ಬೀಜಿಂಗ್: ಕೋವಿಡ್ ಬಿಕ್ಕಟ್ಟು ಹಾಗೂ ಕೆಲವು ದೇಶಗಳಿಂದ ಬಹಿಷ್ಕಾರ ಎದುರಿಸುತ್ತಿರುವ ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್ ಆಯೋಜಕರಿಗೆ ಈಗ ಎಲ್ಲ ಅಥ್ಲೀಟ್‌ಗಳನ್ನು ಕರೆತರುವ ಸವಾಲು ಎದುರಾಗಿದೆ.
ಕೂಟದಲ್ಲಿ ಭಾಗವಹಿಸುವ ಎಲ್ಲ ಅಥ್ಲೀಟ್‌ಗಳು ಹಾಗೂ ಅಧಿಕಾರಿಗಳನ್ನು ಕರೆತರಲು ವಿಮಾನಗಳ ವ್ಯವಸ್ಥೆ ಮಾಡಬೇಕಿದೆ.
ಕೋವಿಡ್-19 ಕಾರಣದಿಂದಾಗಿ ನಿಯಮಿತ ಪ್ರಯಾಣಿಕ ವಿಮಾನಗಳ ಕಡಿತದಿಂದಾಗಿ ಭಾಗವಹಿಸುವವರ ಸುಗಮ ಆಗಮನವನ್ನು ಖಚಿತಪಡಿಸಿಕೊಳ್ಳುವುದು ‘ಎಲ್ಲರ ಕಾಳಜಿಯಾಗಿದೆ‘ ಎಂದು ಒಲಿಂಪಿಕ್ಸ್ ಆಯೋಜನಾ ಸಮಿತಿಯ ಆಗಮನ ಮತ್ತು ನಿರ್ಗಮನ ಕೇಂದ್ರದ ನಿರ್ದೇಶಕ ಜಾಂಗ್ ಲಿಯಾಂಗ್ ಶುಕ್ರವಾರ ಹೇಳಿದ್ದಾರೆ.
‘ವಿಶೇಷ ಮತ್ತು ತಾತ್ಕಾಲಿಕ ವಿಮಾನಗಳು, ಕ್ರೀಡಾಪಟುಗಳನ್ನು ಕರೆತರಲಿವೆ. ಕೆಲವು ವಾಣಿಜ್ಯಿಕ ವಿಮಾನಗಳನ್ನೂ ಬಳಸಿಕೊಳ್ಳಲಾಗುವುದು‘ ಎಂದು ಮಾಧ್ಯಮಗಳಿಗೆ ಜಾಂಗ್ ಹೇಳಿದ್ದಾರೆ.
‘ದೇಶೀಯ ಮತ್ತು ವಿದೇಶದ 17 ಸಂಸ್ಥೆಗಳು ತಾತ್ಕಾಲಿಕ ವಿಮಾನಗಳನ್ನು ಒದಗಿಸಲು ಸಹಿ ಹಾಕಿವೆ‘ ಎಂದಿದ್ದಾರೆ.
ಚೀನಾ ವಾಯುವ್ಯ ಭಾಗದ ಕ್ಸಿನ್‌ಝಿಯಾಂಗ್ ಪ್ರಾಂತ್ಯದಲ್ಲಿ ಉಯಿಘರ್ ಅಲ್ಪಸಂಖ್ಯಾತ ಸಮುದಾಯದ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಮಾನವ ಹಕ್ಕು ಸಂಘಟನೆಗಳು ಚಳಿಗಾಲದ ಒಲಿಂಪಿಕ್ಸ್‌ಗೆ ಪೂರ್ಣ ಪ್ರಮಾಣದಲ್ಲಿ ಬಹಿಷ್ಕಾರ ಹಾಕುವಂತೆ ಕರೆ ನೀಡಿವೆ. ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾ ಹಾಗೂ ಕೆನಡಾ ಈಗಾಗಲೇ ಕ್ರೀಡಾಕೂಟಕ್ಕೆ ರಾಜತಾಂತ್ರಿಕ ಬಹಿಷ್ಕಾರ ಹಾಕಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.