ADVERTISEMENT

ಬ್ಯಾಸ್ಕೆಟ್‌ಬಾಲ್‌ ಟೂರ್ನಿ: ಎನ್‌ಐಟಿಕೆ, ನಿಟ್ಟೆ ಕ್ಯಾಂಪಸ್ ಜಯಭೇರಿ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2024, 16:28 IST
Last Updated 23 ಅಕ್ಟೋಬರ್ 2024, 16:28 IST
<div class="paragraphs"><p>ಕಾಲೇಜು ವಿಭಾಗದ ಪಂದ್ಯದಲ್ಲಿ ಎನ್‌ಐಟಿಕೆಯ ಸ್ವರಾಜ್ ಪಾಂಡೆ ಮುನ್ನಡೆಯನ್ನು ತಡೆಯಲು ಸೇಂಟ್ ಅಲೋಶಿಯಸ್‌ ತಂಡದ ಆಟಗಾರರು ಪ್ರಯತ್ನಿಸಿದರು</p></div>

ಕಾಲೇಜು ವಿಭಾಗದ ಪಂದ್ಯದಲ್ಲಿ ಎನ್‌ಐಟಿಕೆಯ ಸ್ವರಾಜ್ ಪಾಂಡೆ ಮುನ್ನಡೆಯನ್ನು ತಡೆಯಲು ಸೇಂಟ್ ಅಲೋಶಿಯಸ್‌ ತಂಡದ ಆಟಗಾರರು ಪ್ರಯತ್ನಿಸಿದರು

   

ಪ್ರಜಾವಾಣಿ ಚಿತ್ರ :ಫಕ್ರುದ್ದೀನ್ ಎಚ್

ಮಂಗಳೂರು: ಸುರತ್ಕಲ್‌ನ ಎನ್‌ಐಟಿಕೆ ಮತ್ತು ಕಾರ್ಕಳದ ನಿಟ್ಟೆ ಕ್ಯಾಂಪಸ್ ತಂಡದವರು ಬುಧವಾರ ಆರಂಭಗೊಂಡ ಜೇಮ್ಸ್ ನೈಸ್ಮಿತ್ ಕಪ್ ಬ್ಯಾಸ್ಕೆಟ್‌ಬಾಲ್ ಟೂರ್ನಿಯಲ್ಲಿ ಭರ್ಜರಿ ಜಯ ಸಾಧಿಸಿದರು.

ADVERTISEMENT

ದಕ್ಷಿಣ ಕನ್ನಡ ಜಿಲ್ಲಾ ಬ್ಯಾಸ್ಕೆಟ್‌ಬಾಲ್ ಸಂಸ್ಥೆಯ ಸಹಯೋಗದಲ್ಲಿ ಮಂಗಳೂರು ಬ್ಯಾಸ್ಕೆಟ್‌ಬಾಲ್ ಕ್ಲಬ್‌ ನಗರದ ಯು.ಎಸ್‌.ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಟೂರ್ನಿಯ ಕಾಲೇಜು ಪುರುಷರ ವಿಭಾಗದಲ್ಲಿ ಎನ್‌ಐಟಿಕೆ 43–33ರ ಅಂತದಲ್ಲಿ ನಗರದ ಸೇಂಟ್ ಅಲೋಶಿಯಸ್ ಪದವಿ ಕಾಲೇಜು ತಂಡವನ್ನು ಮಣಿಸಿತು.

ಕಾಲೇಜು ಮಹಿಳೆಯರ ವಿಭಾಗದಲ್ಲಿ ನಿಟ್ಟೆ ಕ್ಯಾಂಪಸ್ ತಂಡ ನಗರದ ಸೇಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜು ವಿರುದ್ಧ 42–23ರ ಗೆಲುವು ಸಾಧಿಸಿತು. ಮತ್ತೊಂದು ಪಂದ್ಯದಲ್ಲಿ ಮಣಿಪಾಲ್ ಕಾಲೇಜು ವಿರುದ್ಧ ಸೇಂಟ್ ಅಲೋಶಿಯಸ್ ಪಿಯು ಕಾಲೇಜು 32–24ರಲ್ಲಿ ಗೆದ್ದಿತು.

ಪುರುಷರ ವಿಭಾಗದ ಮೊದಲ ಪಂದ್ಯ ಜಿದ್ದಾಜಿದ್ದಿಯಿಂದ ಕೂಡಿತ್ತು. ಮೊದಲಾರ್ಧದ ಮುಕ್ತಾಯಕ್ಕೆ ಸೇಂಟ್ ಅಲೋಶಿಯಸ್ ತಂಡ ಕೇವಲ ಎರಡು ಪಾಯಿಂಟ್‌ಗಳ ಹಿನ್ನಡೆಯಲ್ಲಿತ್ತು. ದ್ವಿತೀಯಾರ್ಧದಲ್ಲೂ ತಂಡ ಪಟ್ಟು ಬಿಡದೆ ಆಡಿತು. ಆದರೆ ತಲಾ 12 ಪಾಯಿಂಟ್ ಕಲೆ ಹಾಕಿದ ಸುಜನ್ ಮತ್ತು ರಿಷಿತ್ ಅವರ ಭರ್ಜರಿ ಆಟ ಎನ್ಐಟಿಕೆಯ ಕೈ ಹಿಡಿಯಿತು. ಮಹಿಳೆಯರ ವಿಭಾಗದ ಮೊದಲ ಪಂದ್ಯದಲ್ಲಿ ಹರ್ಷಿತಾ, ಹೊನ್ನುಶ್ರೀ ಮತ್ತು ಹಂಸ ಮಿಂಚಿದರು. ಹರ್ಷಿತಾ 18 ಪಾಯಿಂಟ್ ಗಳಿಸಿದರೆ ಹೊನ್ನುಶ್ರೀ ಮತ್ತು ಹಂಸ ಕ್ರಮವಾಗಿ 10 ಪಾಯಿಂಟ್ ಗಳಿಸಿದರು. ಸೇಂಟ್ ಜೋಸೆಫ್ ತಂಡದ ವೋಲ್ಗಾ ಏಕಾಂಗಿ ಹೋರಾಟ ನಡೆಸಿ 17 ಪಾಯಿಂಟ್‌ ಕಬಳಿಸಿದರು.

ಮಣಿಪಾಲ ಕಾಲೇಜು ಎದುರಿನ ಪಂದ್ಯದಲ್ಲಿ ಸೇಂಟ್ ಅಲೋಶಿಯಸ್ ಪಿಯು ಕಾಲೇಜಿನ ವೈಷ್ಣವಿ 18 ಮತ್ತು ಮೈಥಿಲಿ 11 ಪಾಯಿಂಟ್ ಕಲೆ ಹಾಕಿದರು.

ಮೌಂಟ್‌ ಕಾರ್ಮೆಲ್‌ಗೆ ಭರ್ಜರಿ ಜಯ

ಹೈಸ್ಕೂಲ್‌ ಬಾಲಕಿಯರ ವಿಭಾಗದಲ್ಲಿ ಮೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲ್ ತಂಡ 33–2ರಲ್ಲಿ ಪ್ರೆಸಿಡೆ‌ನ್ಸಿ ಸ್ಕೂಲ್ ವಿರುದ್ಧ ಜಯಿಸಿತು. ಧ್ವನಿ ಮತ್ತು ವಿಯೋಲ ಕ್ರಮವಾಗಿ 10 ಹಾಗೂ 8 ಪಾಯಿಂಟ್ ಗಳಿಸಿದರು. ಮತ್ತೊಂದು ಪಂದ್ಯದಲ್ಲಿ ಕಾರ್ಮಲ್ ಶಾಲೆ ಮಣಿಪಾಲ್ ಶಾಲೆ ವಿರುದ್ಧ 11–2ರಲ್ಲಿ ಜಯಿಸಿತು. ಲೂರ್ದ್‌ ಸೆಂಟ್ರಲ್ ಸ್ಕೂಲ್ 7–5ರಲ್ಲಿ ನಿಟ್ಟೆ ಸ್ಕೂಲ್ ಎದುರು, ಸೇಂಟ್ ತೆರೆಸಾ ಸ್ಕೂಲ್ 8–5ರಲ್ಲಿ  ಕೇಂಬ್ರಿಜ್ ಸ್ಕೂಲ್ ವಿರುದ್ಧ,

ಬಾಲಕರ ವಿಭಾಗದಲ್ಲಿ ಸೇಂಟ್ ಅಲೋಶಿಯಸ್ 17–15ರಲ್ಲಿ ಪ್ರೆಸಿಡೆ‌ನ್ಸಿ ವಿರುದ್ಧ, ಮೌಂಟ್ ಕಾರ್ಮೆಲ್ 12–9ರಲ್ಲಿ ಸೇಂಟ್ ತೆರೆಸಾ ವಿರುದ್ಧ, ಪ್ರೆಸಿಡೆ‌ನ್ಸಿ 12–7ರಲ್ಲಿ ಶಾರದಾ ವಿದ್ಯಾಲಯ ವಿರುದ್ಧ, ಸೇಂಟ್ ಅಲೋಶಿಯಸ್ ಗೊಂಜಾಗ 10–8ರಲ್ಲಿ ಕೇಂಬ್ರಿಜ್ ವಿರುದ್ಧ, ಮಣಿಪಾಲ್ ಸ್ಕೂಲ್ 12–5ರಲ್ಲಿ ಸೇಂಟ್ ಅಲೋಶಿಯಸ್ ವಿರುದ್ಧ, ಲೂರ್ದ್ ಸೆಂಟ್ರಲ್‌ ಸ್ಕೂಲ್ 27–5ರಲ್ಲಿ ಕೇಂಬ್ರಿಜ್ ವಿರುದ್ಧ ಗೆದ್ದಿತು.  

ಸೇಂಟ್ ಅಲೋಶಿಯಸ್ ತಂಡದ ವಿರುದ್ಧ ಪಾಯಿಂಟ್ ಗಳಿಸಲು ಪ್ರಯತ್ನಿಸಿದ ಎನ್‌ಐಟಿಕೆ ಕಾಲೇಜು ತಂಡದ ಆಟಗಾರ ಪ್ರಜಾವಾಣಿ ಚಿತ್ರ :ಫಕ್ರುದ್ದೀನ್ ಎಚ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.