ADVERTISEMENT

ಬೆಂಗಳೂರು ಚಳಿಗಾಲದ ಡರ್ಬಿ ರೇಸ್‌ ಇಂದು: ಟ್ರೆವಾಲಿಯಸ್‌ ಗೆಲ್ಲುವ ನಿರೀಕ್ಷೆ

ಬೆಂಗಳೂರು ಚಳಿಗಾಲದ ಡರ್ಬಿ ರೇಸ್‌ ಇಂದು; ಕಣದಲ್ಲಿ 11 ಕುದುರೆಗಳು

ರವಿಕುಮಾರ್
Published 25 ಜನವರಿ 2023, 20:09 IST
Last Updated 25 ಜನವರಿ 2023, 20:09 IST
ಅಶ್ವ ಮಗಧೀರ
ಅಶ್ವ ಮಗಧೀರ   

ಬೆಂಗಳೂರು: ರೇಸ್‌ ಪ್ರಿಯರ ಕುತೂಹಲಕ್ಕೆ ಕಾರಣವಾಗಿರುವ ಪ್ರತಿಷ್ಠಿತ ಚಳಿಗಾಲದ ಬೆಂಗಳೂರು ಡರ್ಬಿ ರೇಸ್‌ ಗುರುವಾರ ಸಂಜೆ 4.30ಕ್ಕೆ ನಡೆಯಲಿದೆ.

ಬೆಂಗಳೂರು ಟರ್ಫ್‌ ಕ್ಲಬ್‌ನಲ್ಲಿ ನಡೆಯುವ ಡರ್ಬಿ ರೇಸ್‌ನಲ್ಲಿ 9 ಗಂಡು ಮತ್ತು 2 ಹೆಣ್ಣು ಕುದುರೆಗಳು ಸ್ಪರ್ಧೆಯಲ್ಲಿವೆ.

ಪ್ರಮುಖ ಕುದುರೆಗಳಾದ ಮೈಸೂರು ಡರ್ಬಿ ವಿಜೇತ ಒನ್ಸ್‌ ಯು ಗೋ ಬ್ಲ್ಯಾಕ್‌, ಬೆಂಗಳೂರು ಓಕ್ಸ್‌ ವಿಜೇತ ಮಿರ್ರಾ ಮತ್ತು ಚೆನ್ನೈ ಡರ್ಬಿಯಲ್ಲಿ ಎರಡನೇ ಸ್ಥಾನ ಪಡೆದಿರುವ ಶ್ಯಾಮ್‌ರಾಕ್‌ ಅನುಪಸ್ಥಿತಿಯಲ್ಲಿ ಡರ್ಬಿ ನಡೆಯಲಿದೆ. ಕಣದಲ್ಲಿರುವ 11 ಕುದುರೆಗಳನ್ನು ‘ಸಾಮಾನ್ಯ ದರ್ಜೆಯ’ ಕುದುರೆಗಳೆಂದು ಭಾವಿಸಲಾಗಿದೆ.

ADVERTISEMENT

ಕೋಲ್ಕತ್ತ ಡರ್ಬಿ ರೇಸ್‌ನಲ್ಲಿ ‘ಸಕ್ಸಸ್‌’ ನಂತಹ ನುರಿತ ಕುದುರೆಗೆ ಕೇವಲ ಅರ್ಧ ಲೆಂತ್‌ ಅಂತರದಲ್ಲಿ ಸೋತಿರುವ ಟ್ರೆವಾಲಿಯಸ್‌ ಕುದುರೆ ಇಂದಿನ ಡರ್ಬಿ ಗೆಲ್ಲುವ ಫೇವರಿಟ್‌ ಎನಿಸಿಕೊಂಡಿದೆ.

ಜೇಮ್ಸ್‌ ಮೆಕ್ ಆನ್‌ ಅವರಿಂದ ತರಬೇತಿ ಪಡೆದಿರುವ ಟ್ರೆವಾಲಿಯಸ್‌ ಕುದುರೆಗೆ ಶ್ರೀನಾಥ್‌ ಅವರು ಜಾಕಿ ಆಗಿದ್ದಾರೆ. ಹೈದರಾಬಾದ್‌ ಡರ್ಬಿ ಮತ್ತು ಚೆನ್ನೈ 2000 ಗಿನ್ನೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಅಶ್ವಮಗಧೀರ ಕುದುರೆಯು, ಟ್ರೆವಾಲಿಯಸ್‌ಗೆ ಪ್ರಬಲ ಪೈಪೋಟಿ ನೀಡುವ ನಿರೀಕ್ಷೆಯಿದೆ.

ಅಶ್ವಮಗಧೀರ ಕುದುರೆಯನ್ನು ದೇಶದ ಪ್ರಮುಖ ಜಾಕಿಗಳಲ್ಲಿ ಒಬ್ಬರಾಗಿರುವ ಸೂರಜ್ ನರೇಡು ಅವರು ಓಡಿಸಲಿದ್ದಾರೆ.

ಕೊನೆಯಲ್ಲಿ ಪ್ರವೇಶ ಪಡೆದಿರುವ ಲಾ ರೀನ ಕೂಡಾ ಕಣದಲ್ಲಿರುವ ಇನ್ನೊಂದು ಪ್ರಮುಖ ಸ್ಪರ್ಧಿ. ಟ್ರಾಂಕ್ವಿಲೊ ಮತ್ತು ಸ್ಪ್ಲೆಂಡಿಡೊ ಕೂಡಾ ಉತ್ತಮ ಹೋರಾಟದ ಸಾಮರ್ಥ್ಯ ಹೊಂದಿವೆ. ವಿಕ್ಟೋರಿಯಾ ಪಂಚ್‌ ಕೂಡಾ ಈ ರೇಸ್‌ಗೆ ಕೊನೆಯದಾಗಿ ಪ್ರವೇಶ ಪಡೆದಿದೆ.

‘ಈಗಾಗಲೇ ಚಳಿಗಾಲದ ಕ್ಲಾಸಿಕ್‌ ರೇಸ್‌ಗಳಾದ 1000 ಗಿನ್ನೀಸ್‌, 2000 ಗಿನ್ನೀಸ್‌ ಮತ್ತು ಬೆಂಗಳೂರು ಓಕ್ಸ್‌ ರೇಸ್‌ಗಳನ್ನು ಪ್ರಾಯೋಜಿಸಿರುವ ವೂಲ್ಫ್‌ 777 ಕ್ರೀಡಾ ಸಂಸ್ಥೆಯು ಚಳಿಗಾಲದ ಡರ್ಬಿ ಪ್ರಾಯೋಜಿಸಲು ಮುಂದೆ ಬಂದಿರುವುದು ಸಂತಸದ ವಿಷಯ. ಸಂಸ್ಥೆಯಿಂದ ಮುಂದಿನ ದಿನಗಳಲ್ಲೂ ಪ್ರಾಯೋಜಕತ್ವ ನಿರೀಕ್ಷಿಸುತ್ತೇವೆ’ ಎಂದು ಟರ್ಫ್‌ ಕ್ಲಬ್‌ ಅಧ್ಯಕ್ಷ ಹಾಗೂ ಹಿರಿಯ ಸ್ಟೀವರ್ಡ್‌ ಶಿವಕುಮಾರ್‌ ಖೇಣಿ ತಿಳಿಸಿದ್ದಾರೆ.

2,400 ಮೀ. ದೂರದ ಓಟವನ್ನು ಕಣ್ತುಂಬಿಕೊಳ್ಳಲು ರೇಸ್‌ಪ್ರಿಯರು ಕಾತರರಾಗಿದ್ದಾರೆ. ಕೋವಿಡ್‌ ಬಳಿಕ ನಡೆದಿದ್ದ ಬೆಂಗಳೂರು ಬೇಸಿಗೆ ಡರ್ಬಿಯನ್ನು ಸಾವಿರಾರು ರೇಸ್‌ ಪ್ರಿಯರು ಕಣ್ತುಂಬಿಕೊಂಡಿದ್ದರು.

₹ 1.49 ಕೋಟಿ ಬಹುಮಾನ ಮೊತ್ತ

ಈ ಬಾರಿಯ ಡರ್ಬಿರೇಸ್‌ ಸುಮಾರು ₹ 1.49 ಕೋಟಿ ಬಹುಮಾನ ಮೊತ್ತ ಒಳಗೊಂಡಿದೆ. ಗೆಲ್ಲುವ ಕುದುರೆಗೆ ₹ 2 ಲಕ್ಷ ಮೌಲ್ಯದ ಟ್ರೋಫಿ ಹಾಗೂ ಮೊದಲ ಬಹುಮಾನ ₹ 73.25 ಲಕ್ಷ ದೊರೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.