ಮನಿಲಾ: ಕೇವಲ ಎರಡು ಪಾಯಿಂಟ್‌ಗಳಿಂದ ಅಮೆರಿಕಕ್ಕೆ ಆಘಾತ ನೀಡಿದ ಜರ್ಮನಿ ತಂಡದವರು ವಿಶ್ವಕಪ್ ಬ್ಯಾಸ್ಕೆಟ್‌ಬಾಲ್ ಟೂರ್ನಿಯ ಫೈನಲ್ ತಲುಪಿದರು. ಜರ್ಮನಿ ಶುಕ್ರವಾರ ಸೆಮಿಫೈನಲ್‌ನಲ್ಲಿ 113–111ರಿಂದ ಅಚ್ಚರಿಯ ಜಯಗಳಿಸಿತು.
ಜರ್ಮನಿ ಭಾನುವಾರ ನಡೆಯುವ ಫೈನಲ್‌ನಲ್ಲಿ ಸರ್ಬಿಯಾವನ್ನು ಎದುರಿಸಲಿದೆ. ತೀವ್ರ ಹಣಾಹಣಿಯ ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಎದುರಾಳಿಯ ವಿರುದ್ಧ ಜರ್ಮನಿ ತಂಡ ಸಮಬಲದ ಹೋರಾಟ ನಡೆಸಿ ಕೊನೆಗೆ ಮುನ್ನಡೆ ಪಡೆಯಿತು. ಜರ್ಮನಿ ಫೈನಲ್ ಪ್ರವೇಶಿಸಿದ್ದು ಇದೇ ಮೊದಲು.
ಸತತ ಎರಡನೇ ಬಾರಿ ಅಮೆರಿಕ ವಿಶ್ವಕಪ್ ಫೈನಲ್ ತಲುಪಲು ವಿಫಲವಾಯಿತು. 2019 ಟೂರ್ನಿಯಲ್ಲಿ ಅಮೆರಿಕ ಏಳನೇ ಸ್ಥಾನ ಗಳಿಸಿತ್ತು.
ಅಮೆರಿಕ ಪಾಲಿಗೆ ಮುಳ್ಳಾದ ಆಂಡ್ರಿಯಾಸ್ ಒಬ್ಸ್ಟ್ 24 ಪಾಯಿಂಟ್ಸ್ ಕಲೆಹಾಕಿ ಜರ್ಮನಿಯ ವಿಜಯಕ್ಕೆ ಕಾರಣರಾದರು. ಫ್ರಾಂಜ್ ವಾಗ್ನರ್ (22 ಪಾಯಿಂಟ್) ಮತ್ತು ಡೇನಿಯಲ್ ಥೀಸ್ (21 ಪಾಯಿಂಟ್) ಅವರ ಕಾಣಿಕೆಯೂ ಗಮನಾರ್ಹವೇ ಆಗಿತ್ತು.
ಇದಕ್ಕೆ ಮೊದಲು ಸರ್ಬಿಯಾ ಇನ್ನೊಂದು ಸೆಮಿಫೈನ್‌ನಲ್ಲಿ ಕೆನಡಾ ತಂಡವನ್ನು 95–86 ಪಾಯಿಂಟ್‌ಗಳಿಂದ ಸೋಲಿಸಿತು. ಬೊಗ್ಡನ್ ಬೊಗ್ಡಾನೊವಿಕ್ ಅವರು ಮತ್ತೊಮ್ಮೆ ಸರ್ಬಿಯಾದ ಪರ ಅತ್ಯಮೋಘ ಪ್ರದರ್ಶನ ನೀಡಿ 23 ಪಾಯಿಂಟ್ಸ್ ಕಲೆಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.