲಿಲ್ಲ’ ಎಂದು ಅವರು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.