ಕಲಬುರಗಿ: ಬೆಳೆಯುವ ಸಿರಿ ಮೊಳಕೆಯಲ್ಲಿ ಕಾಣು ಎಂಬಂತೆ ನಗರದ ಬಸವಪ್ರಸಾದ ಜಗದೀಶ ಪಾಟೀಲ ಈಜುಸ್ಪರ್ಧೆಗಳಲ್ಲಿ ಮಿಂಚುತ್ತಿದ್ದಾರೆ. ಪ್ರಮುಖ ಟೂರ್ನಿಗಳಲ್ಲಿ ದೇಶವನ್ನು ಪ್ರತಿನಿಧಿಸಿ ಈಜುಕೊಳದಲ್ಲಿ ‘ಚಿನ್ನ’ ಅರಸುವ ಕನಸು ಕಾಣುತ್ತಿದ್ದಾರೆ.
ನಗರದ ಶರಣಬಸವೇಶ್ವರ ಪಬ್ಲಿಕ್ ಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿರುವ ಬಸವಪ್ರಸಾದ ನಗರದ ಜಗದೀಶ ಹಾಗೂ ಮಹಾದೇವಿ ಅವರ ಪುತ್ರ. ವ್ಯಾಪಾರಿ ಆಗಿರುವ ಜಗದೀಶ ಹಾಗೂ ಕಾಲೇಜು ಉಪನ್ಯಾಸಕಿ ಮಹಾದೇವಿ ಅವರು ಮಗನ ಕ್ರೀಡಾಸಕ್ತಿಗೆ ಪ್ರೋತ್ಸಾಹದ ಹುಮ್ಮಸ್ಸು ತುಂಬುತ್ತಿದ್ದಾರೆ.
ಸೆಪ್ಟೆಂಬರ್ 4ರಂದು ಜಿಲ್ಲಾ ಪಂಚಾಯಿತಿ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಡೆದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ಭಾಗವಹಿಸಿ 50, 100 ಮತ್ತು 200 ಮೀಟರ್ಸ್ ಬ್ರೆಸ್ಟ್‌ಸ್ಟ್ರೋಕ್ ವಿಭಾಗಗಳಲ್ಲಿ ಮೊದಲ ಸ್ಥಾನ ಗಳಿಸಿ ಬಸವಪ್ರಸಾದ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ರಾಜ್ಯಮಟ್ಟದ ಸ್ಪರ್ಧೆಗಳ ದಿನಾಂಕ ಇನ್ನೂ ಪ್ರಕಟವಾಗಿಲ್ಲ.
‘ಬೆಂಗಳೂರಿನಲ್ಲಿ ಇದೇ 22 ಹಾಗೂ 23ರಂದು ನಡೆಯಲಿರುವ ಓಪನ್ ವಾಟರ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಜಿಲ್ಲೆಯನ್ನು ಪ್ರತಿನಿಧಿಸುವ ಆಸೆಯಿದೆ. ಅದಕ್ಕಾಗಿ ಪ್ರತಿದಿನ ಐದು ಕಿ.ಮೀ. ಈಜಿ ತಯಾರಿ ನಡೆಸುತ್ತಿದ್ದೇನೆ’ ಎಂದು ಬಸವಪ್ರಸಾದ ಹೇಳಿದರು.
‘ಕಲಬುರಗಿಗೆ ಉತ್ತಮ ಅರ್ಹತೆಯುಳ್ಳ ತರಬೇತುದಾರರು ಬಂದರೆ ಇನ್ನೂ ಹೆಚ್ಚಿನ ಸಾಧನೆ ನನ್ನಿಂದ ಸಾಧ್ಯವಾಗುತ್ತದೆ’ ಎನ್ನುತ್ತಾರೆ ಅವರು.
15 ವರ್ಷದ ಬಸವಪ್ರಸಾದ ಅವರಿಗೆ ಸುಮಾರು 5 ವರ್ಷದವನಿದ್ದಾಗಲೇ ಈಜು ಕುರಿತು ಆಸಕ್ತಿ ಮೊಳಕೆಯೊಡೆದಿತ್ತು. ಆಗಿನಿಂದ ಉತ್ಸಾಹದಿಂದ ಕಲಿಕೆಯಲ್ಲಿ ತೊಡಗಿಸಿಕೊಂಡರು.
‘ಯೂಟ್ಯೂಬ್ ವಿಡಿಯೊಗಳನ್ನು ನೋಡಿ ನಮ್ಮ ಮಗ ಹೆಚ್ಚು ಕಲಿಯುತ್ತಾನೆ. ಸ್ವಯಂ ಕಲಿಕೆಯಿಂದಲೇ ಬಹಳಷ್ಟು ತಂತ್ರಗಳನ್ನು ತಿಳಿದುಕೊಂಡಿದ್ದಾನೆ’ ಎಂದು ಜಗದೀಶ ಪಾಟೀಲ ಹೇಳುತ್ತಾರೆ.
‘ಶರಣಬಸವೇಶ್ವರ ಪಬ್ಲಿಕ್ ಶಾಲೆಯ ಪ್ರಾಚಾರ್ಯರು ಮತ್ತು ಚೇರ್‌ಪರ್ಸನ್ ದಾಕ್ಷಾಯಣಿ ಅಪ್ಪ ಅವರು ಮಗನಿಗೆ ಬೆಂಬಲವಾಗಿದ್ದಾರೆ’ ಎಂದರು.
ಬೆಳಿಗ್ಗೆ 6 ಗಂಟೆಯಿಂದ 8.30ರವರೆಗೆ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದ ಈಜುಕೊಳದಲ್ಲಿ ಬಸವಪ್ರಸಾದ ತಾಲೀಮು ನಡೆಸುತ್ತಾರೆ. ಕೋಚ್‌ಗಳಾದ ಮಚ್ಚೇಂದ್ರ ಸಿಂಗ್ ಠಾಕೂರ್ ಹಾಗೂ ರೇಣುಕಾ ಅವರ ತರಬೇತಿಯಡಿ ಪಳಗುತ್ತಿದ್ದಾರೆ.
ತಂದೆ–ತಾಯಿ ನನ್ನ ಸಾಧನೆಯ ಕನಸಿಗೆ ನೀರೆರೆಯುತ್ತಿದ್ದಾರೆ. ಒಲಿಂಪಿಕ್ಸ್‌ನಲ್ಲಿ ದೇಶಕ್ಕಾಗಿ ಚಿನ್ನ ಗೆಲ್ಲುವುದು ನನ್ನ ಮಹದಾಸೆಬಸವಪ್ರಸಾದ ಈಜು ಸ್ಪರ್ಧಿ
17 ವರ್ಷದೊಳಗಿನವರ ವಿಭಾಗದಲ್ಲಿ ಸ್ಪರ್ಧಿಸುವ ಬಸವಪ್ರಸಾದನಿಗೆ ಉಜ್ವಲ ಭವಿಷ್ಯವಿದೆ. ಬ್ರೆಸ್ಟ್‌ಸ್ಟ್ರೋಕ್ ವಿಭಾಗದಲ್ಲಿ ಉತ್ತಮ ತಂತ್ರಗಳನ್ನು ಅರಿತಿದ್ದಾನೆಮಚ್ಚೇಂದ್ರ ಸಿಂಗ್ ಠಾಕೂರ್ ಈಜು ಕೋಚ್
* 2023–24ನೇ ಸಾಲಿನಲ್ಲಿ ಶಾಲಾ ಶಿಕ್ಷಣ ಇಲಾಖೆಯ ರಾಜ್ಯಮಟ್ಟದ ಶಾಲಾಮಕ್ಕಳ ಕ್ರೀಡಾಕೂಟದ 50 ಮೀ. ಬ್ರೆಸ್ಟ್‌ಸ್ಟ್ರೋಕ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ
* ಈ ವರ್ಷದ ಜನವರಿ 3ರಿಂದ 10ರವರೆಗೆ ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಸ್ಕೂಲ್ ಗೇಮ್ಸ್‌ನಲ್ಲಿ ಭಾಗವಹಿಸುವಿಕೆ
*2022–23ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಜಿಲ್ಲಾಮಟ್ಟದ ಕ್ರೀಡಾಕೂಟದ 50 ಮತ್ತು 100 ಮೀ. ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಮೊದಲ ಸ್ಥಾನ.
* 2022–23ನೇ ಸಾಲಿನ ಜಿಲ್ಲಾಮಟ್ಟದ ದಸರಾ ಕೂಟದ 200 ಮೀ. ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಪ್ರಥಮ ಸ್ಥಾನ
* 2023–24ನೇ ಸಾಲಿನ 200 ಮೀಟರ್‌ನಲ್ಲಿ ಪ್ರಥಮ 100 ಮೀ.ನಲ್ಲಿ ದ್ವಿತೀಯ.
*2023ರ ಅಕ್ಟೋಬರ್‌ನಲ್ಲಿ ನಡೆದ ಕಲಬುರಗಿ ವಿಭಾಗಮಟ್ಟದ ದಸರಾ ಕೂಟದ 200 ಮೀ.ನಲ್ಲಿ ಪ್ರಥಮ ಮತ್ತು 100 ಮೀ.ನಲ್ಲಿ ದ್ವಿತೀಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.